ಸೋಮವಾರ, ಜನವರಿ 20, 2020
18 °C

ವಿಶ್ವನಾಥ್ ದಂಪತಿ ಜಾಮೀನು ಅರ್ಜಿ, ಮಂಗಳವಾರ ಆದೇಶ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಆರೋಪ ಎದುರಿಸುತ್ತಿರುವ ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಅವರ ಪತ್ನಿ ವಾಣಿಶ್ರೀ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯ, ಆದೇಶ ಪ್ರಕಟಣೆಯನ್ನು ಮಂಗಳವಾರಕ್ಕೆ ಕಾಯ್ದಿರಿಸಿದೆ.ಅಲ್ಲಾಳಸಂದ್ರ ನಿವಾಸಿ ವಿ.ಶಶಿಧರ್ ಎಂಬುವರು ಸಲ್ಲಿಸಿರುವ ಖಾಸಗಿ ದೂರನ್ನು ಆಧರಿಸಿ ವಿಶ್ವನಾಥ್ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ಅಕ್ರಮ ಆಸ್ತಿ ಸಂಪಾದನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ತನಿಖಾಧಿಕಾರಿ ತಮ್ಮನ್ನು ಬಂಧಿಸುವ ಆತಂಕವಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ವಿಶ್ವನಾಥ್ ದಂಪತಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಶನಿವಾರ ಬೆಳಿಗ್ಗೆ ವಿಚಾರಣೆ ಆರಂಭವಾಗುತ್ತಿದ್ದಂತೆ ಲೋಕಾಯುಕ್ತದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಉಮಾಕಾಂತನ್ ಆಕ್ಷೇಪಣಾ ಹೇಳಿಕೆ ಸಲ್ಲಿಸಿದರು. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಈವರೆಗೂ ಆರೋಪಿಗಳನ್ನು ಬಂಧಿಸುವ ಪ್ರಶ್ನೆ ಉದ್ಭವಿಸಿಲ್ಲ. ಈ ಹಂತದಲ್ಲಿ ಬಂಧನದ ಅಗತ್ಯತೆ ಕುರಿತು ತೀರ್ಮಾನಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕೆಂಬ ಆರೋಪಿಗಳ ಬೇಡಿಕೆ ಕುರಿತು ಲೋಕಾಯುಕ್ತ ಎಸ್‌ಪಿಪಿ ಖಚಿತ ನಿಲುವು ಪ್ರಕಟಿಸದಿರುವುದಕ್ಕೆ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. `ನ್ಯಾಯಾಲಯ ತನಿಖಾ ಸಂಸ್ಥೆಯ ಸಲಹೆಗಾರನ ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಹೊರೆಯನ್ನು ನ್ಯಾಯಾಲಯಕ್ಕೆ ವರ್ಗಾಯಿಸಬೇಡಿ. ಈವರೆಗಿನ ತನಿಖೆಯಲ್ಲಿ ಪತ್ತೆಯಾಗಿರುವ ಅಂಶಗಳು ಮತ್ತು ಅವುಗಳ ಆಧಾರದಲ್ಲಿ ಮುಂದಿನ ಅಗತ್ಯ ಕುರಿತು ತಿಳಿಸಬೇಕು. ಇಲ್ಲವಾದರೆ ಈವರೆಗಿನ ವಿಚಾರಣೆ ಆಧಾರದಲ್ಲಿ ನಾವು ತೀರ್ಮಾನಕ್ಕೆ ಬರಬೇಕಾಗುತ್ತದೆ~ ಎಂದು ಎಚ್ಚರಿಸಿದರು.ಮಧ್ಯಾಹ್ನ ಮತ್ತೆ ಪ್ರಕರಣದ ವಿಚಾರಣೆ ಆರಂಭವಾದಾಗ ವಿಶ್ವನಾಥ್ ದಂಪತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು ಎಂದು ವಾದಿಸಿದ ಎಸ್‌ಪಿಪಿ, `ವಿಶ್ವನಾಥ್ ಅವರ ಬ್ಯಾಂಕ್ ಲಾಕರ್‌ನಲ್ಲಿ ದೊಡ್ಡ ಪ್ರಮಾಣದ ಹಣ ಪತ್ತೆಯಾಗಿದೆ. ಅವರು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ಈವರೆಗೂ ಅವರ ಬಂಧನದ ಪ್ರಶ್ನೆ ಉದ್ಭವಿಸಿಲ್ಲ. ಮುಂದೆ ಅಗತ್ಯಕ್ಕೆ ತಕ್ಕಂತೆ ತನಿಖಾಧಿಕಾರಿ ತೀರ್ಮಾನ ಕೈಗೊಳ್ಳುತ್ತಾರೆ. ಈಗ ಅವರಿಗೆ ನಿರೀಕ್ಷಣಾ ಜಾಮೀನು ನೀಡಬಾರದು~ ಎಂದು ಮನವಿ ಮಾಡಿದರು.`ವಿಶ್ವನಾಥ್ ಅವರ ವಿರುದ್ಧ ದಾಖಲಾಗಿರುವ ದೂರಿನ ಹಿಂದೆ ರಾಜಕೀಯ ದುರುದ್ದೇಶವಿದೆ. ತನಿಖಾ ತಂಡ ಈವರೆಗೂ ಶಾಸಕರು ಮತ್ತು ಅವರ ಪತ್ನಿಯನ್ನು ಬಂಧಿಸದೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಅಂತಹ ಬೆಳವಣಿಗೆ ನಡೆಯಬಹುದು. ಅಂತಹ ಘಟನೆ ನಡೆದರೆ ಸಾರ್ವಜನಿಕವಾಗಿ ಅವರ ಗೌರವಕ್ಕೆ ಚ್ಯುತಿ ಬರುತ್ತದೆ.ಅಲ್ಲದೇ, ಅವರ ವಿರುದ್ಧದ ಆರೋಪಗಳ ಸಾಬೀತಾದರೂ ಏಳು ವರ್ಷದವರೆಗೆ ಮಾತ್ರ ಶಿಕ್ಷೆ ವಿಧಿಸಲು ಅವಕಾಶವಿದೆ. ಈ ಎಲ್ಲ ಅಂಶಗಳನ್ನೂ ಪರಿಗಣಿಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು~ ಎಂದು ವಿಶ್ವನಾಥ್ ಪರ ವಕೀಲರು ವಾದಿಸಿದರು.

 

ಪ್ರತಿಕ್ರಿಯಿಸಿ (+)