ಶುಕ್ರವಾರ, ಫೆಬ್ರವರಿ 26, 2021
22 °C

ವಿಶ್ವಸಂಸ್ಥೆಯ ಸಭಾಂಗಣದಲ್ಲಿ ರೆಹಮಾನ್‌ ‘ಜೈ ಹೋ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆಯ ಸಭಾಂಗಣದಲ್ಲಿ ರೆಹಮಾನ್‌ ‘ಜೈ ಹೋ’

ವಿಶ್ವಸಂಸ್ಥೆ (ಪಿಟಿಐ): ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್‌. ರೆಹಮಾನ್‌ ಅವರು 70ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವಿಶ್ವಸಂಸ್ಥೆಯಲ್ಲಿ ಸೋಮವಾರ ಏರ್ಪಡಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕಿಕ್ಕಿರಿದಿದ್ದ ಪ್ರೇಕ್ಷಕರನ್ನು ತಮ್ಮ ಗಾಯನದಿಂದ ಮೋಡಿ ಮಾಡಿದರು.ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಸಂಗೀತ, ಸೂಫಿ ಹಾಡುಗಳನ್ನು ಹಾಡಿ ಮೈನವಿರೇಳುವಂತೆ ಮಾಡಿದ ರೆಹಮಾನ್‌ ಅವರು ಕೊನೆಯಲ್ಲಿ ತಮ್ಮ ನೆಚ್ಚಿನ ‘ಜೈ ಹೋ’ ಹಾಡಿ ಸಭಿಕರು ರೋಮಾಂಚನಗೊಳ್ಳುವಂತೆ ಮಾಡಿದರು.ಸುಬ್ಬುಲಕ್ಷ್ಮಿ ಅವರ ನಂತರ ವಿಶ್ವಸಂಸ್ಥೆಯ ಮಹಾ ಅಧಿವೇಶನ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ರೆಹಮಾನ್‌ ಪಾತ್ರರಾದರು. ಈ ಸಭಾಂಗಣ ಸಾಮಾನ್ಯವಾಗಿ ಜಾಗತಿಕ ನಾಯಕರ ಭಾಷಣಗಳಿಗೆ ಮೀಸಲಾಗಿರುತ್ತದೆ.ಸಾಂಪ್ರದಾಯಿಕ ಭಾರತೀಯ  ಶೈಲಿಯ ಉಡುಪು ಧರಿಸಿದ್ದ ರೆಹಮಾನ್ ಅವರು ವೇದಿಕೆ ಪ್ರವೇಶಿಸುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ರಾಯಭಾರಿಗಳು, ರಾಜತಾಂತ್ರಿಕ ಅಧಿಕಾರಿಗಳು ಮತ್ತು ಭಾರತ ಮೂಲದ ಅಮೆರಿಕನ್ನರು ಚಪ್ಪಾಳೆ ತಟ್ಟಿ ಬರಮಾಡಿಕೊಂಡರು.ರೆಹಮಾನ್‌ ಮತ್ತು ತಂಡದವರು ಸತತ ಮೂರು ಗಂಟೆ ಸುಬ್ಬುಲಕ್ಷ್ಮಿ ಸಂಗೀತ ಮತ್ತು ರಚನೆಗಳನ್ನು ಹಾಡಿದರು. ಅವಕಾಶವಂಚಿತ ಯುವಜನರಿಗೆ ಸಂಗೀತ ಶಿಕ್ಷಣ ನೀಡುವ ಉದ್ದೇಶದಿಂದ ಎ.ಆರ್. ರೆಹಮಾನ್‌ ಪ್ರತಿಷ್ಠಾನ ಸ್ಥಾಪಿಸಿರುವ ’ಸನ್‌ಶೈನ್‌ ಆರ್ಕೆಸ್ಟ್ರಾ’ ತಂಡದ ವಿದ್ಯಾರ್ಥಿಗಳ ಗಾಯನವು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು. ಅವರ ಕಛೇರಿ ಕೊನೆಯಲ್ಲಿ ರೆಹಮಾನ್‌, ‘ಇನ್ನೆಂದಿಗೂ ನೀವು ಅವಕಾಶವಂಚಿತರಲ್ಲ’ ಎಂದು ಉತ್ತೇಜಿಸಿದರು.ರೆಹಮಾನ್‌ ಅವರ ಇಬ್ಬರು ಸಹೋದರಿಯರು ಹೆಸರಾಂತ ಗಾಯಕ ಜಾವೇದ್‌ ಅಲಿ ಹಾಗೂ ತಾಳವಾದ್ಯ ಪಂಡಿತ ಶಿವಮಣಿ ಅವರೊಂದಿಗೆ ಕಾರ್ಯಕ್ರಮ ನೀಡಿದ್ದು ಮತ್ತೊಂದು ವಿಶೇಷ. ‘ದಿಲ್‌ ಸೆ’, ‘ಬಾಂಬೆ’ ಚಿತ್ರದ ತಮ್ಮ ಜನಪ್ರಿಯ ಹಾಡುಗಳನ್ನು ಹಾಡಿದ ನಂತರ ‘ವಂದೇ ಮಾತರಂ’ನ್ನು ರೆಹಮಾನ್‌ ಅವರು ಹಾಡಿದರು.ಕೊನೆಯ ಭಾಗದಲ್ಲಿ ‘ಖ್ವಾಜಾ ಮೇರೆ ಖ್ವಾಜಾ’, ‘ಕುನ್‌ ಫಯಾ ಕುನ್‌’ ಮತ್ತು ‘ಮೌಲಾ ಮೌಲಾ’ ಹಾಡುಗಳನ್ನು ಹಾಡಿ ರಂಜಿಸಿದ ರೆಹಮಾನ್‌,‘ ಜೈ ಹೋ’ ಹಾಡಿನೊಂದಿಗೆ ಕಛೇರಿ ಮುಗಿಸಿದರು.‘ಯುದ್ಧ ಮತ್ತು ಹತ್ಯೆ ಇಲ್ಲದ ಮಾರ್ಗದಲ್ಲಿ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳುವುದನ್ನು ನನ್ನ ಜೀವಿತಾವಧಿಯಲ್ಲಿ ನೋಡಲು ನಾನು ಬಯಸುತ್ತೇನೆ’ ಎಂದು ಭಾವುಕರಾಗಿ ನುಡಿದರು.ಸುಬ್ಬುಲಕ್ಷ್ಮಿ ಅವರಿಗೆ ಗೀತನಮನ ಸಲ್ಲಿಸಿ ಮಾತನಾಡಿದ ರೆಹಮಾನ್‌, ತಾನು ಹುಟ್ಟುವುದಕ್ಕೂ ಮೊದಲೇ ಅವರು ವಿಶ್ವಸಂಸ್ಥೆಯಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಸನ್‌ಶೈನ್‌ ಆರ್ಕೆಸ್ಟ್ರಾ ಆರಂಭಿಸಲು ಅವರೇ ಪ್ರೇರಣೆ ಎಂದರು.ಭಾರತ ಮೂಲದ ಶಂಕರ ನೇತ್ರಾಲಯದ ಸಹಯೋಗದಲ್ಲಿ ವಿಶ್ವಂಸ್ಥೆಯಲ್ಲಿ ಭಾರತದ ಕಾಯಂ ಆಯೋಗ ಕಾರ್ಯಕ್ರಮವನ್ನು ಆಯೋಜಿಸಿತ್ತು. 70ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ಸುಬ್ಬುಲಕ್ಷ್ಮಿ ಅವರ ಜನ್ಮ ಶತಮಾನೋತ್ಸವಕ್ಕೆ ಗೌರವಾರ್ಪಣೆ ಮಾಡಲಾಯಿತು. 1966ರಲ್ಲಿ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ದಿವಂಗತ ಯು. ಥಾಂಟ್‌ ಅವರು ಸುಬ್ಬುಲಕ್ಷ್ಮಿ ಅವರನ್ನು ಸಂಗೀತ ಕಛೇರಿ ನೀಡುವಂತೆ ಆಹ್ವಾನಿಸಿದ್ದರು.ಇನ್ನೂ ಒಳ್ಳೆಯ ಗಾಯಕನಾಗುವಾಸೆ

ನ್ಯೂಯಾರ್ಕ್‌ (ಪಿಟಿಐ):
ತಾವೇ ಹಾಡಿದ ಹಾಡುಗಳ ಆಲ್ಬಂ ಬಿಡುಗಡೆಗೂ ಮುನ್ನ ಇನ್ನಷ್ಟು ಉತ್ತಮ ಗಾಯಕನಾಗಬೇಕಾಗಿದೆ ಎಂದು ಆಸ್ಕರ್‌ ಪ್ರಶಸ್ತಿ ಪುರಸ್ಕೃತ ಸಂಗೀತ ರಚನೆಕಾರ ಎ.ಆರ್‌.ರೆಹಮಾನ್‌ ಹೇಳಿಕೊಂಡಿದ್ದಾರೆ.

ಅದ್ಭುತ ಗೀತರಚನೆ ಮತ್ತು ಕಂಠಸಿರಿಯಿಂದ ಮನೆಮಾತಾಗಿರುವ ರೆಹಮಾನ್‌ ಇಲ್ಲಿ ಸುದ್ದಿಗೋಷ್ಠಿಯಲ್ಲಿ, ‘ನಿಮ್ಮದೇ ಧ್ವನಿಯಲ್ಲಿ  ಆಲ್ಬಂ ಹೊರತರುವಿರಾ’ ಎಂಬ ಪ್ರಶ್ನೆಗೆ ಈ ಇಂಗಿತ ವ್ಯಕ್ತಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.