ಭಾನುವಾರ, ಏಪ್ರಿಲ್ 11, 2021
21 °C

ವಿಶ್ವಪಾರಂಪರಿಕ ಪಟ್ಟಿಗೆ ಪಶ್ಚಿಮಘಟ್ಟ: ಭಯ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಸಾಗರ: ವಿಶ್ವಪಾರಂಪರಿಕ ಪಟ್ಟಿಯಲ್ಲಿ ಪಶ್ಚಿಮಘಟ್ಟ ಸೇರಿದ ಮಾತ್ರಕ್ಕೆ ಅದರ ಅಸ್ತಿತ್ವ ಹಾಗೂ ಅಭಿವೃದ್ಧಿಗೆ ಧಕ್ಕೆ ಆಗುತ್ತದೆ ಎನ್ನುವ ಬಗ್ಗೆ ಭಯಬೇಡ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.ವೃಕ್ಷಲಕ್ಷ ಆಂದೋಲನ, ಪಶ್ಚಿಮಘಟ್ಟ ಕಾರ್ಯಪಡೆ, ಅರಣ್ಯ ಇಲಾಖೆ ಹಾಗೂ ಚಿಪ್ಪಳಿ - ಲಿಂಗದಹಳ್ಳಿಯ ಶಿವಪ್ಪನಾಯಕ ಗ್ರಾಮ ಅರಣ್ಯ ಸಮಿತಿ ಆಶ್ರಯದಲ್ಲಿ ಶನಿವಾರ ನಡೆದ ಪಶ್ಚಿಮಘಟ್ಟದ ಸ್ವಯಂ ಸೇವಾ ಸಂಸ್ಥೆಗಳ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವಪಾರಂಪರಿಕ ಪಟ್ಟಿಗೆ ಸೇರಿದ ಇತರ ಪ್ರದೇಶಗಳಲ್ಲಿ ಏನು ಬೆಳವಣಿಗೆ ನಡೆದಿದೆ ಎನ್ನುವ ಬಗ್ಗೆ ಅಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಲು ನೂತನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಳಿ ಚರ್ಚಿಸಿದ್ದು, ಅವರು ಅದಕ್ಕೆ ಒಪ್ಪಿಗೆ ನೀಡಿದ್ದಾರೆ. ಹೀಗೆ ಅಧ್ಯಯನ ನಡೆಸಿದ ನಂತರವಷ್ಟೇ ಒಳಿತು ಅಥವಾ ಕೆಡುಕು ಎನ್ನುವ ತೀರ್ಮಾನಕ್ಕೆ ಬರುವುದು ಸೂಕ್ತ ಎಂದರು.ಪಶ್ಚಿಮಘಟ್ಟ ಕಾರ್ಯಪಡೆ ಕೇವಲ ಅಣೆಕಟ್ಟು ನಿರ್ಮಾಣ ಹಾಗೂ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವುದಕ್ಕೆ ಸೀಮಿತವಾಗದೇ ಬದಲಿ ಇಂಧನ ವ್ಯವಸ್ಥೆಯಂತಹ ಪರ್ಯಾಯ ಯೋಜನೆಗಳತ್ತ ಹೆಚ್ಚು ಗಮನ ಹರಿಸುತ್ತಿದೆ. ದೇವರಕಾಡು ಉಳಿಸಿ ಆಂದೋಲನ ಕಾರ್ಯಪಡೆಯ ಬಲವನ್ನು ಹೆಚ್ಚಿಸಿದ ಚಳವಳಿಯಾಗಿದೆ ಎಂದು ಹೇಳಿದರು.ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯ ಬಿ.ಎಂ. ಕುಮಾರಸ್ವಾಮಿ ಮಾತನಾಡಿ, ನದಿಗಳ ದಿಕ್ಕನ್ನು ತಿರುಗಿಸುವ ಮತ್ತು ನದಿಗಳ ಜೋಡಣೆ ಯೋಜನೆ ಅವೈಜ್ಞಾನಿಕ ಆಗಿದ್ದು, ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ಈ ಹಿನ್ನೆಲೆಯಲ್ಲಿ ಪಶ್ಚಿಮಘಟ್ಟದ ಸ್ವಯಂ ಸೇವಾ ಸಂಸ್ಥೆಗಳು ಇಂತಹ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ಶ್ರೀಧರಪುರದ ಶ್ರೀಧರ ತಪೋವನದ ಅಭಿವೃದ್ಧಿಗಾಗಿ ಪಶ್ಚಿಮಘಟ್ಟ ಕಾರ್ಯಪಡೆ ವತಿಯಿಂದ ್ಙ 2.69 ಲಕ್ಷ ಚೆಕ್ ವಿತರಿಸಲಾಯಿತು.ಹೆಗ್ಗರಣೆ ಜಿ.ಎಂ. ಭಟ್ ಮತ್ತು ಸಂಗಡಿಗರಿಂದ ಪರಿಸರ ಕುರಿತ ಯಕ್ಷಗಾನ ಪ್ರದರ್ಶನ ನಡೆಯಿತು. ಪರಿಸರಕ್ಕೆ ಸಂಬಂಧಪಟ್ಟಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಸನ್ಮಾನಿಸಲಾಯಿತು.ನಗರಸಭೆ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಬೇಂಗ್ರೆ ಅಧ್ಯಕ್ಷತೆ ವಹಿಸಿದ್ದರು. ಪಶ್ಚಿಮಘಟ್ಟ ಕಾರ್ಯಪಡೆ ಸದಸ್ಯರಾದ  ಡಾ.ಟಿ.ವಿ. ರಾಮಚಂದ್ರಪ್ಪ, ಶಿವರಾಜ್ ಗೌಡ, ಗಜೇಂದ್ರ ಗೊರಸುಕುಡಿಗೆ, ಶಾಂತಾರಾಮ್‌ಸಿದ್ದಿ, ಡಾ.ಕೇಶವ ಕೊರ್ಸೆ, ಡಾ.ಆರ್. ವಾಸುದೇವ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್, ಎಪಿಎಂಸಿ ಅಧ್ಯಕ್ಷ ಸಿ.ಜೆ. ಮಂಜಪ್ಪ, ಶ್ರೀನಿವಾಸಲು ಇನ್ನಿತರರು ಹಾಜರಿದ್ದರು.ಹನಿಯಾ ರವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಿ.ಎಚ್. ರಾಘವೇಂದ್ರ ಸ್ವಾಗತಿಸಿದರು. ಅಖಿಲೇಶ್ ಚಿಪ್ಪಳಿ ವಂದಿಸಿದರು. ವೆಂಕಟೇಶ್ ಕವಲಕೋಡುಕಾರ್ಯಕ್ರಮ ನಿರೂಪಿಸಿದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.