ವಿಶ್ವಶಾಂತಿಗೆ ಯತ್ನಿಸುವುದೇ ಮಾನವಧರ್ಮ

7

ವಿಶ್ವಶಾಂತಿಗೆ ಯತ್ನಿಸುವುದೇ ಮಾನವಧರ್ಮ

Published:
Updated:

ಬಸವಾಪಟ್ಟಣ:  ಜಗತ್ತನ್ನು ಕಾಡುತ್ತಿರುವ ಅಶಾಂತಿ ಹೋಗಲಾಡಿಸಲು ಎಲ್ಲರೂ ಕಾರ್ಯೋನ್ಮುಖರಾಗಬೇಕು ಎಂದು ಬೆಂಗಳೂರಿನ ರೆ.ಫಾ. ಡಾ.ರೋನಿಕ್ ಪ್ರಭು ಕರೆ ನೀಡಿದರು.ಸಮೀಪದ ಪುಣ್ಯಸ್ಥಳದ ರಾಘವೇಂದ್ರ ಕೃಪಾಶ್ರಮದ ಸಂಸ್ಥಾಪಕ ರಾಘವೇಂದ್ರ ಗುರೂಜಿ ಅವರ 14ನೇ ಪುಣ್ಯತಿಥಿಯ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಸರ್ವಧರ್ಮ ಸಮನ್ವಯ ಕಾರ್ಯಕ್ರಮ  ಉದ್ಘಾಟಿಸಿ ಅವರು ಮಾತನಾಡಿದರು.ತಾರತಮ್ಯ ಮರೆತು ಒಬ್ಬರನ್ನು ಒಬ್ಬರು ಪ್ರೀತಿಸಿದಾಗ ಇಡೀ ವಿಶ್ವ ಆನಂದಮಯವಾಗುತ್ತದೆ. ಈ ಗುರಿಯ ಸಾಧನೆಗಾಗಿ ಶ್ರಮಿಸಬೇಕು ಎಂದು ಹೇಳಿದರು.ನವದೆಹಲಿಯ ಜಾಮಿಯಾ ಮಸೀದಿಯ ಮುಖ್ಯಸ್ಥ ಡಾ.ಜರೂರ್ ಹಕ್ ಮಾತನಾಡಿ, ಜಗತ್ತಿನಲ್ಲಿ ಅನೇಕ ಧರ್ಮಾಚರಣೆಯ ಜನರಿದ್ದಾರೆ. ಅವರೆಲ್ಲರ ಗುರಿ ಮಾನವ ಪ್ರೀತಿ ಆಗಿದ್ದರೆ ಮಾತ್ರ ಈ ಮಾನವ ಸಮಾಜ ಸುಂದರವಾಗಲು ಸಾಧ್ಯ. ಹಿಂಸೆ ಅಳಿಸಿ, ಪರಸ್ಪರ ಪ್ರೀತಿ ವಾತ್ಸಲ್ಯ ರೂಢಿಸಿಕೊಂಡಾಗ ನೆಮ್ಮದಿಯ ಜೀವನ ನಡೆಸಬಹುದು ಎಂದರು.ಶಿವಮೊಗ್ಗ ಸಿಖ್ ಗುರುದ್ವಾರದ ಮುಖ್ಯಸ್ಥ ಉಜ್ಗರ್‌ಸಿಂಗ್‌ಜಿ ಮಾತನಾಡಿ, ಈ ಜಗತ್ತಿನ ಸೃಷ್ಟಿಕರ್ತನಾದ ದೇವರನ್ನು ನಂಬಿ ಬದುಕು ಸಾಗಿಸಿದವ ನಿಜವಾದ ಮಾನವ ಎನಿಸಿಕೊಳ್ಳುತ್ತಾನೆ. ಜೀವನದಲ್ಲಿ ಭಯ-ಭಕ್ತಿ ರೂಢಿಸಿಕೊಂಡಾಗ ಜೀವನ ಸಂತಸಮಯ ಆಗುತ್ತದೆ ಎಂದು ಹೇಳಿದರು.ದಾವಣಗೆರೆಯ ರಾಮಕೃಷ್ಣ ಆಶ್ರಮದ ಮಾತೆ ಯೋಗಾನಂದಜಿ ಮಾತನಾಡಿ, ಅಂತರಂಗದಲ್ಲಿರುವ ಅನೀತಿ ದೂರ ಮಾಡಿ ಭಗವಂತನನ್ನು ನಿಷ್ಕಲ್ಮಷ ಮನಸ್ಸಿನಿಂದ ಪ್ರಾರ್ಥಿಸಿದಾಗ ಮನುಷ್ಯ ಶ್ರೇಷ್ಠನಾಗುತ್ತಾನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ದೆಹಲಿಯ ಟಿಬೆಟಿಯನ್ ಹೌಸ್‌ನ ಮುಖ್ಯಸ್ಥ ಗೀಷೆ ದೋರ‌್ಜಿ ಮಾತನಾಡಿ, ಎಲ್ಲಾ ಧರ್ಮಗಳು ಶಾಂತಿ ಸಂದೇಶ ನೀಡಿವೆ.

 

ಆದರೆ, ಇದರಲ್ಲಿ ವೈವಿಧ್ಯತೆ ಎಂಬ ಲೋಪದೋಷ  ಸೇರಿಸಿಕೊಂಡಾಗ ಸಂಕುಚಿತ ಧಾರ್ಮಿಕ ಭಾವನೆ ಮೂಡಿ ಮಾನವೀಯ ಮೌಲ್ಯಗಳಿಗೆ ಆಘಾತ ಉಂಟಾಗುತ್ತಿದೆ. ಮನುಷ್ಯ ಇದರಿಂದ ದೂರವಾಗಿ ತನ್ನ ಕುಟುಂಬದೊಂದಿಗೆ ಇಡೀ ವಿಶ್ವವನ್ನು ಪ್ರೀತಿಸುವ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು.

 

ಇದರೊಂದಿಗೆ ಪ್ರಪಂಚದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬೆಳವಣಿಗೆಯೂ ಆದಾಗ ನೆಮ್ಮದಿಯ ವಿಶ್ವ ಕಾಣಲು ಸಾಧ್ಯ. ಈ ಗುರಿ ಆಧಾರವಾಗಿ ಇಟ್ಟುಕೊಂಡು ರಾಘವೇಂದ್ರ ಗುರೂಜಿ ಅವರು ಜಗತ್ತಿನಲ್ಲಿಯೇ ಮೊಟ್ಟಮೊದಲ ಈ ಪಂಚಪವಿತ್ರ ಧರ್ಮಗ್ರಂಥ ಮಂದಿರ ಮತ್ತು ಸರ್ವಧರ್ಮ ಸ್ತೂಪ ಸ್ಥಾಪಿಸಿ ಧರ್ಮ ಸಮನ್ವಯತೆ ಮೆರೆದಿದ್ದಾರೆ. ಇದು ಇಂದಿನ ಪೀಳಿಗೆಗೆ ಆದರ್ಶವಾಗಬೇಕು ಎಂದು ಹೇಳಿದರು.ಶಿವಮೊಗ್ಗದ ಪಾರ್ಶ್ವನಾಥ ಜೈನ್ ಮಾತನಾಡಿ, ಮಹಾವೀರರು ಬೋಧಿಸಿದ ಅಹಿಂಸಾ ತತ್ವ ಆಧಾರವಾಗಿಟ್ಟುಕೊಂಡು ಜೀವನ ನಡೆಸಿದರೆ ಪ್ರಪಂಚ ಸುಖಮಯವಾಗುತ್ತದೆ ಎಂದು ತಿಳಿಸಿದರು.

ಹಿರಿಯೂರು ರಾಮಕೃಷ್ಣ ಆಶ್ರಮದ ಮಾತೆ ಚಿನ್ಮಯಿ, ಶಿವಮೊಗ್ಗ ಗುರುದ್ವಾರದ ಜಗಜಿತ್ ಸಿಂಗ್, ಪಿ. ನಜೀರ್ ಅಹಮದ್, ಮೌಲ್ವಿ ನಜೀರ್ ಅಹಮದ್, ಫಾದರ್ ಕ್ಲಮೆಂಟೋ, ಫಾದರ್ ಮಾರ್ಕ್ ಡಿಸಿಲ್ವಾ ಮಾತನಾಡಿದರು.ಇದಕ್ಕೂ ಮುನ್ನ, ರಾಘವೇಂದ್ರ ಕೃಪಾಶ್ರಮದ ಪಂಚ ಧರ್ಮಗ್ರಂಥ ದೇಗುಲಗಳಲ್ಲಿ ಹಿಂದೂ, ಕ್ರೈಸ್ತ, ಇಸ್ಲಾಂ, ಸಿಖ್, ಜೈನ ಮತ್ತು ಬೌದ್ಧ ಧರ್ಮ ಗ್ರಂಥಗಳ ಪಠಣ ಮತ್ತು ಪ್ರಾರ್ಥನೆ ನಡೆಸಲಾಯಿತು. ಕೃಪಾಶ್ರಮದ ಡಾ.ಎನ್.ಆರ್. ಸುಧಾಕರ್ ಸ್ವಾಗತಿಸಿದರು. ಸುಧಕ್ಷಿಣಾ ಸುಧಾಕರ್ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry