ಶುಕ್ರವಾರ, ಏಪ್ರಿಲ್ 16, 2021
28 °C

ವಿಶ್ವಶ್ರೀ ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ: ಬಿದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಸೇವಾವಧಿಯಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳಿಂದ ಅನೇಕ ಪ್ರಶಸ್ತಿಗಳು ಲಭಿಸಿದಾಗ ಒಂದು ರೀತಿಯ ಖುಷಿಯಾದರೆ, ಅಬ್ಬೆತುಮಕೂರು ಸಿದ್ಧಸಂಸ್ಥಾನ ಮಠದ ವಿಶ್ವಶ್ರೀ ಪ್ರಶಸ್ತಿ ದೊರೆತಿರುವುದು ವಿಶಿಷ್ಟ ಖುಷಿ ನೀಡಿದೆ. ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದು ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಹೇಳಿದರು. ತಾಲ್ಲೂಕಿನ ಅಬ್ಬೆತುಮಕೂರಿನಲ್ಲಿ ಬುಧವಾರ ರಾತ್ರಿ ಸಿದ್ಧಸಂಸ್ಥಾನ ಮಠದ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದಲ್ಲಿ ವಿಶ್ವಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಅಕ್ಕ-ತಂಗಿ ಹಾಗೂ ಸ್ವಾಮೀಜಿಗಳಿಂದ ಏನನ್ನೂ ಪಡೆಯಬಾರದೆಂಬ ಸಂಸ್ಕಾರ ಹೊಂದಿದವನು ನಾನು. ಸೋದರಿಯರಿಗೆ ಕೈಲಾದ ಮಟ್ಟಿಗೆ ಸಹಾಯ ಮಾಡಿದ್ದೇನೆಯೇ ಹೊರತು ಅವರಿಂದ ಏನನ್ನೂ ಪಡೆದಿಲ್ಲ. ಸ್ವಾಮೀಜಿಗಳಿಂದಲೂ ಅಷ್ಟೇ, ಏನನ್ನೂ ಸ್ವೀಕರಿಸಿಲ್ಲ. ಇದೀಗ ಭಾರವಾದ ಮೊತ್ತದ ವಿಶ್ವಶ್ರೀ ಪ್ರಶಸ್ತಿಯನ್ನು ಸ್ವಾಮೀಜಿ ನೀಡಿದ್ದು, ಅದು ತಪಸ್ವಿಗಳದ್ದು ಎಂಬ ಕಾರಣಕ್ಕೆ ಭಕ್ತಿ ಭಾವದಿಂದ ಸ್ವೀಕರಿಸುತ್ತಿದ್ದೇನೆ ಎಂದು ತಿಳಿಸಿದರು.ಕರ್ನಾಟಕದ ಜನರು ನನ್ನನ್ನು ಅನನ್ಯ ಭಾವದಿಂದ ಕಂಡಿದ್ದಾರೆ. ಅವರ ಪ್ರೀತಿ ವಿಶ್ವಾಸಗಳಿಗೆ, ತೋರಿದ ಅಂತಃಕರಣಕ್ಕೆ ಏಳೇಳು ಜನ್ಮವೆತ್ತಿದರೂ ಋಣ ತೀರಿಸಲಾಗದು. 33 ವರ್ಷಗಳ ಸೇವಾವಧಿಯಲ್ಲಿ ಅತ್ಯಂತ ನಿಷ್ಠೆ, ಶ್ರದ್ಧೆಯಿಂದ ದುಡಿದಿದ್ದೇನೆ. ಇನ್ನುಳಿದ ಸೇವಾವಧಿ ಮಾತ್ರವಲ್ಲ, ಕೊನೆಯ ಉಸಿರು ಇರುವವರೆಗೂ ಈ ನಾಡಿನ ಜನತೆಗಾಗಿ ದುಡಿಯುತ್ತೇನೆ ಎಂದು ಹೇಳಿದರು.ತೋಂಟದಾರ್ಯ ಶ್ರೀಗಳು, ಗವಿಸಿದ್ಧೇಶ್ವರ ಶ್ರೀಗಳು, ಗಂಗಾಧರ ಸ್ವಾಮೀಜಿಯವರು, 25 ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಪತ್ರವನ್ನು ಒಳಗೊಂಡ ವಿಶ್ವಶ್ರೀ ಪ್ರಶಸ್ತಿಯನ್ನು ಶಂಕರ ಬಿದರಿ ಅವರಿಗೆ ಪ್ರದಾನ ಮಾಡಿದರು. ಶಂಕರ ಬಿದರಿ ಅವರ ಪರಿಚಯವನ್ನು ಡಾ. ಸುಭಾಷಚಂದ್ರ ಕೌಲಗಿ ಮಾಡಿದರು. ವಿವಿಧ ಮಠಾಧೀಶರು, ಭಕ್ತ ಸಮೂಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಹೈಕೋರ್ಟ್ ವಕೀಲ ವೀರೇಶ ಪಾಟೀಲ, ಹೃದ್ರೋಗ ತಜ್ಞ ಡಾ. ವೀರೇಶ ಜಾಕಾ, ಸವರಾಪ್ಪ ಶರಣರು, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಬಾಪುರೆ, ಪೆಂಡಾಲ್ ವ್ಯವಸ್ಥೆ ಮಾಡಿದ ಮಹಾರಾಷ್ಟ್ರದ ಪಂಚಾರಿ ಸೋಲಾಪುರ, ಲಕ್ಷ್ಮಣ ಚವ್ಹಾಣ, ಬಸವರಾಜ ಯೋಗಾಪುರ, ಶಹಾಬಾದ್ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಸಿರವಾರ, ಈಶಪ್ಪಗೌಡ, ವಿಶ್ವನಾಥರೆಡ್ಡಿ ಮಾಲಿಪಾಟೀಲ, ಸಿದ್ದು ಪಾಟೀಲ, ವಿ.ಸಿ.ರಡ್ಡಿ, ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.