ವಿಶ್ವಸಂಸ್ಥೆಯಿಂದ ಸಿರಿಯಾ ಅರ್ಜಿ ಸ್ವೀಕಾರ

7
ರಾಸಾಯನಿಕ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದ

ವಿಶ್ವಸಂಸ್ಥೆಯಿಂದ ಸಿರಿಯಾ ಅರ್ಜಿ ಸ್ವೀಕಾರ

Published:
Updated:

ವಿಶ್ವಸಂಸ್ಥೆ (ಪಿಟಿಐ): ‘ರಾಸಾಯನಿಕ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದ’ದ ಗುಂಪಿಗೆ ಸೇರಲು ಬಯಸಿ ಸಿರಿಯಾ ಸಲ್ಲಿಸಿದ್ದ ಅರ್ಜಿಯನ್ನು ವಿಶ್ವಸಂಸ್ಥೆ ಭಾನುವಾರ ಅಂಗೀಕರಿಸಿದೆ.ಸಿರಿಯಾದ ಅರ್ಜಿಯನ್ನು ಮಾನ್ಯ ಮಾಡಿ ಸ್ವಾಗತಿಸಿರುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ‘ಈ

ಸಂಬಂಧ ರಷ್ಯಾ ಮತ್ತು ಅಮೆರಿಕ ಮಧ್ಯೆ ಏರ್ಪಟ್ಟಿರುವ ಒಪ್ಪಂದವನ್ನು ಬೆಂಬಲಿಸಿ ಅದರ ಅಂಶಗಳನ್ನು ಸಿರಿಯಾ ಜಾರಿಗೆ ತರಬೇಕು’ ಎಂದಿದ್ದಾರೆ.‘1992ರ ರಾಸಾಯನಿಕ ಶಸ್ತ್ರಾಸ್ತ್ರ ಅಭಿವೃದ್ಧಿ, ಉತ್ಪಾದನೆ, ಸಂಗ್ರಹ ಮತ್ತು ಬಳಕೆ ಮೇಲಿನ ನಿಷೇಧ ಹಾಗೂ ನಾಶಗೊಳಿಸುವ ಒಪ್ಪಂದ’ಕ್ಕೆ ಸೇರಲು ಸಿರಿಯಾ ಮಂಗಳವಾರ ಸಲ್ಲಿಸಿದ್ದ ಅರ್ಜಿಯನ್ನು ಬಾನ್ ಕಿ ಮೂನ್ ಅಂಗೀಕರಿಸಿ ದ್ದಾರೆ’ ಎಂದು ವಿಶ್ವಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.‘ಒಪ್ಪಂದದಂತೆ ಸಿರಿಯಾ ಭವಿಷ್ಯದಲ್ಲಿ ತನ್ನ ದೇಶದೊಳಗೆ ರಾಸಾಯನಿಕ ಅಸ್ತ್ರ ಬಳಕೆಯನ್ನು ತಡೆಯಬೇಕು. ಅಲ್ಲದೆ, ದೇಶದಲ್ಲಿ ತಲೆದೋರಿರುವ ಅರಾಜಕತೆಗೆ ರಾಜಕೀಯ ಪರಿಹಾರವೊಂದನ್ನು ಕಂಡುಕೊಳ್ಳುವುದರೊಂದಿಗೆ ಸಿರಿಯಾ ಜನರನ್ನು ಸಂಕಷ್ಟದಿಂದ ಪಾರು ಮಾಡಬೇಕಾಗಿದೆ’ ಎಂದು ಮೂನ್ ಹೇಳಿದ್ದಾರೆ.ಒಪ್ಪಂದಕ್ಕೆ ಸಿರಿಯಾ ಸೇರ್ಪಡೆಗೊಂಡ ಬೆನ್ನಲ್ಲೇ, ‘ಆ ದೇಶ ತನ್ನಲ್ಲಿರುವ ರಾಸಾಯನಿಕ ಶಸ್ತ್ರಾಸ್ತ್ರದ  ಸಂಪೂರ್ಣ ಮಾಹಿತಿಯನ್ನು ನೀಡಬೇಕು’ ಎಂದು ವಿಶ್ವಸಂಸ್ಥೆಯ ವೀಕ್ಷಕರು ಸೂಚಿಸಿದ್ದಾರೆ.ಸಿರಿಯಾ ಇದೇ ಸೆಪ್ಟೆಂಬರ್ 14ರಂದು ಒಪ್ಪಂದಕ್ಕೆ ಸೇರ್ಪಡೆಯಾಗಿದ್ದು, ಮುಂದಿನ 30 ದಿನದ ನಂತರ ಆ ದೇಶಕ್ಕೆ ಒಪ್ಪಂದದ ಅಂಶಗಳು ಅನ್ವಯವಾಗಲಿವೆ. ಅಲ್ಲದೆ,ಒಪ್ಪಂದದ ಮೊದಲ ಭಾಗವಾಗಿ ಸಿರಿಯಾ ತನ್ನ ಬಳಿ ರಾಸಾಯನಿಕ ಶಸ್ತ್ರಾಸ್ತ್ರಗಳ

ಸಂಗ್ರಹ ಇಲ್ಲ ಎಂದು ಒಂದು ವಾರದೊಳಗೆ ಘೋಷಿಸಬೇಕಿದೆ.ವಿಶ್ವಸಂಸ್ಥೆಯ ‘ರಾಸಾಯನಿಕ ಶಸ್ತ್ರಾಸ್ತ್ರ ಒಪ್ಪಂದ’ಕ್ಕೆ ಯಾವುದೇ ರಾಷ್ಟ್ರ, ಯಾವಾಗ ಬೇಕಾ ದರೂ ಒಪ್ಪಂದದ ಅಂಶಗಳನ್ನು ಒಪ್ಪಿಕೊಂಡು ಸೇರಿಕೊಳ್ಳಬಹುದಾಗಿದೆ.ಕಳೆದ ಆಗಸ್ಟ್‌ 21ರಂದು ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿ ಅಧ್ಯಕ್ಷ ಬಷರ್ ಅಲ್ ಅಸ್ಸಾದ್ ನೇತೃತ್ವದ ಸರ್ಕಾರ, ರಾಸಾಯನಿಕ ಅಸ್ತ್ರ ಪ್ರಯೋಗಿಸಿ ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಸಿರಿಯಾದ ವಿರೋಧ ಪಕ್ಷಗಳು ಮತ್ತು ಪಾಶ್ಚಿಮಾತ್ಯ ದೇಶಗಳು ಆರೋಪಿಸಿದ್ದವು.ಅಸ್ಸಾದ್ ಸರ್ಕಾರ ಈ ಆರೋಪವನ್ನು  ಅಲ್ಲಗಳೆದಿತ್ತು.ಮತ್ತೆ ಪ್ರಯೋಗಿಸುವ ಸಾಧ್ಯತೆ: ‘ರಾಸಾಯನಿಕ ಶಸ್ತ್ರಾಸ್ತ್ರ ಒಪ್ಪಂದ’ಕ್ಕೆ  ಸೇರ್ಪಡೆಗೊಂಡಿರುವ ಸಿರಿಯಾ, ತನ್ನ ಬಳಿ ಅಂತಹ ಶಸ್ತ್ರಾಸ್ತ್ರಗಳಿಲ್ಲ ಎಂದು ಅಲ್ಲಗಳೆಯಬಹುದು’ ಎಂದು ಅಭಿಪ್ರಾಯಟ್ಟಿರುವ ‘ಶಸ್ತ್ರಾಸ್ತ್ರ ನಿಯಂತ್ರಣ ಸಂಸ್ಥೆ’, ‘ಅಸ್ಸಾದ್ ಸರ್ಕಾರ ಮತ್ತೆ ದೇಶದೊಳಗೆ ಅಥವಾ ನೆರೆಯ ರಾಷ್ಟ್ರಗಳ ಮೇಲೆ ರಾಸಾಯನಿಕ ಶಸ್ತ್ರಾಸ್ತ್ರ ಪ್ರಯೋಗಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’ ಎಂದು ಹೇಳಿಕೆಯಲ್ಲಿ ತಿಳಿಸಿದೆ.ಅಮೆರಿಕ–ರಷ್ಯಾ ಒಪ್ಪಂದಕ್ಕೆ ಕಾಯಂ ಸದಸ್ಯರ ಬೆಂಬಲ

ವಾಷಿಂಗ್ಟನ್/ಬೀಜಿಂಗ್ (ಪಿಟಿಐ):
ಸಿರಿಯಾದಲ್ಲಿರುವ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ನಿಯಂತ್ರಣ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ, ಅಮೆರಿಕ ಮತ್ತು ರಷ್ಯಾ ನಡುವೆ ಏರ್ಪಟ್ಟಿರುವ ಒಪ್ಪಂದವನ್ನು ಚೀನಾ ಬೆಂಬಲಿಸಿದ್ದು, ಈ ಮೂಲಕ ಉಭಯದೇಶಗಳ ನಡುವಿನ ಮಹತ್ವದ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದೂ ಕಾಯಂ ಸದಸ್ಯ ರಾಷ್ಟ್ರಗಳ ಬೆಂಬಲ ಸಿಕ್ಕಂತಾಗಿದೆ.‘ಅಮೆರಿಕ ಮತ್ತು ರಷ್ಯಾ ಮಧ್ಯೆ ಜರುಗಿರುವ ಒಪ್ಪಂದವನ್ನು ಚೀನಾ ಸ್ವಾಗತಿಸುತ್ತದೆ. ಇದರಿಂದಾಗಿ ಸಿರಿಯಾದಲ್ಲಿ ಏರ್ಪಟ್ಟಿರುವ ವಿಷಮ ಸ್ಥಿತಿಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.ಅಮೆರಿಕ ಮತ್ತು ರಷ್ಯಾ ನಡುವಿನ ಒಪ್ಪಂದದಂತೆ ಸಿರಿಯಾ 2014ರ ಮಧ್ಯದ ಹೊತ್ತಿಗೆ ತನ್ನಲ್ಲಿರುವ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಾಶಗೊಳಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry