ವಿಶ್ವದ ಕೆಲ ಅತಿ ದೊಡ್ಡ ಕ್ರೀಡಾಂಗಣಗಳ ವಿವರ

7

ವಿಶ್ವದ ಕೆಲ ಅತಿ ದೊಡ್ಡ ಕ್ರೀಡಾಂಗಣಗಳ ವಿವರ

Published:
Updated:

ಕ್ರೀಡಾಂಗಣವೆಂದರೆ ಒಂದು ತಂಡ ಅಥವಾ ದೇಶದ ಸಾಮರ್ಥ್ಯದ ಪ್ರದರ್ಶನ ಮಾತ್ರವಲ್ಲ. ಸೋಲು- ಗೆಲುವಿನ ಆ ಕ್ಷಣದ ಕೇವಲ ಸಾಕ್ಷಿದಾರನೂ ಅಲ್ಲ. ರೋಚಕತೆ, ಕ್ರೀಡಾ ಮನೋಭಾವ, ಉದ್ವೇಗ, ಸಂಭ್ರಮ, ಕೇಕೆ, ದುಃಖ, ಹತಾಶೆ, ಕೋಪ, ಸಾಂತ್ವಾನ ಹೀಗೆ ಮನುಷ್ಯನ ಭಾವನೆಗಳನ್ನೆಲ್ಲಾ ಅರಗಿಸಿಕೊಳ್ಳುವ ತಾಣ.

 

ಇತ್ತೀಚಿನ ದಿನಗಳಲ್ಲಿ ಆಟದ ಮೈದಾನಗಳೂ ಬಗೆಬಗೆಯಲ್ಲಿ ಅಲಂಕೃತಗೊಳ್ಳುತ್ತಿವೆ. ಲಕ್ಷಾಂತರ ಮಂದಿ ಸೇರುವ ಈ ಕ್ರೀಡಾಂಗಣಗಳ ನಿರ್ಮಾಣದ ಹಿಂದೆ ನೂರಾರು ಕಥೆಗಳಿರುತ್ತವೆ. ಸಾವಿರಾರು ಜನರ ಬೆವರಿನ ಹನಿಗಳಿರುತ್ತದೆ. ಇಲ್ಲಿರುವುದು ವಿಶ್ವದ ಕೆಲ ಅತಿ ದೊಡ್ಡ ಕ್ರೀಡಾಂಗಣಗಳ ವಿವರ.  


                                 --------------------ರಂಗ್ರಾಡೋ ಮೇ ಡೇ ಕ್ರೀಡಾಂಗಣ
ಉತ್ತರ ಕೋರಿಯಾದ ಪ್ಯಾಂಗ್‌ಯಾಂಗ್ ಪ್ರದೇಶದಲ್ಲಿರುವ ರಂಗ್ರಾಡೋ ಮೇ ಡೇ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಎಂಬ ಖ್ಯಾತಿ ಗಳಿಸಿದೆ.ಫುಟ್‌ಬಾಲ್, ಅಥ್ಲೆಟಿಕ್ಸ್, ಸಮೂಹ ಕ್ರೀಡೆಗಳು ನಡೆಯುವ ಈ ಮೈದಾನದಲ್ಲಿ ಬರೋಬ್ಬರಿ 1.50 ಲಕ್ಷ  ಕುಳಿತು ಪಂದ್ಯಾವಳಿಗಳನ್ನು ವೀಕ್ಷಿಸಬಹುದು. 2.2 ಮಿಲಿಯನ್ ಅಡಿಗಳಷ್ಟು ಹರಡಿಕೊಂಡಿರುವ ಈ ಮೈದಾನ ನಿರ್ಮಾಣವಾಗಿದ್ದು 1989ರ ಮೇ 1ರಂದು. ಟಯಾಡೊಂಗ್ ನದಿಯ ನಡುವಿನ ರಂಗ್ರಾ ಕಿರುದ್ವೀಪದಲ್ಲಿರುವ ಕಾರಣ ಇದಕ್ಕೆ ರಂಗ್ರಾಡೋ ಹೆಸರು ಬಂದಿದೆ.

 

ಕ್ರೀಡಾಂಗಣದ ಛಾವಣಿಯಲ್ಲಿ ಸುತ್ತಲೂ 16 ಕಮಾನುಗಳನ್ನು ನಿರ್ಮಿಸಲಾಗಿದೆ. ಪ್ರತಿ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಸಾಮೂಹಿಕ ಜಿಮ್ನಾಸ್ಟಿಕ್ ಹಾಗೂ ನೃತ್ಯ ಪ್ರದರ್ಶನ ಇಲ್ಲಿ ನಡೆಯುತ್ತವೆ. ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಗೂ ಅದಕ್ಕಿಂತ ದುಪ್ಪಟ್ಟು ವೀಕ್ಷಕರು ಇಲ್ಲಿ ನೆರೆದದ್ದಿದೆ. ಈ ಕ್ರೀಡಾಂಗಣ ಅಪರೂಪದ ಸಂದರ್ಭಗಳಲ್ಲಿ ಮಾತ್ರ ವಿದೇಶಿಗರ ವೀಕ್ಷಣೆಗೆ ತೆರೆದುಕೊಳ್ಳುತ್ತದೆ.ಸಾಲ್ಟ್ ಲೇಕ್ ಸ್ಟೇಡಿಯಂ
ಎರಡನೇ ಅತಿ ಹೆಚ್ಚು ಪ್ರೇಕ್ಷಕರನ್ನು ಇರಿಸಿಕೊಳ್ಳಬಹುದಾದ ಕ್ರೀಡಾಂಗಣ ಭಾರತದಲ್ಲಿರುವುದು ನಮ್ಮ ಹೆಮ್ಮೆ. ಕೋಲ್ಕತ್ತಾದ ಬಿದನ್ನಗರ್‌ನಲ್ಲಿರುವ ಸಾಲ್ಟ್ ಲೇಕ್ ಕ್ರೀಡಾಂಗಣದ ಸಾಮರ್ಥ್ಯ 1.20 ಲಕ್ಷ ಜನ.ಇದರ ಮೂಲ ಹೆಸರು ಯುವ ಭಾರತಿ ಕ್ರೀಡಾಂಗಣ. ಫುಟ್‌ಬಾಲ್ ಮತ್ತು ಅಥ್ಲೆಟಿಕ್ ಪಂದ್ಯಾವಳಿಗಳು ಇಲ್ಲಿ ನಡೆಯುತ್ತವೆ. ಕೋಲ್ಕತ್ತಾದಿಂದ ಸುಮಾರು 10 ಕಿ.ಮೀ ದೂರದಲ್ಲಿರುವ ಈ ಕ್ರೀಡಾಂಗಣ ಅಂಡಾಕಾರದಲ್ಲಿದೆ. 76.40 ಎಕರೆ ಪ್ರದೇಶದಲ್ಲಿರುವ ಈ ಮೈದಾನ ನಿರ್ಮಾಣವಾಗಿದ್ದು 1984ರಲ್ಲಿ.ಲೋಹದ ಟ್ಯೂಬ್, ಅಲ್ಯೂಮಿನಿಯಂ ಹಾಳೆ ಹಾಗೂ ಕಾಂಕ್ರೀಟ್ ಬಳಸಿ ಇದರ ಮೇಲ್ಛಾವಣಿ ನಿರ್ಮಿಸಲಾಗಿದೆ. ಅಥ್ಲೆಟಿಕ್‌ಗಳಿಗಾಗಿ ಏಕಪ್ರಕಾರದ ಸಿಂಥೆಟಿಕ್ ಟ್ರ್ಯಾಕ್‌ಗಳು, ಸುಸಜ್ಜಿತ ಉಪಕರಣಗಳು, ಎರಡು ಎಲೆಕ್ಟ್ರಾನಿಕ್ ಸ್ಕೋರ್‌ಬೋರ್ಡ್‌ಗಳು ಈ ಕ್ರೀಡಾಂಗಣದಲ್ಲಿವೆ.ರಾಷ್ಟ್ರ ಮಟ್ಟದ ಅಥ್ಲೆಟಿಕ್‌ಗಳು ಇಲ್ಲಿ ಜರಗುತ್ತವೆಯಾದರೂ ಫುಟ್‌ಬಾಲ್ ಪಂದ್ಯಾವಳಿಗಳೇ ಹೆಚ್ಚಾಗಿ ನಡೆಯುತ್ತವೆ. ಕ್ರೀಡಾಂಗಣ ಉದ್ಘಾಟನೆಯಾಗಿದ್ದು ನೆಹರೂ ಕಪ್ ಫುಟ್‌ಬಾಲ್ ಪಂದ್ಯಾವಳಿಯ ಮೂಲಕ.ಮಿಚಿಗನ್ ಕ್ರೀಡಾಂಗಣ
ಅಮೆರಿಕದ ಅನ್ ಅರ್ಬರ್‌ನಲ್ಲಿರುವ ಮಿಚಿಗನ್ ಕ್ರೀಡಾಂಗಣ ಫುಟ್‌ಬಾಲ್ ಪಂದ್ಯಾವಳಿಗೆ ಮೀಸಲಾದ ಮೈದಾನ. ಇದಕ್ಕೆ `ದಿ ಬಿಗ್ ಹೌಸ್~ ಎಂಬ ಅಡ್ಡ ಹೆಸರೂ ಇದೆ.1927ರಲ್ಲಿ 9.50 ಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣವಾದ ಈ ಕ್ರೀಡಾಂಗಣದ ಆರಂಭದ ಸಾಮರ್ಥ್ಯ 72,000ದಷ್ಟಿತ್ತು. ಇಲ್ಲಿ ನಡೆಯುವ ಪಂದ್ಯಾವಳಿಗಳಿಗೆ ಆಗಮಿಸುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದ್ದರಿಂದ ಆಸನ ವ್ಯವಸ್ಥೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಯಿತು. 1 ಲಕ್ಷ 9 ಸಾವಿರದ 901 ಪ್ರೇಕ್ಷಕರನ್ನು ಒಳಗೊಳ್ಳಬಲ್ಲ ಈ ಕ್ರೀಡಾಂಗಣದಲ್ಲಿ ಅದಕ್ಕಿಂತ ಅಧಿಕಪಟ್ಟು ಪ್ರೇಕ್ಷಕರು ಸೇರಿಕೊಳ್ಳುತ್ತಾರೆ. ಮಿಚಿಗನ್ ತಂಡದ ಪ್ರಮುಖ ಪಂದ್ಯಗಳಿಗಂತೂ  ಜನ  ಕಿಕ್ಕಿರಿದು ಬರುತ್ತಾರೆ. 2011ರ ಸೆಪ್ಟೆಂಬರ್‌ನಲ್ಲಿ 1,14,804 ಮಂದಿ ಪಂದ್ಯ ವೀಕ್ಷಿಸಿದ್ದು ದಾಖಲೆಯಾಗಿದೆ.2010ರಲ್ಲಿ 226 ಮಿಲಿಯನ್ ಡಾಲರ್ ವೆಚ್ಚದಲ್ಲಿ ಇಡೀ ಕ್ರೀಡಾಂಗಣವನ್ನು ನವೀಕರಿಸಲಾಯಿತು. ಇಲ್ಲಿ ನಡೆದಿರುವ ಹೆಚ್ಚಿನ ಪಂದ್ಯಗಳಲ್ಲಿ ಆತಿಥೇಯ ಮಿಚಿಗನ್ ತಂಡವೇ ಜಯಶಾಲಿಯಾಗಿದೆ.ಬೀವರ್ ಮೈದಾನ
ಬೀವರ್ ಕ್ರೀಡಾಂಗಣ ಕೂಡ ಫುಟ್‌ಬಾಲ್‌ಗೆ ಮೀಸಲಾಗಿರುವ ಅಮೆರಿಕದ ಮೈದಾನ. ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಆವರಣದಲ್ಲಿರುವ ಇದರ ಸಾಮರ್ಥ್ಯ 1,06,572. ಪ್ರಾಥಮಿಕ ಶಾಲೆಯೊಂದರ ಮುಂಭಾಗದಲ್ಲಿದ್ದ ವಿಶಾಲವಾದ ಹಸಿರು ಪ್ರದೇಶ ಕ್ರೀಡಾಂಗಣವಾಗಿ ರೂಪುಗೊಂಡಿದ್ದು 1893ರಲ್ಲಿ.ಪೆನ್ಸಿಲ್ವೇನಿಯಾದ ಗವರ್ನರ್ ಆಗಿದ್ದ (1887-91) ಜೇಮ್ಸ ಎ ಬೀವರ್ ಗೌರವಾರ್ಥ  ಇದಕ್ಕೆ ಬೀವರ್ ಕ್ರೀಡಾಂಗಣವೆಂದು ನಾಮಕರಣ ಮಾಡಲಾಯಿತು. 500 ಆಸನಗಳಿಂದ ಆರಂಭವಾದ ಇದು ಹಂತಹಂತವಾಗಿ ವಿಸ್ತೃತವಾಗತೊಡಗಿತು. ಇದುವರೆಗೆ ಆರು ಬಾರಿ ನವೀಕರಣ ಕಂಡಿದೆ.1.6 ಲಕ್ಷ ಪ್ರೇಕ್ಷಕರ ಸಾಮರ್ಥ್ಯ ಹೊಂದಿದ್ದರೂ ಅನೇಕ ಪಂದ್ಯಗಳನ್ನು ವೀಕ್ಷಿಸಲು 1.10 ಲಕ್ಷಕ್ಕೂ ಅಧಿಕ ಜನ ಇಲ್ಲಿ ಸೇರಿದ್ದಿದೆ. ವಿಶ್ವವಿದ್ಯಾಲಯ ಮಟ್ಟದ ಪಂದ್ಯಾವಳಿಗಳು ಹೆಚ್ಚಾಗಿ ನಡೆಯುತ್ತವೆ. `ವೈಟ್ ಔಟ್ ಗೇಮ್ಸ~ ಹೆಸರಿನಲ್ಲಿ ನಡೆಯುವ ಪಂದ್ಯಗಳು ಬಲು ಜನಪ್ರಿಯ. ಈ ಸಮಯದಲ್ಲಿ ಪಂದ್ಯ ವೀಕ್ಷಿಸಲು ಬರುವ ಪ್ರತಿಯೊಬ್ಬರೂ ಬಿಳಿ ಬಣ್ಣದ ದಿರಿಸು ತೊಟ್ಟಿರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry