ಶನಿವಾರ, ಮೇ 15, 2021
26 °C

ವಿಶ್ವರೂಪ ಗಣಪ

ಪ್ರಜಾವಾಣಿ ವಾರ್ತೆ. Updated:

ಅಕ್ಷರ ಗಾತ್ರ : | |

ಕಿಕ್ಕೇರಿ: ಗಣೇಶ ಚತುರ್ಥಿ ಅಂಗವಾಗಿ ಗುರುವಾರ ಪಟ್ಟಣದ ಜಯಲಕ್ಷ್ಮೀ ಹಾಗೂ ರೋಹಿತ್ ಕಾನ್ವೆಂಟ್‌ನಲ್ಲಿ ಪ್ರತಿಷ್ಠಾಪಿಸಿದ ಪರಿಸರ ಸ್ನೇಹಿ ಗಣಪ ಜನರನ್ನು ಆಕರ್ಷಿಸಿತು.ಸಾರ್ವಜನಿಕರು ಹಬ್ಬದ ಸಲುವಾಗಿ ಮೋದಕ ಗಣಪನನ್ನು ಪ್ರತಿಷ್ಠಾಪಿಸಿ ಕಡಬು, ಖರ್ಜಿಕಾಯಿ, ಕಾಯಿ ಪಲ್ಯೆಯಂತಹ ಬಗೆಬಗೆಯ ಭಕ್ಷ್ಯ ಭೋಜನವನ್ನು ನೈವೇದ್ಯವಿಟ್ಟು ತಮ್ಮ ವಿಘ್ನ ಪರಿಹಾರಕ್ಕೆ ಪ್ರಾರ್ಥಿಸಿದರು. ಹುಡುಗಿಯರ ದಂಡು ಮನೆ ಮನೆಗೆ ತೆರಳಿ 101ಗಣಪತಿ ನೋಡಲೇಬೇಕು ಎಂದು ಕಾತರಿಸಿತು. ಹೋಬಳಿಯ ಸೊಳ್ಳೇಪುರ, ಮಾದಾಪುರ, ಆನೆಗೂಳ, ಚಿಕ್ಕರಳೆ, ಕೃಷ್ಣಾಪುರ, ಚುಜ್ಜಲಕ್ಯಾತನಹಳ್ಳಿ, ಚೌಡೇನಹಳ್ಳಿಯಲ್ಲದೆ ವಿವಿಧೆಡೆಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಯನ್ನು ಮೆರೆದರು.ನೀಲ ಮೇಘ ಗಣಪ

ಮದ್ದೂರು: ಗೋವುಗಳನ್ನು ಕಾಯುತ್ತಿರುವ ಗೋಪಾಲ ಕೃಷ್ಣ. ಆತನನ್ನು ಸುತ್ತುವರಿದಿರುವ ಗೋವುಗಳು... ಒಂದೆಡೆ ಬೆಣ್ಣೆ ಗಡಿಗೆ, ಇನ್ನೊಂದೆಡೆ ಮೊಸರು ಮಡಿಕೆ... ಈ ನಡುವೆ ಗಣೇಶ ವಿರಾಜಮಾನನಾಗಿದ್ದಾನೆ.ಇದು ಪಟ್ಟಣದ ಲೀಲಾವತಿ ಬಡಾವಣೆ 3ನೇ ಕ್ರಾಸ್‌ನಲ್ಲಿ ವಾಸವಾಗಿರುವ ರಾಜೇಶ್ ಅವರ ಮನೆಯಲ್ಲಿ ಗಣೇಶ ಚುತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಲಾದ ನೀಲ ಮೇಘ ಗಣೇಶನ ವಿಶೇಷ ಚಿತ್ರಣ.ಕಳೆದ 15ವರ್ಷಗಳಿಂದ ಹೀಗೆ ವಿಶೇಷವಾಗಿ ಗಣೇಶನನ್ನು ಪ್ರತಿಷ್ಠಾಪಿಸುವ ಹವ್ಯಾಸ ಹೊಂದಿರುವ ರಾಜೇಶ್ ಪಟ್ಟಣದ ಮಹಾವೀರ ವಿದ್ಯಾಸಂಸ್ಥೆಯಲ್ಲಿ ಮುಖ್ಯಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ವರ್ಷ ವಿಶೇಷವಾಗಿ ಕೃಷ್ಣಾಷ್ಠಮಿ ಹಾಗೂ ಗಣೇಶ ಚತುರ್ಥಿ ಒಂದೇ ಮಾಸದಲ್ಲಿ ಒಟ್ಟೊಟ್ಟಿಗೆ ಬಂದ ಹಿನ್ನೆಲೆಯಲ್ಲಿ ಈ ಬಾರಿ ನೀಲ ಮೇಘ ಗಣೇಶನನ್ನು ಪ್ರತಿಷ್ಠಾಪಿಸುವ ಮೂಲಕ ಜನರ ಆಕರ್ಷಣೆ ಹಾಗೂ ಪ್ರಶಂಸೆಗೆ ಪಾತ್ರರಾಗಿದ್ದಾರೆ.  ವಿಶೇಷ ಪೂಜೆ

ಮೇಲುಕೋಟೆ: ಗಣೇಶಚೌತಿಯ ನಿಮಿತ್ತ ಮೇಲುಕೋಟೆ ಪುರಾತನ ಏಕಶಿಲಾ ಗಣಪತಿಯ ಸನ್ನಿಧಿಯಲ್ಲಿ ಗುರುವಾರ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.  ಸಂಜೆ ಚೆಲುವರಾಯಸ್ವಾಮಿ ದೇವಾಲಯದಿಂದ ಮಣ್ಣಿನ ಗಣೇಶನ ಮೂರ್ತಿಯನ್ನು ಏಕಶಿಲಾ ಗಣಪತಿಯ ಸನ್ನಿಧಿಗೆ ಕೊಂಡೊಯ್ದು ಪ್ರತಿಷ್ಠಾಪಿಸಲಾಯಿತು. ದೇವಾಲಯದ ಪರವಾಗಿ ಗಣೇಶನ ಪೂಜೆ ವೇಳೆ ಸ್ಥಾನಿಕ ನಾಗರಾಜ ಅಯ್ಯಂಗಾರ್ ಮತ್ತು ಬಂಡೀಕಾರರು ಹಾಜರಿದ್ದರು. ಮೇಲುಕೋಟೆಯ ನೂರಾರು ಮಂದಿ ಭಕ್ತರು ತಮ್ಮ ಮಕ್ಕಳೊಂದಿಗೆ ಏಕಶಿಲಾ ಗಣಪತಿಯ ಸನ್ನಿಧಿಗೆ ತೆರಳಿ ವಿದ್ಯಾಬುದ್ಧಿ ಕರುಣಿಸು ಎಂದು ಪ್ರಾರ್ಥಿಸಿ ಗಣಪನಿಗೆ ಪೂಜೆ ಸಲ್ಲಿಸಿದರು.ಮೇಲುಕೋಟೆಯ ರಾಜಬೀದಿಯ ಮಂಟಪವೊಂದರಲ್ಲೂ ಬೃಹತ್ ಮಹಾಗಣಪತಿಯನ್ನು ಯುವಕರು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ಜಕ್ಕನಹಳ್ಳಿಯಲ್ಲೂ ವಿನಾಯಕ ಭಕ್ತವೃಂದ ಚಪ್ಪರ ಹಾಕಿ ಸುಂದರ ವೇದಿಕೆ ನಿರ್ಮಿಸಿ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೇಲುಕೋಟೆ ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ಬಂದೋಬಸ್ತ್ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.