ವಿಶ್ವದ ಸುದೀರ್ಘ ಮುಖ ಕಸಿ ಶಸ್ತ್ರಚಿಕಿತ್ಸೆ

7

ವಿಶ್ವದ ಸುದೀರ್ಘ ಮುಖ ಕಸಿ ಶಸ್ತ್ರಚಿಕಿತ್ಸೆ

Published:
Updated:
ವಿಶ್ವದ ಸುದೀರ್ಘ ಮುಖ ಕಸಿ ಶಸ್ತ್ರಚಿಕಿತ್ಸೆ

ವಾಷಿಂಗ್ಟನ್ (ಪಿಟಿಐ): ಬಂದೂಕಿನಿಂದ ಗುಂಡು ಹಾರಿಸಿಕೊಂಡು ಮುಖ ವಿರೂಪಗೊಂಡಿದ್ದ ವ್ಯಕ್ತಿಯೊಬ್ಬನಿಗೆ `ಹೊಸ ಮುಖ~ವನ್ನು ಕಸಿ ಮಾಡುವಲ್ಲಿ ವೈದ್ಯರುಗಳು ಯಶಸ್ವಿಯಾಗಿದ್ದಾರೆ.ನೂರು ಮಂದಿ ವೈದ್ಯರು 36 ಗಂಟೆಗಳ ಕಾಲ ನಡೆಸಿದ ಈ ಶಸ್ತ್ರಚಿಕಿತ್ಸೆ ವಿಶ್ವದಲ್ಲೇ ಅತ್ಯಂತ ಸುದೀರ್ಘ ಅವಧಿಯ ಮತ್ತು ಅಪರೂಪದಲ್ಲಿಯೇ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ ಎಂದು `ಸಿಬಿಎಸ್ ನ್ಯೂಸ್~ ವರದಿ ಮಾಡಿದೆ.ವರ್ಜೀನಿಯಾದ ರಿಚರ್ಡ್ ಲಿ ನೋರಿಸ್ ಎಂಬವರು 1997ರಲ್ಲಿ ತಮ್ಮ ಮುಖಕ್ಕೇ ಗುಂಡು ಹಾರಿಸಿಕೊಂಡಿದ್ದ ಪರಿಣಾಮವಾಗಿ ಮೂಗು, ನಾಲಿಗೆಯ ಪಾರ್ಶ್ವ ಭಾಗವನ್ನು ಕಳೆದುಕೊಂಡಿದ್ದರಿಂದ ಮುಖ ಅಪ್ಪಚ್ಚಿಯಾಗಿತ್ತು. ಬಳಿಕ ಅವರು ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು.ಆದರೆ ಕಳೆದ ಮಾರ್ಚ್‌ನಲ್ಲಿ 37ರ ಹರೆಯದ ರಿಚರ್ಡ್ ಅವರಿಗೆ ಸುಮಾರು ನೂರು ವೈದ್ಯರ ತಂಡ ಹೊಸ ಮುಖ, ನಾಲಿಗೆಯನ್ನು ಕಸಿ ಮಾಡಿದ್ದರು. ಇದೀಗ ಒಂದು ವಾರದ ಹಿಂದೆ ಅವರ ಭಾವಚಿತ್ರವನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.ರಿಚರ್ಡ್ ಅವರು ಇದೀಗ ಚೇತರಿಸಿಕೊಂಡಿದ್ದು ಮುಖಕ್ಕೆ ಕ್ಷೌರ ಮಾಡಿಕೊಳ್ಳುವುದರೊಂದಿಗೆ ಹಲ್ಲುಜ್ಜುತ್ತಿದ್ದಾರೆ. ಹಾಗೂ ಸರಿಯಾಗಿ ಮಾತನ್ನೂ ಆಡುತ್ತಿದ್ದಾರೆ. ಜೊತೆಗೆ ನಿಧಾನವಾಗಿ ಆಘ್ರಾಣಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.`ಹಿಂದೆ ರಿಚರ್ಡ್ ಅವರು ತಮ್ಮ ಕುರೂಪಿ ಮುಖವನ್ನು ಮುಚ್ಚಿಕೊಳ್ಳಲು ಮುಖವಾಡ ಧರಿಸುತ್ತಿದ್ದುದರಿಂದ ಜನರು ಅವರನ್ನು ದಿಟ್ಟಿಸಿ ನೋಡುತ್ತಿದ್ದರು. ಆದರೆ ಈಗ ಅವರು ದಿಟ್ಟಿಸಿ ನೋಡುವ ಕಾರಣವೇ ಬೇರೆಯಾಗಿದೆ~ ಎಂದು ಬಾಲ್ಟಿಮೋರ್‌ನ ಯೂನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ವೈದ್ಯ ಡಾ. ಎಡ್ವರ್ಡೊ ರಾಡ್ರಿಗಸ್ ತಿಳಿಸಿದ್ದಾರೆ.ರಿಚರ್ಡ್ ಅವರಿಗೆ ದಾನಿಯೊಬ್ಬರ ಮುಖವನ್ನು ಕಸಿ ಮಾಡಲಾಗಿದ್ದರೂ, ಅವರು ದಾನಿಯನ್ನು ಅಷ್ಟಾಗಿ ಹೋಲುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮುಖ, ಹಲ್ಲು, ದವಡೆ ಮತ್ತು ತಲೆಯಿಂದ ಕುತ್ತಿಗೆವರೆಗಿನ ಎಲ್ಲಾ ಅಂಗಾಂಶಗಳನ್ನು ಕಸಿ ಮಾಡಬೇಕಾಗಿದ್ದರಿಂದ ಸುದೀರ್ಘ ಅವಧಿಯ ಶಸ್ತ್ರಚಿಕಿತ್ಸೆ ಅಗತ್ಯವಾಗಿತ್ತು  ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry