ಭಾನುವಾರ, ಮೇ 16, 2021
22 °C

ವಿಶ್ವದಾದ್ಯಂತ ಶೇ 60ರಷ್ಟು ಸೀಸ ಉತ್ಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೀಸದ  ಪುನರ್ ಬಳಕೆ ಮಾಡುವ 29 ಕಾರ್ಖಾನೆಗಳಿಗೆ ಪರವಾನಗಿಯನ್ನು ನೀಡಿದೆ. ಈ ಕಾರ್ಖಾನೆಗಳು 1.7 ಲಕ್ಷ ಮೆಟ್ರಿಕ್ ಟನ್ ಸೀಸವನ್ನು ಪ್ರತಿ ವರ್ಷ ಮರುಬಳಕೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ~ ಎಂದು  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಹೇಳಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೋಮವಾರ ಆಯೋಜಿಸಿದ್ದ 2010ರ ಬ್ಯಾಟರಿ ಕಾಯ್ದೆ ಹಾಗೂ 2008ರ ಅಪಾಯಕಾರಿ ತ್ಯಾಜ್ಯ ಕಾಯ್ದೆ ಕುರಿತ ಕಾರ್ಯಗಾರಉದ್ಘಾಟಿಸಿ ಮಾತನಾಡಿದರು.`ನಮ್ಮ ದೇಶದಲ್ಲಿ ಸೀಸದ ಪುನರ್‌ಬಳಕೆಯನ್ನು ಕೆಲವು ಕಾರ್ಖಾನೆಗಳು ಮಾತ್ರ ವ್ಯವಸ್ಥಿತವಾಗಿ ಮಾಡುತ್ತಿವೆ. ಇನ್ನೂ ಕೆಲವು ಕಾರ್ಖಾನೆಗಳು ವ್ಯವಸ್ಥಿತವಾಗಿ ಮಾಡುತ್ತಿಲ್ಲ. ಈ ಕಾರ್ಖಾನೆಗಳಿಂದ ಪರಿಸರ ಹಾಳಾಗುತ್ತಿದೆ. ಅಲ್ಲದೆ ಅಲ್ಲಿ ಕೆಲಸ ಮಾಡುವವರ ಆರೋಗ್ಯದ ಮೇಲೆ ದುಷ್ಟರಿಣಾಮವೂ ಉಂಟಾಗುತ್ತಿದೆೆ~ ಎಂದು ವಿವರಿಸಿದರು.`ಇಂದಿನ ದಿನಗಳಲ್ಲಿ ವಿದ್ಯುತ್ ಅಭಾವ ಇರುವುದರಿಂದ ಹೆಚ್ಚಿನ ಜನರು ಸೀಸಯುಕ್ತ ಆಸಿಡ್ ಬ್ಯಾಟರಿಗಳನ್ನು ಉಪಯೋಗಿಸುತ್ತಾರೆ. ಈ ಸೀಸಯುಕ್ತ ಆಸಿಡ್ ಬ್ಯಾಟರಿಗಳನ್ನು ಮನೆಗಳಲ್ಲಿ ಮಾತ್ರವಲ್ಲದೆ, ಕಾರು, ಲಾರಿ, ಬಸ್ಸು, ದೋಣಿಗಳು, ರೈಲುಗಳು ಹೀಗೆ ಮುಂತಾದ ಕಡೆ ಬಳಸುತ್ತಾರೆ~ ಎಂದು ವಿವರಣೆ ನೀಡಿದರು.`2011 ರಲ್ಲಿ ಪ್ರಪಂಚದಾದ್ಯಂತ 4,54,000 ಟನ್ ಸೀಸವನ್ನು ಗಣಿಗಳಿಂದ ಹೊರತೆಗೆಯಲಾಗಿದೆ. ಇದರಲ್ಲಿ ಭಾರತದ ಭಾಗ ಕೇವಲ ಶೇ 1 ರಷ್ಟು ಮಾತ್ರ. ಭಾರತದಲ್ಲಿ 2/3 ಭಾಗದಷ್ಟು ಸೀಸವನ್ನು ಗಣಿಗಾರಿಕೆ ಮೂಲಕ ಹೊರತೆಗೆಯಲಾಗುತ್ತದೆ.ಪ್ರಪಂಚದಾದ್ಯಂತ ಶೇ 60 ರಷ್ಟು ಸೀಸವನ್ನು ಮರುಬಳಕೆ ಮಾಡುವ ವಿಧಾನದಿಂದ ಪಡೆಯಲಾಗುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ, 1997-2000 ರಲ್ಲಿ ಶೇ 5 ರಷ್ಟು ಸೀಸವನ್ನು ಗಣಿಗಳ ಮೂಲಕ ಪಡೆಯಲಾಗಿದೆ. ಆದರೆ, ಅದೇ ಸಮಯದಲ್ಲಿ ನಮ್ಮ ಭಾರತದಲ್ಲಿ ಸೀಸದ ಉಪಯೋಗ ಶೇ 10.5 ರಷ್ಟು ಹೆಚ್ಚಿದೆ~ ಎಂದರು.`ಬ್ಯಾಟರಿಗಳನ್ನು ಕಡ್ಡಾಯವಾಗಿ ಮರುಬಳಕೆ ಮಾಡಲೇಬೇಕು. ಇಲ್ಲದಿದ್ದರೆ, ಪರಿಸರ ಹಾಗೂ ಮಾನವನ ಮೇಲೆ ದುಷ್ಟರಿಣಾಮ ಉಂಟಾಗುತ್ತದೆ. ಈ ಎಲ್ಲ ಬ್ಯಾಟರಿಗಳಿಂದ ಸೀಸವನ್ನು ಪಡೆದು ಅದರಿಂದ `ಲೆಡ್ ಇನ್‌ಗಾರ್ಡ್ಸ್~  ತಯಾರಿಸಬಹುದು. ಈ ಲೆಡ್ ಇನ್‌ಗಾರ್ಡ್ಸ್‌ಗಳನ್ನು ಪುನಃ ಬ್ಯಾಟರಿ ತಯಾರಿಸುವ ಕಾರ್ಖಾನೆಗಳಲ್ಲಿ ಪುನರ್‌ಬಳಕೆ ಮಾಡಬೇಕು. ಲೆಡ್ ಆಸಿಡ್ ಬ್ಯಾಟರಿಗಳನ್ನು ಉಪಯೋಗಿಸಿದ ನಂತರ ಸರ್ಕಾರದ ಕಚೇರಿಗಳು, ವಾಣಿಜ್ಯ ಮಳಿಗೆಗಳು ಹಾಗೂ ಕಾರ್ಖಾನೆಯ ಮಾಲೀಕರು ನೇರವಾಗಿ ಪುನರ್‌ಬಳಕೆ ಮಾಡುವ ಕಾರ್ಖಾನೆಗಳಿಗೆ ಮಾರಾಟ ಮಾಡಬಹುದಾಗಿದೆ~ ಎಂದರು.`ಬರೀ ಸರ್ಕಾರ, ಮಂಡಳಿಯಿಂದ ಮಾತ್ರ ಆಗುವ ಕೆಲಸವಲ್ಲ. ಎಲ್ಲರೂ ಜವಾಬ್ದಾರಿಯುತವಾಗಿ ವರ್ತಿಸಿ ತಮ್ಮ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಾಗ ಮಾತ್ರ ಸೀಸದ ದುಷ್ಪರಿಣಾಮಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಸೀಸವನ್ನು ಸರಿಯಾಗಿ ಬಳಸಿದರೆ ಉಪಯುಕ್ತ ಇಲ್ಲವಾದಲ್ಲಿ ವಿಷಯುಕ್ತವಾಗಿ ಪರಿಣಮಿಸುತ್ತದೆ~ ಎಂದು ಹೇಳಿದರು.ಕಾರ್ಯಾಗಾರದಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಕಾರ್ಯದರ್ಶಿ ಕನ್ವರ್‌ಪಾಲ್, ಸಂತ ಜಾನ್ಸ್ ವೈದ್ಯಕೀಯ ಕಾಲೇಜಿನ ಡಾ.ಟಿ.ವೆಂಕಟೇಶ್ ಇತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.