ಭಾನುವಾರ, ಮೇ 16, 2021
22 °C

ವಿಶ್ವಸಂಸ್ಥೆ ಮಹಾಧಿವೇಶನ: ಭಾರತದ ನಿರೀಕ್ಷೆ ಧ್ವನಿಸಲಿರುವ ಪ್ರಧಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ, ನ್ಯೂಯಾರ್ಕ್ (ಪಿಟಿಐ): ಶನಿವಾರ (ಸೆ.24) ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಮಾತನಾಡಲಿರುವ ಪ್ರಧಾನಿ ಮನಮೋಹನ್ ಸಿಂಗ್, ವಿಶ್ವಸಂಸ್ಥೆ ಭದ್ರತಾ ಮಂಡಲಿಯ ಸಮಗ್ರ ಪುನರ್‌ರಚನೆಗೆ ತೀವ್ರವಾಗಿ ಒತ್ತಾಯಿಸಲಿದ್ದಾರೆ.ಭಯೋತ್ಪಾದನೆ ಪಿಡುಗನ್ನು ದಮನಿಸುವುದಕ್ಕೆ ಪೂರಕವಾಗಿ `ಜಾಗತಿಕ ಭಯೋತ್ಪಾದನಾ ನಿಗ್ರಹ ಒಡಂಬಡಿಕೆ~ ಅಗತ್ಯವೆಂದು ಕೂಡ ಅವರು ಇದೇ ವೇಳೆ ಪ್ರತಿಪಾದಿಸಲಿದ್ದಾರೆ. ಆ ಮೂಲಕ ಭಾರತದ ಬಹು ವರ್ಷಗಳ ನಿರೀಕ್ಷೆಗೆ ಜಾಗತಿಕ ವೇದಿಕೆಯಲ್ಲಿ ಸಿಂಗ್ ಧ್ವನಿಯಾಗಲಿದ್ದಾರೆ.ಜಾಗತಿಕ ಆರ್ಥಿಕ ಸ್ಥಿರತೆ, ಸುಸ್ಥಿರ ಹಾಗೂ ಸಮತೋಲದ ಆರ್ಥಿಕ ಬೆಳವಣಿಗೆಗಳಿಗೆ ಪೂರಕವಾಗುವಂತಹ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಭಾರತ ಬದ್ಧತೆಯನ್ನು ಕೂಡ ಅವರು ಘೋಷಿಸುವ ನಿರೀಕ್ಷೆ ಇದೆ.

ಜಾಗತಿಕ ಭಯೋತ್ಪಾದನೆ ನಿಗ್ರಹ ಒಡಂಬಡಿಕೆಯನ್ನು ವಿಶ್ವಸಂಸ್ಥೆ ಜಾರಿಗೊಳಿಸುತ್ತದೆಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಹರ್‌ದೀಪ್‌ಸಿಂಗ್ ಪುರಿ ಇದೇ ಸಂದರ್ಭದಲ್ಲಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ, ಅದು ಯಾವಾಗ ಜಾರಿಗೊಳ್ಳುತ್ತದೆಂದು ಹೇಳಲು ಸಾಧ್ಯವಿಲ್ಲ; ಒಡಂಬಡಿಕೆಯ ಒಪ್ಪಿತ ಕರಡು ಈಗಾಗಲೇ ವಿಶ್ವಸಂಸ್ಥೆಯ ಸಮಿತಿಯ ಮುಂದಿದೆ ಎಂದೂ ಅವರು ಹೇಳಿದ್ದಾರೆ.ಅಮೆರಿಕಕ್ಕೆ ಭಯೋತ್ಪಾದನೆಯ ತೀವ್ರತೆ ಅರಿವಿಗೆ ಬಂದದ್ದು 9/11ರ ದಾಳಿಯ ನಂತರವಷ್ಟೇ. ಆದರೆ ಭಾರತ ಅದಕ್ಕೆ ಮುಂಚಿನಿಂದಲೂ ಈ ಪಿಡುಗನ್ನು ಎದುರಿಸುತ್ತಿದೆ. ಹಾಗಾಗಿಯೇ ಈ ಜಾಗತಿಕ ಭಯೋತ್ಪಾದನಾ ನಿಗ್ರಹ ಒಡಂಬಡಿಕೆ ಜಾರಿಗೆ ಭಾರತ ಬಲವಾಗಿ ಆಗ್ರಹಿಸುತ್ತಿದೆ ಎಂದು ಪುರಿ ಹೇಳಿದರು.ಮಹಾಧಿವೇಶನದ ಸಂದರ್ಭದಲ್ಲಿ ಸಿಂಗ್ ಮತ್ತು ಒಬಾಮ ಮಾತುಕತೆ ನಡೆಸಲು ಆಗದಿರುವುದಕ್ಕೆ ಬೇರಾವುದೇ ಮಹತ್ವದ ಕಾರಣಗಳು ಇಲ್ಲ. ಒಬಾಮ ಬೇರೆ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿರುವುದರಿಂದ ಭೇಟಿಗೆ ಸಮಯ ಹೊಂದಾಣಿಕೆ ಆಗಿಲ್ಲ. ಫ್ರಾನ್ಸ್‌ನಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಜಿ-20 ರಾಷ್ಟ್ರಗಳ ಸಭೆಯಲ್ಲಿ ಇಬ್ಬರೂ ನಾಯಕರ ಭೇಟಿಗೆ ಅವಕಾಶವಿರುತ್ತದೆ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.