ವಿಶ್ವಸಂಸ್ಥೆಗೆ ಎಸ್. ಎಂ. ಕೃಷ್ಣ ಭೇಟಿ

7

ವಿಶ್ವಸಂಸ್ಥೆಗೆ ಎಸ್. ಎಂ. ಕೃಷ್ಣ ಭೇಟಿ

Published:
Updated:

ವಿಶ್ವಸಂಸ್ಥೆ (ಪಿಟಿಐ): ಎರಡು ದಿನಗಳ ಭೇಟಿಗಾಗಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ  ಇಲ್ಲಿಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಅವರು ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಂಧಿಸಿದಂತೆ ಇತರ ದೇಶಗಳ ನಾಯಕರೊಂದಿಗೆ ಶುಕ್ರವಾರ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ. ಭಾರತವು ಸುಮಾರು 19 ವರ್ಷಗಳ ತರುವಾಯ ಕಳೆದ ತಿಂಗಳು ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯನಾಗಿ ಆಯ್ಕೆಯಾದ ನಂತರ ವಿಶ್ವಸಂಸ್ಥೆಗೆ ಇದು ಕೃಷ್ಣ ಅವರ ಮೊದಲನೆಯ ಭೇಟಿಯಾಗಿದೆ.ಈ ಸಂದರ್ಭದಲ್ಲಿ ಬ್ರೆಜಿಲ್, ಜಪಾನ್ ಹಾಗೂ ಜರ್ಮನಿ ವಿದೇಶಾಂಗ ಸಚಿವರೊಂದಿಗೆ ಅವರು ಮಾತುಕತೆ ನಡೆಸಲಿದ್ದಾರೆ.  ನಂತರ  ಜಿ-4 ರಾಷ್ಟ್ರಗಳು ತಮ್ಮ ಚರ್ಚೆಯ ಫಲಿತಾಂಶಗಳ ಬಗ್ಗೆ ವಿವರಣೆ ಮಂಡಿಸುವ ನಿರೀಕ್ಷೆಯಿದೆ. ಈ ನಾಲ್ಕು ದೇಶಗಳ ವಿದೇಶಾಂಗ ಸಚಿವರು ವಿಶ್ವಸಂಸ್ಥೆ ಮಹಾಸಭೆಯ ಅಧ್ಯಕ್ಷ ಜೋಸೆಫ್ ಡೆಸ್ಸಾ ಅವರನ್ನೂ ಭೇಟಿಯಾಗಿ ಭದ್ರತಾ ಮಂಡಳಿಯ ಸುಧಾರಣೆ ಬಗ್ಗೆ ಚರ್ಚಿಸಲಿದ್ದಾರೆ. ಈಗಾಗಲೇ ಡೆಸ್ಸಾ ಭದ್ರತಾ ಮಂಡಳಿಯ ಸುಧಾರಣೆ ಪರವಾಗಿ ಮಾತನಾಡಿದ್ದಾರೆ.ಭದ್ರತಾ ಮಂಡಳಿಯಲ್ಲಿನ ಬೆಳವಣಿಗೆ ಮತ್ತು ಅಂತರರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಬ್ರೆಜಿಲ್ ವಿದೇಶಾಂಗ ಸಚಿವ ಆಂಟಾನಿಯೊ ಪ್ಯಾಟ್ರಿಯೋಟಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಕೃಷ್ಣ ಭಾಗವಹಿಸಲಿದ್ದಾರೆ. ಫೆಬ್ರುವರಿಯಲ್ಲಿ ಭದ್ರತಾ ಮಂಡಳಿಯ ಅಧ್ಯಕ್ಷೀಯ ಪೀಠ ಅಲಂಕರಿಸಿರುವ ಬ್ರೆಜಿಲ್ ಈ ಸಭೆ ಆಯೋಜಿಸಿದೆ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ಅವರೊಡನೆ ಯಾವುದೇ ಅಧಿಕೃತ ಕಾರ್ಯಕ್ರಮ ನಿಗದಿಯಾಗದಿದ್ದರೂ ಸಹ, ಪ್ಯಾಟ್ರಿಯೋಟಾ ಏರ್ಪಡಿಸಿರುವ ಔತಣಕೂಟದ ವೇಳೆ ಅವರನ್ನು ಕೃಷ್ಣ ಭೇಟಿಯಾಗಿ ಮಾತನಾಡಲಿದ್ದಾರೆ.ಭದ್ರತಾ ಮಂಡಳಿಯ ಇನ್ನೊಂದು ಆಕಾಂಕ್ಷಿ ದೇಶವಾದ ದಕ್ಷಿಣ ಆಫ್ರಿಕಾ ನಾಯಕರ ಜೊತೆಯೂ ಕೃಷ್ಣ ಸಮಾಲೋಚನೆ ನಡೆಸಲಿದ್ದಾರೆ. ಇದಲ್ಲದೆ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ಜೊತೆ ಅವರು ದ್ವಿಪಕ್ಷೀಯ ಮಾತುಕತೆಯನ್ನೂ ಮಾಡಲಿದ್ದಾರೆ. ಜಪಾನ್ ಹೊರತುಪಡಿಸಿ, ಉಳಿದ ನಾಲ್ಕು ಭದ್ರತಾ ಮಂಡಳಿ ಆಕಾಂಕ್ಷಿ ರಾಷ್ಟ್ರಗಳು ಈಗ ಕಾಯಂ ಅಲ್ಲದ  ಸದಸ್ಯರಾಗಿದ್ದು ಮುಂದೆ ಕಾಯಂ ಸದಸ್ಯರಾಗಲು ಹಾದಿ ಸುಗಮವಾಗಲಿರುವುದಾಗಿ ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಆಗಿರುವ ಹರ್ದೀಪ್ ಸಿಂಗ್ ಪುರಿ ಅಭಿಪ್ರಾಯಪಟ್ಟಿದ್ದಾರೆ.ಭದ್ರತಾ ಮಂಡಳಿಯಲ್ಲಿ ಕಾಯಂ ಮತ್ತು ಹಂಗಾಮಿ ಸದಸ್ಯತ್ವ ಎರಡೂ ವಿಸ್ತರಣೆ ಆಗಬೇಕೆಂಬ ಭಾರತದ ನಿಲುವಿಗೆ ಎಲ್-69 ಗುಂಪಿನ (ಲ್ಯಾಟಿನ್ ಅಮೆರಿಕ, ಆಫ್ರಿಕಾ, ಏಷ್ಯಾ ಹಾಗೂ ಪೆಸಿಫಿಕ್ ರಾಷ್ಟ್ರಗಳ ಒಕ್ಕೂಟ) ನೇತೃತ್ವ ವಹಿಸಿರುವ ಜಮೈಕಾ ಬೆಂಬಲ ವ್ಯಕ್ತಪಡಿಸಿದೆ. ಈ ಗುಂಪಿನ ಪ್ರತಿನಿಧಿಗಳ ಜೊತೆಯೂ ಭದ್ರತಾ ಮಂಡಳಿಯ ಸುಧಾರಣೆ ಬಗ್ಗೆ ಕೃಷ್ಣ ಸಮಾಲೋಚನೆ ನಡೆಸುವರು. ಇಂತಹ ವಿಸ್ತರಣೆಯಿಂದ ಮಾತ್ರ ಮಂಡಳಿ ಬಲಗೊಳ್ಳುವುದು ಮತ್ತು ನಿರ್ಲಕ್ಷಿತ ದೇಶಗಳಿಗೂ ಸೂಕ್ತ ಪ್ರಾತಿನಿಧ್ಯ ದೊರೆತಂತಾಗುವುದೆಂದು ಜಮೈಕಾ ರಾಯಭಾರಿ ರೇಮಂಡ್ ವೋಲ್ಫೆ  ಈಗಾಗಲೇ ಹೇಳಿದ್ದಾರೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry