ವಿಶ್ವರೂಪಾತ್ಮಕ ಭಾಷೆಯ ತಂಬಿ

7

ವಿಶ್ವರೂಪಾತ್ಮಕ ಭಾಷೆಯ ತಂಬಿ

Published:
Updated:
ವಿಶ್ವರೂಪಾತ್ಮಕ ಭಾಷೆಯ ತಂಬಿ

‘ನಮಗ್ಯಾರೂ ಇಲ್ಲವಲ್ಲ ತಂಬಿ... ನೀನಾದರೂ ನಮ್ಮ ಜೊತೆಗಿರುತ್ತೀಯಾ...?’.

ನಾರಾಯಣ ಗುರು ಈ ಪ್ರಶ್ನೆಯನ್ನು ಕೇಳಿದ್ದು ತಮ್ಮ ಶಿಷ್ಯ ನಟರಾಜ ಗುರುವನ್ನು. ಈ ಪ್ರಶ್ನೆ ನಟರಾಜ ಗುರುಗಳನ್ನು ಅದೆಷ್ಟು ಆಳವಾಗಿ ಕಲಕಿತ್ತು ಎಂಬುದನ್ನು ಅರಿಯುವುದಕ್ಕೆ ಅವರ ಆತ್ಮಕಥೆ ‘Autobiography of an Absolutist’ ಓದಬೇಕು.ಬೆಂಗಳೂರಿನಲ್ಲಿ ಆರೋಗ್ಯಾಧಿಕಾರಿಯಾಗಿದ್ದ ತಮ್ಮ ತಂದೆ ಡಾ.ಪಲ್ಪು ಅವರ ನಿವಾಸಕ್ಕೆ ನಾರಾಯಣ ಗುರುಗಳು ಬರುತ್ತಿದ್ದುದು, ನಾಲ್ಕರ ಪೋರ ನಟರಾಜ ಗುರುವನ್ನು ಭೇಟಿ ಮಾಡಲು ಹೋದಾಗ ಅವರಿಗೆ ನಮಸ್ಕಾರ ಮಾಡಲು ಒಪ್ಪದೇ ಇದ್ದುದು, ಹಲಕೆಲವು ಪ್ರಶ್ನೆಗಳ ಮೂಲಕವೇ ಬಾಲ್ಯದಿಂದಲೇ ನಾರಾಯಣ ಗುರು ತನ್ನ ವಿಚಾರಧಾರೆಯನ್ನು ರೂಪಿಸಿದರು ಎಂಬ ವಿವರಗಳೆಲ್ಲವೂ ಈ ಪುಸ್ತಕದಲ್ಲಿವೆ.ನಾರಾಯಣ ಗುರುಗಳ ಹೆಸರು ಬಹಳ ಪ್ರಸಿದ್ಧ. ಈ ಗುರುವಿನ ‘ಗುರುತನ’ವನ್ನು ಎತ್ತಿ ಹಿಡಿದು ಪ್ರಪಂಚದಾದ್ಯಂತ ಗುರುಕುಲಗಳನ್ನು ಸ್ಥಾಪಿಸಿದ ನಟರಾಜ ಗುರುಗಳು ಅಷ್ಟೇನೂ ಪ್ರಸಿದ್ಧರಲ್ಲ. ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆ, ಚೆನ್ನೈನ (ಅಂದಿನ ಮದ್ರಾಸ್) ಪ್ರೆಸಿಡೆನ್ಸಿ ಕಾಲೇಜು, ಟೀಚರ್ಸ್ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ಎಂ.ಎ, ಎಲ್.ಟಿ ಪದವಿ ಪಡೆದ ನಂತರ ಗುರುಕುಲ ಸೇರಿಕೊಂಡ ನಟರಾಜನ್ ಎಂಬ ‘ತಂಬಿ’ಯನ್ನು ಉನ್ನತ ಅಧ್ಯಯನಕ್ಕಾಗಿ ಯೂರೋಪಿಗೆ ಕಳುಹಿಸಿದ್ದು ನಾರಾಯಣ ಗುರುಗಳೇ. ಸೋರ್ಬೋನೆ ವಿಶ್ವವಿದ್ಯಾಲಯದಿಂದ ಡಿ.ಲಿಟ್, ನಂತರ ಲಂಡನ್‌ನಿಂದ ಎಂಆರ್‌ಎಸ್‌ಟಿ ಪದವಿ ಪಡೆದು ಜಿನೇವಾದ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕೆಲಕಾಲ ಅಧ್ಯಾಪಕ ವೃತ್ತಿಯಲ್ಲಿ ತೊಡಗಿದ್ದ ಡಾ.ನಟರಾಜನ್ ಮತ್ತೆ ಗುರುವಿನ ಬಳಿಗೆ ಹಿಂದಿರುಗಿದರು.ಐದು ಬಾರಿ ಪ್ರಪಂಚ ಸುತ್ತಿದ ನಟರಾಜ ಗುರು ಬೆಲ್ಜಿಯಂ, ಅಮೆರಿಕ, ಫಿಜಿ, ಸಿಂಗಪೂರ್‌ಗಳಲ್ಲಿ ಗುರುಕುಲಗಳನ್ನು ಸ್ಥಾಪಿಸಿದರು. ಸ್ಕಾಟ್ಲೆಂಡ್‌ನಲ್ಲಿ ಹುಟ್ಟಿದ ಜಾನ್ ಸ್ಪಿಯರ್ಸ್‌ ಡಾ. ನಟರಾಜನ್ ಅವರನ್ನು ಗುರುವಾಗಿಸಿದ ಮೊದಲ ಶಿಷ್ಯ. ಆಮೇಲೆ ಹ್ಯಾರಿ ಜಾಕೋಬ್ಸನ್, ಗ್ಯಾರಿ ಡೇವಿಡ್, ಸ್ವಾಮಿ ಮಂಗಳಾನಂದ, ಗುರು ನಿತ್ಯ ಚೈತನ್ಯ ಯತಿ ಮುಂತಾದವರ ಸೇರ್ಪಡೆಯೊಂದಿಗೆ ಶಿಷ್ಯ ವರ್ಗ ಬೆಳೆಯಿತು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಮಹಾರಾಜ ನಟವರ್‌ಸಿಂಹಜೀ ಮುಂತಾದವರೊಂದಿಗೆ ಹಳ್ಳಿಯ ದನಗಾಹಿ ಹುಡುಗ, ಇಂದು ಇಲ್ಲದ ಆಲದ ಮರ, ಕೋತಿಗಳು, ಹಕ್ಕಿಗಳೆಲ್ಲವೂ ಗುರುಗಳ ಸ್ನೇಹಿತರೇ.ಭಾರತೀಯ ಮನಸ್ಸಿನೊಳಗೆ ಸುಪ್ತವಾಗಿದ್ದ ‘ಗುರುತನ’ ಎಂಬ ಪರಿಕಲ್ಪನೆಯನ್ನು ಪುನರ್ ಜಾಗೃತಗೊಳಿಸುವಲ್ಲಿ ನಾರಾಯಣ ಗುರು ಯಶಸ್ವಿಯಾಗಿದ್ದರು. ಅವರು ಸಹಿ ಹಾಕುತ್ತಿದ್ದುದೂ ‘ನಾರಾಯಣ ಗುರು’ ಎಂದೇ. ಇದರ ಅರಿವೇ ಇಲ್ಲದ ಅವರ ‘ಅನುಯಾಯಿ’ಗಳು ನಾರಾಯಣ ಗುರುಗಳ ಹೆಸರಿನಲ್ಲಿರುವ ‘ಗುರು’ವನ್ನು ಕೈಬಿಟ್ಟು ಅವರನ್ನು ‘ಶ್ರೀ ನಾರಾಯಣ’ರನ್ನಾಗಿಸಿದ ಕ್ರಿಯೆಯಲ್ಲಿದ್ದ ಗುರುನಿಂದನೆ ನಟರಾಜ ಗುರುಗಳಿಗೆ ಬಹಳ ನೋವುಂಟು ಮಾಡಿತ್ತು.ಜ್ಞಾನದ ಹರಿವು ಗುರು ಶಿಷ್ಯ ಪರಂಪರೆಯಲ್ಲಿ ಸಾಗಬೇಕು. ಎಲ್ಲಾ ಮತ-ಧರ್ಮಗಳನ್ನು ಸಮಭಕ್ತಿಯಲ್ಲಿ, ಸಮಶ್ರದ್ಧೆಯಲ್ಲಿ ಅಧ್ಯಯನ ಮಾಡುವ ಸರ್ವಧರ್ಮ ಪಾಠಶಾಲೆಗಳಿರಬೇಕೆಂಬ ನಾರಾಯಣ ಗುರುಗಳ ಆದೇಶವನ್ನು ಸ್ವಧರ್ಮವಾಗಿ ಸ್ವೀಕರಿಸಿದ ನಟರಾಜ ಗುರು ಊಟಿಯಲ್ಲಿ ಗುರುಗಳ ಆಜ್ಞೆ ಮತ್ತು ಆಶೀರ್ವಾದಂತೆ ಆರಂಭಿಸಿದ ‘ನಾರಾಯಣ ಗುರುಕುಲಂ’ಗೆ ಇಂದು ವಿಶ್ವವ್ಯಾಪಿ ಶಾಖೆಗಳಿವೆ.ಈ ಗುರುಕುಲಗಳಿಗಾಗಿ ನಾರಾಯಣ ಗುರುಗಳೇ ರೂಪಿಸಿದ ನಿಯಮಗಳು ಹೀಗಿವೆ: ‘ಮದುವೆಯನ್ನು ತಡೆಯಬಾರದು, ಮನೆಯಲ್ಲಿ ತಂದೆ ಮಕ್ಕಳು ಒಟ್ಟಿಗೆ ಇದ್ದಂತೆ ಗುರುಕುಲದಲ್ಲಿ ಗುರುಶಿಷ್ಯರಿರಬೇಕು, ಇಡೀ ವಿಶ್ವವೇ ಗುರುಕುಲವಾಗಬೇಕು’. ಈ ನಿಯಮದ ಅನುಸಾರವೇ ನಟರಾಜ ಗುರುಗಳು ಸ್ಥಾಪಿತವಾದ ಗುರುಕುಲವೀಗ ‘ಈಸ್ಟ್-ವೆಸ್ಟ್ ಯೂನಿವರ್ಸಿಟಿ ಆಫ್ ಬ್ರಹ್ಮವಿದ್ಯ’ ಆಗಿ ವಿವಿಧ ವಿಭಾಗಗಳಲ್ಲಿ ಅಧ್ಯಯನ ಸಾಧ್ಯತೆ ಇರುವ ಹಲವು ಕೇಂದ್ರಗಳಾಗಿದೆ. ಜಾತಿಭೇದ, ಮತ ದ್ವೇಷಗಳಿಂದ ಮುಕ್ತವಾಗಿ ಸಹೋದರತ್ವದ ಸಂಕೇತಗಳಾಗಿ ನಾರಾಯಣ ಗುರುಗಳು ಸ್ಥಾಪಿಸಿದ ಸಂಸ್ಥೆಗಳು ಗುಂಪುಗಾರಿಕೆ ಮತ್ತು ಸಂಕುಚಿತ ಮನಸ್ಥಿತಿಯ ಸಂಕೇತಗಳಾಗಿಬಿಟ್ಟದ್ದನ್ನು ಕಟುವಾಗಿ ಟೀಕಿಸುತ್ತಿದ್ದ ನಟರಾಜ ಗುರುಗಳಿಗೆ ತಾವು ಸ್ಥಾಪಿಸಿದ ಸಂಸ್ಥೆಗಳಿಗೆ ಈ ಸ್ಥಿತಿ ಬರಕೂಡದು ಎಂಬ ಹಟವಿತ್ತು. ಈ ಕಾರಣದಿಂದಾಗಿಯೇ ಅವರು ಏಕಾಂಗಿಯಾದರು.

The Word of  the Guru, Experiencing One-World, Unitive Philosophy, The Bhagavadgita, Saundaryala ri of Sankara, An Integrated Science of  the Absolute  ಮುಂತಾದ ಅವರ ಕೃತಿಗಳು ಜಾಗತಿಕ ದರ್ಶನ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಗಳೆಂಬುದರಲ್ಲಿ ಸಂಶಯವಿಲ್ಲ.ವಿಶ್ವಸಾಹಿತ್ಯದಲ್ಲಿ ಸುಪ್ತವಾಗಿ ಮತ್ತು ಬಹಿರಂಗವಾಗಿ ಇರುವ ಸಂರಚನೆ ‘ಅರಿವಿನ ಸಂರಚನೆ’ ಎಂದು ನಟರಾಜ ಗುರುಗಳು ಭಾವಿಸಿದ್ದರು. ಒಂದು ರೂಪಾತ್ಮಕ ಭಾಷೆಯ (ಪ್ರೊಟೋ ಲಾಂಗ್ವೇಜ್) ಮೂಲಕ ಸಾರ್ವತ್ರಿಕ ಆಶಯ ವಿನಿಮಯವನ್ನು ಸಾಧಿಸುವುದಕ್ಕೆ ಅಗತ್ಯವಿರುವ ಮಾರ್ಗವನ್ನು ಕಂಡುಕೊಳ್ಳುವುದು ಅವರ ಅಧ್ಯಯನಗಳ ಮುಖ್ಯ ಉದ್ದೇಶವಾಗಿತ್ತು. ಇದರ ಜೊತೆ ಜೊತೆಯಲ್ಲೇ ಕೃಷಿ, ಅಡುಗೆ ಮುಂತಾದ ಬದುಕಿನಲ್ಲಿ ಅತಿ ಮುಖ್ಯವಾಗಿದ್ದ ಯಾವುದನ್ನೂ ಬಿಡದೆ ಎಲ್ಲದರ ಕುರಿತೂ ಒಂದು ದರ್ಶನವನ್ನೂ ಮಾದರಿಯನ್ನೂ ಶಿಷ್ಯರಿಗೆ ನೀಡುವುದರಲ್ಲಿ ಗುರುಗಿದ್ದ ಶ್ರದ್ಧೆ ಬಹಳ ಅಪರೂಪದ್ದು. ಇದನ್ನು ಮಿಲರೇಪನ ಗುರು ಮಾರ್ಪನಿಗಷ್ಟೇ ಹೋಲಿಸಬಹುದು.ಬದುಕಿನ ಸಂಧ್ಯಾಕಾಲದಲ್ಲಿ ತಮ್ಮ ಜೊತೆ ಸೇರಿಕೊಂಡ ‘ಹಿಪ್ಪಿ’ಗಳು ಸಾಮಾನ್ಯತೆಯಿಂದ ಮುಕ್ತರಾಗಿರುವುದನ್ನು ನಟರಾಜ ಗುರು ಗುರುತಿಸಿದ್ದರು. ರಾಷ್ಟ್ರೀಯತೆ, ಧನಾಭಿಮುಖ ದೃಷ್ಟಿಕೋನಗಳಿಂದ ಮುಕ್ತರಾಗಿರುವ ಇವರು ಸೌಂದರ್ಯ ಲಹರಿಯಂಥ ಕೃತಿಗಳನ್ನು ಅಧ್ಯಯನ ಮಾಡುವುದರ ಮೂಲಕ ‘ಸರ್ವತ್ರ ಸಹೋದರತೆ’ ಎಂಬ ಒಳನೋಟದ ಸಾಕ್ಷಾತ್ಕಾರವನ್ನು ಸಾಧಿಸಬಲ್ಲವರೆಂದು ಗುರುಗಳು ಭಾವಿಸಿದ್ದರು.ಎಲ್ಲ ಗಡಿಗಳನ್ನು ಮೀರಿದ ರೂಪಾತ್ಮಕ ಭಾಷೆಯೊಂದರ ಆವಿಷ್ಕಾರಕ್ಕಾಗಿ ತುಡಿಯುತ್ತಿದ್ದ ಗುರುಗಳು ಸೌಂದರ್ಯ ಲಹರಿಯಂಥ ಪಠ್ಯವನ್ನು ಯಾವ ಸೈದ್ಧಾಂತಿಕ ಜ್ಞಾನವಿಲ್ಲದೆಯೂ ಸುಮ್ಮನೆ ಮನರಂಂಜನೆಗಾಗಿ ಸಿನಿಮಾ ನೋಡುವಂಥವರೂ ಹೊಸತಾದ ತಾತ್ವಿಕತೆಯೊಂದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತೆ ರೂಪಾತ್ಮಕ ಭಾಷೆಯೊಂದರಲ್ಲಿ ಪ್ರಸ್ತುತಪಡಿಸಬೇಕೆಂದು ಭಾವಿಸಿದ್ದರು. ಮಾರ್ಷಲ್ ‘ಮ್ಯಾಕ್ಲೂಹಾನ್‌ನ ಮಾಧ್ಯಮವೇ ಸಂದೇಶ’ದಂಥ ಪರಿಕಲ್ಪನೆಗಳನ್ನು ಮುಂದಿಟ್ಟುಕೊಂಡು ಚಿಂತಿಸುತ್ತಿದ್ದ ಗುರುಗಳು ಇದೇ ದೃಷ್ಟಿಯಲ್ಲಿ ಲೋಕವ್ಯಾಪಿಯಾಗಿ ಅರ್ಥ ಮಾಡಿಕೊಳ್ಳಬಲ್ಲ ನವ ಪಠ್ಯವೊಂದನ್ನು ತಮ್ಮ ದೃಷ್ಟಿಯ ರೂಪಾತ್ಮಕ ಭಾಷೆಯಲ್ಲಿ ಸೃಷ್ಟಿಸಲು ಹಾತೊರೆದಿದ್ದರು.ನಾರಾಯಣಗುರುಗಳನ್ನು ಮನುಕುಲಕ್ಕಾಗಿ ಪುನರಾವಿಷ್ಕರಿಸಿದ ನಟರಾಜ ಗುರುಗಳ ಚಿಂತನೆಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಇನ್ನೂ ಎಷ್ಟು ಕಾಲಬೇಕೆಂದೇ ತಿಳಿಯುತ್ತಿಲ್ಲ. ನಾರಾಯಣ ಗುರುಗಳ ತಮಗೆ ತಾವೇ ಕುರಿತು ಪ್ರಶ್ನಿಸಿಕೊಂಡು ನಟರಾಜ ಗುರು ಉದ್ಧರಿಸಿದ್ದು ಬಾಬ್ ಡಿಲಾನ್‌ನ ಈ ಸಾಲನ್ನು- ‘ಉತ್ತರ ಗಾಳಿಯಲ್ಲಿ ಅಲೆಯುತ್ತಿದೆ’. ನಟರಾಜ ಗುರುಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆಯೂ ಇದನ್ನೇ ಹೇಳಬಹುದೇನೋ
.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry