ವಿಶ್ವದರ್ಜೆ ರೈಲು ನಿಲ್ದಾಣ ನಿರ್ಮಾಣ

7

ವಿಶ್ವದರ್ಜೆ ರೈಲು ನಿಲ್ದಾಣ ನಿರ್ಮಾಣ

Published:
Updated:

ಬೆಂಗಳೂರು: ನಗರದ ಬಯ್ಯಪ್ಪನಹಳ್ಳಿಯಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ 50 ಎಕರೆ ಭೂಮಿ ನೀಡಲು ಮುಂದಾಗಿದೆ.

ಹೀಗಾಗಿ ಬಯ್ಯಪ್ಪನ ಹಳ್ಳಿಯಲ್ಲಿ ವಿಶ್ವದರ್ಜೆಯ ರೈಲುನಿಲ್ದಾಣ ನಿರ್ಮಾಣದ ಕೇಂದ್ರದ ಚಿಂತನೆಗೆ ರಾಜ್ಯ ಕೈಗೂಡಿಸಲಿದ್ದು, ಬೆಂಗಳೂರಿನಲ್ಲಿ ಇಂತಹ ಒಂದು ರೈಲು ನಿಲ್ದಾಣ ಸ್ಥಾಪನೆಯಾಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ತಿಳಿಸಿದರು.ರಾಜ್ಯಕ್ಕೆ ಸಂಬಂಧಪಟ್ಟ ರೈಲ್ವೆ ಯೋಜನೆಗಳ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ರಾಜ್ಯದ ರೈಲ್ವೆ ಯೋಜನೆಗಳ ಖರ್ಚಿನಲ್ಲಿ ಅರ್ಧದಷ್ಟನ್ನು ಭರಿಸಲು ರಾಜ್ಯ ಸರ್ಕಾರ ಮುಂದೆ ಬಂದಿದೆ ಎಂದು ಅವರು ಪ್ರಶಂಸಿಸಿದರು.ನಗರದ ಯಶವಂತಪುರ ರೈಲು ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾದ ಸೌಲಭ್ಯ ಕೇಂದ್ರ ಮತ್ತು ವಿಶ್ರಾಂತಿ ಕೊಠಡಿಗಳನ್ನು ಭಾನುವಾರ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರು-ಕಾರವಾರ ನಡುವೆ ನೇರ ರೈಲು ಸಂಚಾರವನ್ನು ಮಂಗಳೂರು ಮಾರ್ಗದ ಮೂಲಕ ಆರಂಭಿಸುವ ಕುರಿತು ರೈಲ್ವೆ ಇಲಾಖೆ ಗಂಭೀರವಾಗಿ ಚಿಂತನೆ ನಡೆಸಿದೆ ಎಂದರು. ‘ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೈಲು ನಿಲ್ದಾಣಗಳ ನಡುವೆ ಸುಗಮ ರೈಲು ಸಂಚಾರಕ್ಕಾಗಿ ‘ರೈಲ್ವೆ ಸೈಡಿಂಗ್’ ನಿರ್ಮಿಸುವ ಕುರಿತು ಚಿಂತನೆ ನಡೆದಿದೆ. ಅದು ನಿರ್ಮಾಣವಾದ ನಂತರ ಬೆಂಗಳೂರು-ಮಂಗಳೂರು ರೈಲು ಸಂಚಾರವನ್ನು ಕಾರವಾರಕ್ಕೆ ವಿಸ್ತರಿಸಲಾಗುವುದು’ ಎಂದು ಮಾಹಿತಿ ನೀಡಿದರು.ಹುಬ್ಬಳ್ಳಿ-ಅಂಕೋಲಾ, ತಾಳಗುಪ್ಪ-ಹೊನ್ನಾವರ ಮತ್ತು ಚಾಮರಾಜನಗರ-ಮೆಟ್ಟುಪಾಳ್ಯ ರೈಲು ಮಾರ್ಗ ನಿರ್ಮಿಸಲು ಇಲಾಖೆ ಉತ್ಸುಕವಾಗಿದೆ. ಆದರೆ ಈ ಮಾರ್ಗಗಳಿಗೆ ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ದೊರೆಯಬೇಕಿದೆ ಎಂದು ತಿಳಿಸಿದರು.‘ದೆಹಲಿ ಮೆಟ್ರೊ ರೈಲು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಇ. ಶ್ರೀಧರನ್ ಅವರು ಈ ಮೂರು ರೈಲು ಮಾರ್ಗಗಳಿಂದ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಇನ್ನು ಮೂರು ತಿಂಗಳಿನಲ್ಲಿ ವರದಿ ತಯಾರಿಸಲಿದ್ದಾರೆ. ಅದನ್ನು ಕೇಂದ್ರ ಪರಿಸರ ಇಲಾಖೆಗೆ ನೀಡಲಾಗುವುದು’ ಎಂದು ಮುನಿಯಪ್ಪ ಹೇಳಿದರು.ಒಂದು ಲಕ್ಷ ರೂ. ಬಹುಮಾನ: ‘ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕೆಲಸವನ್ನು ಬೆಂಗಳೂರು ದಂಡು ವಿಮಾನ ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣದ ಅಧಿಕಾರಿಗಳು ಅಚ್ಚುಕಟ್ಟಾಗಿ ಮಾಡಿದ್ದಾರೆ. ಹಾಗಾಗಿ ಎರಡೂ ರೈಲು ನಿಲ್ದಾಣಗಳಿಗೆ ತಲಾ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು’ ಎಂದು ಮುನಿಯಪ್ಪ ಅವರು ಘೋಷಿಸಿದರು.‘ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಯಶವಂತಪುರ ರೈಲು ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿಗಳು, ಡಾರ್ಮೆಟರಿ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇನ್ನೂ ಎರಡು ಕೋಟಿ ರೂಪಾಯಿ ವೆಚ್ಚ ಮಾಡಿ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವುದು. ಇನ್ನು ಒಂದೂವರೆ ವರ್ಷದೊಳಗೆ ಇದರ ಕೆಲಸ ಪೂರ್ಣಗೊಳ್ಳಲಿದೆ’ ಎಂದರು.

ಸಂಸದ ಪಿ.ಸಿ. ಮೋಹನ್, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಂ.ಮಣಿ ಮತ್ತಿತರರು ಉಪಸ್ಥಿತರಿದ್ದರು.

ದಂಡು ರೈಲು ನಿಲ್ದಾಣ ಮೇಲ್ದರ್ಜೆಗೆ

 ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾದ ನಗರದ ದಂಡು (ಕಂಟೋನ್ಮೆಂಟ್) ರೈಲು ನಿಲ್ದಾಣದ ಟಿಕೆಟ್ ಕೌಂಟರನ್ನು ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಭಾನುವಾರ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ‘ನಗರ ರೈಲು ನಿಲ್ದಾಣದ ಮೇಲಿನ ಒತ್ತಡವನ್ನು ತಗ್ಗಿಸಲು ಹಾಗೂ ಈ ನಿಲ್ದಾಣದ ಸುತ್ತಮುತ್ತ ಇರುವ ಜನರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವ ಉದ್ದೇಶದಿಂದ ದಂಡು ರೈಲು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗಿದೆ’ ಎಂದರು.‘ಅಂಗವಿಕಲರಿಗಾಗಿ ಪ್ರತ್ಯೇಕ ಕೌಂಟರ್ ಸೇರಿದಂತೆ ಒಟ್ಟು ಐದು ಟಿಕೆಟ್ ಕೌಂಟರ್‌ಗಳನ್ನು ತೆರೆಯಲಾಗಿದೆ. ಪ್ರಯಾಣಿಕರ ವಸ್ತುಗಳನ್ನು ಇಟ್ಟುಕೊಳ್ಳಲು ಕ್ಲಾಕ್ ರೂಮ್ ಹಾಗೂ ಇತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.ಸಂಸದ ಪಿ.ಸಿ. ಮೋಹನ್ ಮಾತನಾಡಿ, ‘ಲಕ್ಷಾಂತರ ಜನರು ಬಳಸುವ ನಗರ ರೈಲು ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry