ವಿಶ್ವವಿದ್ಯಾಯಲಯ ಕಾಲೇಜಿನಲ್ಲಿ ಗಾಂಧೀಜಿಯ ಸೃಜನಶೀಲ ಸ್ಮರಣೆ

7

ವಿಶ್ವವಿದ್ಯಾಯಲಯ ಕಾಲೇಜಿನಲ್ಲಿ ಗಾಂಧೀಜಿಯ ಸೃಜನಶೀಲ ಸ್ಮರಣೆ

Published:
Updated:

ಮಂಗಳೂರು: ಅಲ್ಲಿ ಗಾಂಧೀಜಿಯ ಅಣಿಮುತ್ತು­ಗಳಿದ್ದವು, ಗಾಂಧೀಜಿಯ ಕೈಬರಹದ ಪಡಿಯಚ್ಚು ಬಟ್ಟೆಯಲ್ಲಿ ಕಸೂತಿಯಾಗಿ ‘ಮುದ್ರಣ’ಗೊಂಡಿತ್ತು, ದಕ್ಷಿಣ ಆಫ್ರಿಕಾದ ಪೀಟರ್ಸ್‌ ಮೆರಿಟ್ಸ್‌ಬರ್ಗ್‌ನಲ್ಲಿ ರೈಲು ಗಾಡಿಯಿಂದ ಗಾಂಧೀಜಿಯನ್ನು ಹೊರದೂಡಿದ ಘಟನೆ ಅಲ್ಲಿ ಮೂರ್ತರೂಪ ಪಡೆದಿತ್ತು...ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲಿಷ್‌ ಸಂಘದ ಆಶ್ರಯದಲ್ಲಿ ರವೀಂದ್ರ ಕಲಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮೋಹನದಾಸ ಕರಮಚಂದ ಗಾಂಧಿ ಸ್ಮರಣೆ’ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ವಸ್ತು ಪ್ರದರ್ಶನದಲ್ಲಿ ಕಂಡುಬಂದ ದೃಶ್ಯಗಳಿವು. ಮಹಾತ್ಮ ಗಾಂಧೀಜಿಯ ಬದುಕು– ಬರಹಗಳನ್ನು ಸೃಜನಶೀಲವಾಗಿ ಕಟ್ಟಿಕೊಡುವ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಿದರು.ಪ್ರದರ್ಶನದಲ್ಲಿ ಗಾಂಧೀಜಿಯ ಕುರಿತು ಕನ್ನಡದ ಖ್ಯಾತ ಸಾಹಿತಿಗಳು ಬರೆದ ಕವನದ ಸಾಲುಗಳು ಗಮನ ಸೆಳೆದವು.  

‘ನಿನ್ನ ಕಂಡು ಬೆರಗಾದರು, ನಿನಗೆ ನಮೋ ನಮೋ ಎಂದರು

ನಿನ್ನ ಹೊಗಳಿ ಹಾಡಿದರು, ಹಣ್ಣುಕಾಯಿ ತಂದರು

ನಿನ್ನ ಪಥವ ಮರೆತು, ನಿನ್ನ ಪದಕೆ ಅಡ್ಡ ಬಿದ್ದರುನಿನಗೆ ಗುಡಿಯ ಕಟ್ಟಿ ತಾವು ಬಚ್ಚಲಲ್ಲೇ ನಿಂದರು..’ ಎಂದು ನವೋದಯದ ಕವಿ ಗೋಪಾಲಕೃಷ್ಣ ಅಡಿಗರು ಗಾಂಧೀಜಿಯನ್ನು ವರ್ಣಿಸಿದ್ದರೆ,

ಕವಿ ಕೃಷ್ಣಮೂರ್ತಿ ಪುರಾಣಿಕ್‌ ಅವರು ‘ಅರೆಹೊಟ್ಟೆ ಹಸಿದವರ ಎದೆಯರಸ ಬಾರಯ್ಯ’ ಎಂದು ಕರೆದಿದ್ದರು. ಕವಿ ಕಯ್ಯಾರ ಕಿಂಞಣ್ಣ ರೈ, ಚಂ.ಪಾ ಮೊದಲಾದ ಹಿರಿಯ ಕವಿಗಳು ಕಟ್ಟಿಕೊಟ್ಟ ಗಾಂಧೀಜಿಯ ವ್ಯಕ್ತಿತ್ವವನ್ನು ಕಾಣುವ ಅವಕಾಶ ವಿದ್ಯಾರ್ಥಿಗಳಿಗೆ ಒದಗಿ ಬಂತು.ಪತ್ರ ಸಂಚಯ: ಗಾಂಧೀಜಿಯವರು ವಿಶ್ವದ ಗಣ್ಯ ವ್ಯಕ್ತಿಗಳಿಗೆ ಬರೆದ ಪತ್ರಗಳು, ಗಣ್ಯ ವ್ಯಕ್ತಿಗಳಿಂದ ಗಾಂಧೀಜಿಗೆ ಬಂದಿದ್ದ ಪತ್ರಗಳು ಪ್ರದರ್ಶನದ ಆಕರ್ಷಣೆಯಾಗಿದ್ದವು. ಅದರಲ್ಲೂ ಮಹಾಯುದ್ಧ ಸಂದರ್ಭದಲ್ಲಿ ಗಾಂಧೀಜಿಯು ಹಿಟ್ಲರ್‌ಗೆ ಮಾನವೀಯತೆ ಮಹತ್ವ ಸಾರಿ ಬರೆದ ಪತ್ರ ಅಹಿಂಸಾ ವಾದವನ್ನು ಅವರು ಎಷ್ಟು ಉತ್ಕಟವಾಗಿ ಅನುಸರಿಸುತ್ತಿದ್ದರು ಎಂಬುದನ್ನು ಹೇಳುತಿತ್ತು.ಗಾಂಧೀಜಿಯ ಕುರಿತು ಖ್ಯಾತ ಚಿತ್ರಕಾರರು ರಚಿಸಿದ್ದ ರೇಖಾಚಿತ್ರಗಳನ್ನು ಆಧರಿಸಿ ವಿದ್ಯಾರ್ಥಿಗಳೇ ರಚಿಸಿದ ಚಿತ್ರಗಳೂ ಗಮನ ಸೆಳೆದವು. ಗಾಂಧೀಜಿ ಬರೆದ ಪ್ರಮುಖ ಪುಸ್ತಕಗಳು ಹಾಗೂ ಗಾಂಧೀಜಿಯ ಕುರಿತು ಇತರರು ಬರೆದ ಪುಸ್ತಕಗಳು ಪ್ರದರ್ಶನದಲ್ಲಿದ್ದವು.ವಿದ್ಯಾರ್ಥಿಗಳು ಗಾಂಧಿ ಭಜನೆ್ ಮೂಲಕ ರಾಷ್ಟ್ರಪಿತನನ್ನು ಸ್ಮರಿಸಿದರು.

ಗಾಂಧೀಜಿಯ ವಿಚಾರಧಾರೆಯ ಬಗ್ಗೆ ಮಾತ­ನಾಡಿದ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ, ‘ಸತ್ಯ ಎಂದರೆ ಸಿದ್ಧ­ವಸ್ತುವಲ್ಲ. ಸಂಕಷ್ಟದ ಸಮಯದಲ್ಲಿ ಕಂಡುಕೊಳ್ಳುವ ಬೆಳಕೇ ಸತ್ಯ ಎಂದು ಗಾಂಧೀಜಿ ಪ್ರತಿಪಾದಿಸಿದ್ದರು. ಜಗತ್ತೇ ಹಿಂಸೆಯ ಜಪ ಮಾಡುತ್ತಿದ್ದಾಗ, ಮಹಾಯುದ್ಧದ ಸಂದರ್ಭದಲ್ಲಿ ವಿಶ್ವದೆಲ್ಲೆಡೆ ರಕ್ತದ ಕೋಡಿಯೇ ಹರಿಯುತ್ತಿದ್ದಾಗ ಗಾಂಧೀಜಿ ಅಹಿಂಸೆಯನ್ನು ಪ್ರತಿಪಾದಿಸಿದರು. ಅವರ ತತ್ವ ಜಗತ್ತಿಗೆ ಹೊಸ ಭಾಷೆಯನ್ನು ಕಲಿಸಿತು. ನಮಗಿಂದು ಗಾಂಧೀಜಿಯ ಹೆಸರು ಗೊತ್ತಿದೆ­ಯಾದರೂ, ಅವರು ಪ್ರತಿಪಾದಿಸಿದ ವಿಚಾರಗಳು ತಿಳಿದಿಲ್ಲ. ಉಗ್ರವಾದ, ಪರಸ್ಪರ ಅಪನಂಬಿಕೆಯನ್ನು ಬೆಳೆಸುತ್ತಿರುವ ಇಂದಿನ ಕಾಲಘಟ್ಟದಲ್ಲಿ ಗಾಂಧೀಜಿ ವಿಚಾರಗಳನ್ನು ಮನನ ಮಾಡಬೇಕಿದೆ’ ಎಂದರು.ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಭಟ್ಟ ಎಚ್‌.ಆರ್‌ ಅವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿ­ದರು. ವಿದ್ಯಾರ್ಥಿಗಳು ನೆರಳು ಬೆಳಕಿನಲ್ಲಿ ದಂಡಿ­ಯಾತ್ರೆಯ ಘಟನಾವಳಿಗಳನ್ನು ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry