`ವಿಶ್ವರೂಪಂ'ಗೆ ಮೋಕ್ಷ

7
ಏಳು ದೃಶ್ಯಗಳ ಕತ್ತರಿಗೆ ಕಮಲಹಾಸನ್ ಒಪ್ಪಿಗೆ

`ವಿಶ್ವರೂಪಂ'ಗೆ ಮೋಕ್ಷ

Published:
Updated:
`ವಿಶ್ವರೂಪಂ'ಗೆ ಮೋಕ್ಷ

ಚೆನ್ನೈ: ಖ್ಯಾತ ನಟ ಕಮಲಹಾಸನ್ ಅವರ `ವಿಶ್ವರೂಪಂ' ಸಿನಿಮಾ ಸುತ್ತ ಬೆಳೆದಿದ್ದ ವಿವಾದ ಶನಿವಾರ ರಾತ್ರಿ ಸುಖಾಂತ್ಯಗೊಂಡಿದೆ. ಚಿತ್ರದಲ್ಲಿನ ಏಳು `ಆಕ್ಷೇಪಾರ್ಹ' ದೃಶ್ಯಗಳಿಗೆ ಕತ್ತರಿ ಹಾಕಲು ಕಮಲ್ ಒಪ್ಪಿದ್ದಾರೆ.ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಸೂಚನೆ ಮೇರೆಗೆ ಗೃಹ ಕಾರ್ಯದರ್ಶಿ ಆರ್. ರಾಜಗೋಪಾಲ್ ಅವರ ಮಧ್ಯಸ್ಥಿಕೆಯಲ್ಲಿ 20ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಮತ್ತು ಕಮಲಹಾಸನ್ ನಡುವೆ ಸತತ ಆರು ತಾಸು ಸಂಧಾನ ಮಾತುಕತೆ ನಡೆಯಿತು. `15 ದೃಶ್ಯಗಳಿಗೆ ತಮ್ಮ ತಕರಾರಿದೆ' ಎಂದು ಮುಸ್ಲಿಂ ಪ್ರತಿನಿಧಿಗಳು ಹೇಳಿದರು. ಆದರೆ, ಈ ಪೈಕಿ ಏಳು ದೃಶ್ಯಗಳನ್ನು ತೆಗೆದುಹಾಕಲು ಕಮಲಹಾಸನ್ ಸಮ್ಮತಿಸಿ ಮುಸ್ಲಿಂ ಮುಖಂಡರನ್ನೂ ಒಪ್ಪಿಸಿದರು. ಇದರಿಂದಾಗಿ ತಮಿಳುನಾಡಿನಲ್ಲಿ ಚಿತ್ರ ಪ್ರದರ್ಶನಕ್ಕೆ ಹಾದಿ ಸುಗಮಗೊಳ್ಳಲಿದೆ.ಮಾತುಕತೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲಹಾಸನ್, `ಮುಸ್ಲಿಂ ಸಂಘಟನೆಗಳು ಆಕ್ಷೇಪಿಸಿದ್ದ ಕೆಲವು ದೃಶ್ಯಗಳನ್ನು ತೆಗೆದು ಹಾಕಲು ಒಪ್ಪಿದ್ದೇನೆ' ಎಂದರು. ಆದರೆ, ಈ ದೃಶ್ಯಗಳು ಯಾವುವು ಎನ್ನುವ ವಿವರವನ್ನು ನಿರಾಕರಿಸಿದರು.`ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಿ, ಮರು ಸಂಕಲನ ಮಾಡಿ  ಕೇಂದ್ರ ಸೆನ್ಸಾರ್ ಮಂಡಳಿಯ ಒಪ್ಪಿಗೆ ಪಡೆಯಲು ಪುನಃ ಸಲ್ಲಿಸುತ್ತೇನೆ. ತಾಂತ್ರಿಕ ಮತ್ತು ಕಾನೂನು ತೊಡಕುಗಳನ್ನು ಪರಿಹರಿಸಿಕೊಂಡ ನಂತರ ಸಿನಿಮಾ (ತಮಿಳು ಅವತರಣಿಕೆ) ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು' ಎಂದು ಹೇಳಿದರು.`ತಮಿಳುನಾಡು ಮುಸ್ಲಿಮರ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬಂದ ಪ್ರತಿನಿಧಿಗಳೊಂದಿಗೆ ಮಾತುಕತೆಯು ಮುಕ್ತ ವಾತಾವರಣದಲ್ಲಿಯೇ ನಡೆಯಿತು. ವಿವಾದವನ್ನು ಬಗೆಹರಿಸಲು ಎಲ್ಲರೂ ಸಹಕಾರ ನೀಡಿದರು. ಡಿಜಿಟಲ್ ಮಾದರಿಯಲ್ಲಿ ಸಂಕಲನಗೊಂಡಿರುವ ದೃಶ್ಯಗಳಿಗೆ ಕತ್ತರಿ ಹಾಕಲು ಇರುವ ತಾಂತ್ರಿಕ ತೊಂದರೆಗಳನ್ನು ನಾನು ವಿವರಿಸಿದೆ' ಎಂದು ತಿಳಿಸಿದರು.ಅರ್ಜಿ ವಾಪಸ್: ಸಂಧಾನ ಮಾತುಕತೆಗೆ ವೇದಿಕೆ ಕಲ್ಪಿಸಿದ ತಮಿಳುನಾಡು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಸಿನಿಮಾ ನಿಷೇಧ ಆದೇಶದ ವಿರುದ್ಧ ಮದ್ರಾಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಮೇಲ್ಮನವಿಯನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಕಟಿಸಿದರು.ಸಿನಿಮಾ ಪ್ರದರ್ಶನಕ್ಕೆ ತಡೆಯೊಡ್ಡಿ 144ನೇ ಕಲಂ ಅನ್ವಯ ಹೊರಡಿಸಿದ ನಿಷೇಧಾಜ್ಞೆಯನ್ನು ಸರ್ಕಾರ ಕೂಡಲೇ ತೆರವುಗೊಳಿಸುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.ಮಾತುಕತೆಯಲ್ಲಿ ಭಾಗವಹಿಸಿದ್ದ ತೌಹೀತ್ ಜಮಾತ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ರಹಮತ್-ಉಲ್ಲಾ ಮಾತನಾಡಿ, `ಸಮುದಾಯದ ಭಾವನೆಗಳಿಗೆ ತೀವ್ರವಾಗಿ ಧಕ್ಕೆಯುಂಟು ಮಾಡುವಂತಹ ಆಕ್ಷೇಪಾರ್ಹವಾದ 15 ದೃಶಗಳನ್ನು ಕೈಬಿಡಬೇಕು ಎಂದು ನಾವು ಒತ್ತಾಯಿಸಿದ್ದೆವು.ಆದರೆ, ಕಮಲಹಾಸನ್ ಏಳು ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದರು. ಕುರಾನ್‌ನ ಪೂಜ್ಯ ಭಾವನೆಗೆ ವ್ಯತಿರಿಕ್ತವಾಗಿ ಇವನ್ನು ಚಿತ್ರೀಕರಿಸಲಾಗಿತ್ತು' ಎಂದರು.  ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕುವ ಜೊತೆಗೆ ಸಿನಿಮಾದ ಆರಂಭದಲ್ಲಿ `ಈ ಸಿನಿಮಾದಲ್ಲಿನ ದೃಶ್ಯ- ಸಂಭಾಷಣೆಗಳು ಯಾವುದೇ ಧಾರ್ಮಿಕ ಭಾವನೆಗಳನ್ನು ಮತ್ತು ಮುಸ್ಲಿಂ ಸಮುದಾಯದವರನ್ನು ಭಯೋತ್ಪಾದಕರೆಂದು ಬಿಂಬಿಸುವ ಉದ್ದೇಶ ಹೊಂದಿಲ್ಲ. ಇಲ್ಲಿನ ಪಾತ್ರಗಳು ನೈಜವಲ್ಲ, ಕೇವಲ ಕಾಲ್ಪನಿಕ' ಎಂದು ಪ್ರಕಟಿಸಲು ಕಮಲ್ ಒಪ್ಪಿದ್ದಾರೆ ಎಂದೂ ರಹಮತ್-ಉಲ್ಲಾ ತಿಳಿಸಿದರು.ಕೆಲವು ದೃಶ್ಯಗಳು ಸಮುದಾಯದ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತವೆ ಎಂದು ಕೆಲವು ಮುಸ್ಲಿಂ ಸಂಘಟನೆಗಳು ತಮಿಳುನಾಡಿನಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರಿಂದ ಸರ್ಕಾರ ತಮಿಳು ಅವತರಣಿಕೆಯ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿತ್ತು. ಇದನ್ನು ಮದ್ರಾಸ್ ಹೈಕೋರ್ಟ್‌ನ ಏಕ ಸದಸ್ಯ ಪೀಠ ತೆರವುಗೊಳಿಸಿದ್ದರೂ ದ್ವಿಸದಸ್ಯ ಪೀಠ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ್ಙ100 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಿ, ನಿರ್ದೇಶಿಸಿ, ನಟಿಸಿದ್ದ ಕಮಲಹಾಸನ್ ಭಾವೋದ್ವೇಗಕ್ಕೆ ಒಳಗಾಗಿ ತಮಿಳುನಾಡನ್ನು ಬಿಟ್ಟು, ಹೊರದೇಶಕ್ಕೆ ಹೋಗುವುದಾಗಿ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry