ವಿಶ್ವವಿದ್ಯಾಲಯದ ಸ್ವಾರ್ಥ ರಾಜಕಾರಣದ ಆಟ

7

ವಿಶ್ವವಿದ್ಯಾಲಯದ ಸ್ವಾರ್ಥ ರಾಜಕಾರಣದ ಆಟ

Published:
Updated:

ಸ್ವಾರ್ಥರಾಜಕಾರಣದ ಚುಕ್ಕಾಣಿ ಹಿಡಿದು ಗದ್ದುಗೆಗೇರುವ ನಾಯಕರುಗಳು ಎನಿಸಿಕೊಂಡವರು ಸ್ವಜನ ಪಕ್ಷಪಾತ ರಾಜಕೀಯ ಮಾಡಿ ತಮಗೆ ಬೇಕಾದವರನ್ನು ಆಕಟ್ಟಿನ ಜಾಗಗಳಲ್ಲಿ ಕೂರಿಸುತ್ತಾರೆ ಎನ್ನುವುದು ಎಷ್ಟು ಬಹಿರಂಗ ಸತ್ಯವೊ ಅಷ್ಟೇ ವಾಸ್ತವ, ಆಕಟ್ಟಿನ ಜಾಗಗಳಲ್ಲಿ ಕೂತವರೂ ಸ್ವಜನ ಪಕ್ಷಪಾತಗಳಲ್ಲಿ ಮುಳುಗಿರುತ್ತಾರೆ ಎನ್ನುವುದು. ಇದಕ್ಕೆ ನಿದರ್ಶನವಾಗಿ ನನ್ನ ಮೌಖಿಕ ಸಂದರ್ಶನದ ಒಂದು ಕಹಿ ಅನುಭವವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಕಳೆದ ಮಾರ್ಚ್ 2012ರಲ್ಲಿ ವಿವಿಧ ವಿಷಯಗಳಿಗೆ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಅಸೊಸಿಯೇಟ್ ಪ್ರೊಫೆಸರ್ ಹುದ್ದೆಗೆ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಹುದ್ದೆಗಳ  ಆಯ್ಕೆ ಪ್ರಕ್ರಿಯೆ ನಡೆದು ಡಿಸೆಂಬರ್‌ನಲ್ಲಿ ಸಂದರ್ಶನಕ್ಕೆ ಕರೆಯಲಾಗಿತ್ತು. ನನಗೆ ಡಿ.4 ರಂದು ಸಂದರ್ಶನವಿತ್ತು. ಈ ಆಯ್ಕೆ ಪ್ರಕ್ರಿಯೆಯಲ್ಲಿ ಅತಿ ಜಾಣತನ ಹಾಗು ಜಾಗರೂಕತೆ ಎದ್ದು ಕಾಣುತ್ತಿತ್ತು.ಏಕೆಂದರೆ ನಾನು ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಅಸೊಸಿಯೇಟ್ ಪ್ರೊಫೆಸರ್ ಎರಡೂ ಹುದ್ದೆಗಳಿಗೆ ಅರ್ಜಿ ಹಾಕಿದ್ದೆನಾದರು ಸಂದರ್ಶನವನ್ನು ನಾನು ನಿರೀಕ್ಷಿಸಿದ್ದು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ. ಏಕೆಂದರೆ ಅಸೊಸಿಯೇಟ್ ಪ್ರೊಫೆಸರ್ ಹುದ್ದೆಗೆ ಕನಿಷ್ಠ ಸೇನಾನುಭವ ಹೊಂದಿದ್ದೆನಾದ್ದರಿಂದ ನಾನು ಈ ಹುದ್ದೆಗೆ ಅವರು ನನ್ನ ಅರ್ಜಿಯನ್ನು ಅಂಗೀಕರಿಸುತ್ತಾರೆ ಎಂಬುದನ್ನು ನಿರೀಕ್ಷಿಸಿಯೆ ಇರಲಿಲ್ಲ. ಆದರೆ ಅನಿರೀಕ್ಷಿತಗಳು ಸಂಭವಿಸುವುದು ಇಂಥ ವಿಶ್ವವಿದ್ಯಾಲಯಗಳಲ್ಲೆ.ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಗರಿಷ್ಠ ಬೋಧನಾನುಭವ ಮತ್ತು ವಿಶ್ವವಿದ್ಯಾಲಯ ಕೇಳಿದ ಇತರೆ ಅರ್ಹತೆಗಳು ಇದ್ದಾಗ್ಯೂ ಆ ಅರ್ಜಿಯನ್ನು ಪರಿಗಣಿಸದೆ ಸ್ಪರ್ಧೆಯಿಂದ ದೂರ ಉಳಿಯುವ ಅಸೊಸಿಯೇಟ್ ಪ್ರೊಫೆಸರ್ ಹುದ್ದೆಯ ಅರ್ಜಿಯನ್ನೆ ಹೆಕ್ಕಿ ತೆಗೆದು ಸಂದರ್ಶನ ಪತ್ರ ಕಳುಹಿಸಿದ್ದು ವಿಶ್ವವಿದ್ಯಾಲಯದ ಆಯ್ಕೆ ಮಾನದಂಡದ ಚಾಲಾಕಿತನವನ್ನು ತೋರಿಸುತ್ತದೆ. ಇದನ್ನು ಮನಗಂಡೇ ವಿಶ್ವವಿದ್ಯಾಲಯದಲ್ಲಿ ನಡೆಸುವ ಸಂದರ್ಶನದ ಅನುಭವವನ್ನು ಪಡೆಯಲು ಹೊರಟೆ.ಬೆಳಿಗ್ಗೆ 9.30 ಗಂಟೆಗೆ ಸಂದರ್ಶನವಿದ್ದು ಆಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ 8.30ಕ್ಕೆ ತಮ್ಮೆಲ್ಲ ಅಸಲಿ ಅಂಕಪಟ್ಟಿ ಮತ್ತು ವಿವಿಧ ದಾಖಲೆಗಳೊಂದಿಗೆ ಹಾಜರಿರತಕ್ಕದ್ದು ಎಂದು  ಸಂದರ್ಶನ ಪತ್ರದಲ್ಲಿ ಸೂಚನೆ ಇತ್ತು. ಒಂದು ಗಂಟೆ ಮುಂಚಿತವಾಗಿ ಬರಲು ಹೇಳಿದ್ದು ನಮ್ಮ ಅಸಲಿ ಅಂಕಪಟ್ಟಿ ಮತ್ತು ದಾಖಲೆಗಳನ್ನು ಪರಿಶೀಲಿಸಲು ಎಂದುಕೊಂಡಿದ್ದೆ. ಆದರೆ ಅಲ್ಲಿ ಅಸಲಿ ಇರಲಿ ಜೆರಾಕ್ಸ್ ಪ್ರತಿಗಳನ್ನೆ ನೋಡಲಿಲ್ಲ. ಸಂದರ್ಶನ ನಡೆಯುವಾಗ ಅವುಗಳನ್ನು ಪರಿಶೀಲಿಸಬಹುದೆಂದು ಆಗಮಿಸಿದ್ದ ಇತರ ಆಭ್ಯರ್ಥಿಗಳ ರೀತಿಯಲ್ಲೇ ನಾನು ಸಮಾಧಾನಗೊಂಡಿದ್ದೆ.ಮೊದಲ ಆಭ್ಯರ್ಥಿಯ ಸಂದರ್ಶನ ಮುಗಿದ ನಂತರ ತಿಳಿಯಿತು ಕುಲಪತಿಗಳಿಗೂ ಮತ್ತು ಅವರ ಪ್ಯಾನಲಿಸ್ಟ್ ಮೆಂಬರ್ಸ್‌ಗಳಿಗೂ ನಮ್ಮ ಯಾವ ಅರ್ಹತೆಯ ದಾಖಲೆಗಳು ಬೇಕಿರಲಿಲ್ಲವೆಂದು. ಕಾಟಾಚಾರದ ಸಂದರ್ಶನ ಎಲ್ಲವನ್ನೂ ಧ್ವನಿಸುವಂತಿತ್ತು. ಮೊದಲೆ ಗಿಳಿಪಾಠವಾಗಿದ್ದ ಪ್ರಶ್ನೆಗಳನ್ನು ಸಂದರ್ಶಕರು ಕೇಳುವ ಪರಿಯೇ ಅಲ್ಲಿನ ಸೂಕ್ಷ್ಮತೆಯನ್ನು ಹೇಳುತ್ತಿತ್ತು. ಆ ಸಂದರ್ಶನ ಪಿ.ಎಚ್.ಡಿ ಮೌಖಿಕ ಸಂದರ್ಶನದಂತಿತ್ತು. ತಲೆಗೊಂದರಂತೆ ಅವರು ಕೇಳುತ್ತಿದ್ದ ಪ್ರಶ್ನೆಗಳು ಮಹಾಪ್ರಬಂಧಕ್ಕೆ ಸಂಬಂಧಪಟ್ಟವಷ್ಟೆ.ಪ್ರಾಯೋಗಿಕವಾಗಿ ಆ ಹುದ್ದೆಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲೇ ಇಲ್ಲ! ಉದ್ಯೋಗ ಆಕಾಂಕ್ಷಿಗಳ ನಿರೀಕ್ಷೆಗಳನ್ನು ಹುಸಿಗೊಳಿಸದಿರಲಿಕ್ಕಾದರೂ ಮೂಲಭೂತವಾಗಿ ಕೇಳಲೇಬೇಕಾಗಿದ್ದ, ಬೋಧನೆಗೆ ಸಂಬಂಧಿಸಿದಂತೆ ಕನಿಷ್ಠ ಯಾವ ಪ್ರಶ್ನೆಗಳನ್ನು ಕೇಳಬೇಕೆಂಬ ಸೂಕ್ಷ್ಮಜ್ಞತೆಯನ್ನೆ ಸವರಿಕೊಂಡು ಬಂದಂತಿದ್ದರು. ಇದೊಂದು ಪೂರ್ವಯೋಜಿತ ಸಂದರ್ಶನವೆಂಬುದು ಬಂದ ಅಭ್ಯರ್ಥಿಗಳಿಗೆಲ್ಲ ಗೊತ್ತಾಗುವಂತಿತ್ತು. ಇಂದು ಜ್ಞಾನದ ಆಲಯಗಳಾಗಬೇಕಿದ್ದ ವಿಶ್ವವಿದ್ಯಾಲಯಗಳು ಸ್ವಾರ್ಥಕೇಂದ್ರಿತ, ಜಾತಿಕೇಂದ್ರಿತ ಆಲಯಗಳಾಗಿ ಗುರುತಿಸಿಕೊಳ್ಳುತ್ತಿವೆ. ಕೆಳದರ್ಜೆಯ ನೌಕರನಿಂದ ಹಿಡಿದು `ಘನತೆವೆತ್ತವರು `ಘನತೆಯಿಲ್ಲದವರೂ' ಇಂಥವುಗಳಲ್ಲಿ ಪಾಲುಗೊಳ್ಳುತ್ತಿರುವುದನ್ನು ನೋಡಿದರೆ ಅದು ಎಂದೊ ತೀರಿಕೊಂಡಿದ್ದರ ಕುರುಹನ್ನು ತೋರಿಸುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry