'ವಿಶ್ವರೂಪಂ' ನಿಷೇಧ ಮತ್ತೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್, ವಿದೇಶಕ್ಕೆ ಹೋಗುವೆ: ಕಮಲ್ ಬೆದರಿಕೆ

7

'ವಿಶ್ವರೂಪಂ' ನಿಷೇಧ ಮತ್ತೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್, ವಿದೇಶಕ್ಕೆ ಹೋಗುವೆ: ಕಮಲ್ ಬೆದರಿಕೆ

Published:
Updated:
'ವಿಶ್ವರೂಪಂ' ನಿಷೇಧ ಮತ್ತೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್, ವಿದೇಶಕ್ಕೆ ಹೋಗುವೆ: ಕಮಲ್ ಬೆದರಿಕೆ

ಚೆನ್ನೈ (ಐಎಎನ್ಎಸ್): 'ವಿಶ್ವರೂಪಂ' ಮೇಲಿನ ನಿಷೇಧ ತೆರವುಗೊಳಿಸಿ ಏಕಸದಸ್ಯ ಪೀಠವು ಮಂಗಳವಾರ ನೀಡಿದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಬುಧವಾರ ತಳ್ಳಿಹಾಕಿದೆ. ಈ ಮಧ್ಯೆ, ತಮ್ಮ ವಿವಾದಾತ್ಮಕ 'ವಿಶ್ವರೂಪಂ' ಚಲನಚಿತ್ರದ ಮೇಲಿನ ನಿಷೇಧವನ್ನು ತೆರವುಗೊಳಿಸದೇ ಇದ್ದರೆ ತಾವು ಬೇರಾವುದಾದರೂ 'ಜಾತ್ಯತೀತ' ರಾಜ್ಯಕ್ಕೆ ಹೋಗಬೇಕಾಗಬಹುದು, ಅದು ದೇಶದಿಂದ ಹೊರಗಿದ್ದರೂ ಇರಬಹುದು ಎಂದು ಖ್ಯಾತ ಚಲನಚಿತ್ರ ನಟ ಕಮಲಹಾಸನ್ ಅವರು ಬುಧವಾರ ಇಲ್ಲಿ ಎಚ್ಚರಿಕೆ ನೀಡಿದ್ದಾರೆ.'ಚಿತ್ರಕ್ಕಾಗಿ ನಾನು ನನ್ನ ಎಲ್ಲ ಆಸ್ತಿಪಾಸ್ತಿಯನ್ನು ಕಳೆದುಕೊಂಡಿದ್ದೇನೆ. ಆದ್ದರಿಂದ ಈಗ ನನಗೆ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಈಗ ಉಳಿದಿರುವುದು ಆಯ್ಕೆ ಮಾತ್ರ. ತೀರ್ಪು ನನ್ನ ಪರವಾಗಿ ಬಾರದೇ ಇದ್ದಲ್ಲಿ ನಾನು ವಿದೇಶದಲ್ಲಾದರೂ ಜಾತ್ಯತೀತ ರಾಜ್ಯಕ್ಕಾಗಿ ಹುಡುಕಾಡಬೇಕು. ನಾವು ಈ ಜಾಗದಿಂದ ದೂರ ಹೊರಟುಹೋಗುತ್ತೇವೆ. ಆದರೆ ಒಳ್ಳೆಯ ನೆನಪುಗಳು ಮಾತ್ರ ಉಳಿಯುತ್ತವೆ' ಎಂದು 58ರ ಹರೆಯದ ಚಿತ್ರನಟ ಪತ್ರಿಕಾಗೋಷ್ಠಿಯಲ್ಲಿ ಭಾವುಕರಾಗಿ ನುಡಿದರು.'ಭಾರತದಲ್ಲಿ ಜಾತ್ಯತೀತ ರಾಜ್ಯ ಇಲ್ಲದೇ ಇದ್ದಲ್ಲಿ, ನಾನು ಸಾಗರದಾಚೆ ಹೋಗುವೆ. ತಮಿಳುನಾಡಿಗೆ ನಾನು ಇರುವುದು ಇಷ್ಟವಿಲ್ಲ ಎಂದು ನನ್ನ ಭಾವನೆ. ಬದಲಾಗುವುದು ನನ್ನ ಪಾಸ್ ಪೋರ್ಟ್ ಮಾತ್ರ. ಆಗಲೂ ನಾನು ಭಾರತೀಯನಾಗಿಯೇ ಇರುತ್ತೇನೆ. ನಾನು ನನ್ನ ಎಲ್ಲ ಆಸ್ತಿಪಾಸ್ತಿಯನ್ನು ಚಿತ್ರಕ್ಕಾಗಿ ಅಡವಿಟ್ಟಿದ್ದೇನೆ. ಚಿತ್ರ ಬಿಡುಗಡೆ ತಡವಾದದ್ದರಿಂದ ನಾನು ನನ್ನ ಮನೆಯನ್ನು ಕಳೆದುಕೊಂಡಿದ್ದೇನೆ' ಎಂದು ಕಮಲಹಾಸನ್ ಹೇಳಿದರು.ಮದ್ರಾಸ್ ಹೈಕೋರ್ಟ್ ಮಂಗಳವಾರ 'ವಿಶ್ವರೂಪಂ' ಪರವಾಗಿ ತೀರ್ಪು ನೀಡಿ, ಸರ್ಕಾರ ಹೇರಿದ್ದ ನಿಷೇಧವನ್ನು ತೆರವುಗೊಳಿಸಿದೆ. ಏನಿದ್ದರೂ ಆಡಳಿತಾತ್ಮಕ ಕ್ರಮವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಚಿತ್ರಮಂದಿರಗಳಲ್ಲಿ ಚಲನಚಿತ್ರದ ಪರಿಣಾಮ ಏನಾಗುವುದೋ ಎಂದು ನಾನು ಕಾದು ನೋಡಬೇಕಾಗಿದೆ ಎಂದು ಅವರು ನುಡಿದರು.ವಾಸ್ತವ ಏನೆಂದರೆ ನನಗೆ ಇನ್ನೂ ಮಧ್ಯಂತರ ಪರಿಹಾರ ಲಭಿಸಬೇಕಾಗಿದೆ. ಚಲನಚಿತ್ರ ಪ್ರದರ್ಶನವನ್ನು ಪುನಃ ತಡೆ ಹಿಡಿಯಲಾಗಿದೆ ಮತ್ತು ಪೊಲೀಸರು ಅಭಿಮಾನಿಗಳನ್ನು ನ್ಯಾಯಾಲಯದ ತೀರ್ಪಿನ ಪ್ರತಿ ತರುವಂತೆ ಹೇಳಿ ಹೊರಗಟ್ಟಿದ್ದಾರೆ. ನಾನು ರಾಜಕೀಯ ಆಟದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಆರ್ಥಿಕ ನಷ್ಟ ಮುಖ್ಯವಲ್ಲ' ಎಂದು ಕಮಲಹಾಸನ್ ಹೇಳಿದರು.ಭಾರಿ ವೆಚ್ಚದ ಚಲನಚಿತ್ರ ಜನವರಿ 25ರಂದು ಬಿಡುಗಡೆ ಆಗಬೇಕಾಗಿತ್ತು. ಆದರೆ ಕಾನೂನು ಸುವ್ಯವಸ್ಥೆಯ ಭೀತಿ ಅನುಸರಿಸಿ ತಮಿಳ್ನಾಡು ಸರ್ಕಾರ ಚಲನಚಿತ್ರವನ್ನು ನಿಷೇಧಿಸಿತು. ನಂತರ ಕೇರಳ ಮತ್ತು ಆಂಧ್ರ ಪ್ರದೇಶಗಳಲ್ಲೂ ಚಲನಚಿತ್ರದ ಮೇಲೆ ನಿಷೇಧ ಹೇರಲಾಯಿತು..

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry