ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಪುನಃ ಕಾಶ್ಮೀರ ವಿಷಯ ಕೆದಕಿದ ಪಾಕ್

7

ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಪುನಃ ಕಾಶ್ಮೀರ ವಿಷಯ ಕೆದಕಿದ ಪಾಕ್

Published:
Updated:

ವಿಶ್ವಸಂಸ್ಥೆ (ಪಿಟಿಐ): ಒಂದೆಡೆ, ಭಾರತದೊಂದಿಗೆ ವಿಶ್ವಾಸ ವೃದ್ಧಿಯ ಮಾತನ್ನಾಡುತ್ತಿರುವ ಪಾಕಿಸ್ತಾನವು ಮತ್ತೊಂದೆಡೆ ವಿಶ್ವಸಂಸ್ಥೆಯ ಮಹಾ ಅಧಿವೇಶನದ ವೇದಿಕೆಯಲ್ಲಿ ಕಾಶ್ಮೀರ ಕುರಿತು ಪ್ರಸ್ತಾಪಿಸಿ, ಭಾರತ ಕೂಡ ಅದಕ್ಕೆ ಅನಿವಾರ್ಯವಾಗಿ ಪ್ರತಿಕ್ರಿಯಿಸುವಂತಹ ವಾತಾವರಣ ಸೃಷ್ಟಿಸಿತು.ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಲ್ಲ ಎಂದು ಪಾಕಿಸ್ತಾನ ತಾನೇ ಮುಂದಾಗಿ ಮಾಡಿದ ಪ್ರತಿಪಾದನೆಯನ್ನು ಭಾರತ ತಡಮಾಡದೆ ಅದೇ ವೇದಿಕೆಯಲ್ಲಿ ಬಲವಾಗಿ ಅಲ್ಲಗಳೆಯಿತು.ಮೊದಲಿಗೆ, ಪಾಕಿಸ್ತಾನದ ರಾಷ್ಟ್ರಾಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಮಾತನಾಡಿ, `ಜಮ್ಮು ಕಾಶ್ಮೀರವು ಎಂದಿನಿಂದಲೂ ಭಾರತದ ಅವಿಭಾಜ್ಯ ಅಂಗವೇ ಅಲ್ಲ~ ಎಂದರು.ನಂತರ, ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕಾಯಂ ಉಪ ಪ್ರತಿನಿಧಿಯಾಗಿರುವ ರಜಾ ಬಶೀರ್ ತರಾರ್ ಕೂಡ ಇದೇ ಹೇಳಿಕೆಯನ್ನು ಪುನರುಚ್ಚರಿಸಿದರು.ಕಾಶ್ಮೀರ ಬಿಕ್ಕಟ್ಟನ್ನು ವಿಶ್ವಸಂಸ್ಥೆಯ ನಿರ್ಣಯಗಳಿಗೆ ಅನುಸಾರವಾಗಿ ಬಗೆಹರಿಸಬೇಕು ಎಂದು ಜರ್ದಾರಿ ಅವರು ಕಳೆದ ವಾರವಷ್ಟೇ ಒತ್ತಾಯ ಮಾಡಿದ್ದಾರೆ. ಈ ಆಗ್ರಹವನ್ನು ಭಾರತ ಮುಂಚಿನಿಂದಲೂ ಅಪ್ರಸ್ತುತ ಎಂದೇ ಹೇಳುತ್ತಾ ಬಂದಿದೆ. ಆದರೆ ಜರ್ದಾರಿ ಅವರ ಈ ಒತ್ತಾಯವು ಭಾರತ ಹೇಳುತ್ತಿರುವಂತೆ ಅನವಶ್ಯಕ ಎಂಬುದು ಸಮರ್ಥನೀಯವಲ್ಲ ಎಂದು ತರಾರ್ ವಾದ ಮಂಡಿಸಿದರು.ನಂತರ, 193 ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಎಂ.ಕೃಷ್ಣ, `ಪಾಕ್ ಅಧ್ಯಕ್ಷ ಜರ್ದಾರಿ ಅವರು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಕಾಶ್ಮೀರ ಕುರಿತು ಪ್ರಸ್ತಾಪಿಸುತ್ತಾರೆಂಬುದನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ.  ಆದರೆ ಈಗ ಅವರು ಮಾತನಾಡಿರುವುದರಿಂದ ಭಾರತ ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಲೇಬೇಕಾಗಿದೆ. ಜಮ್ಮು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ ಎಂಬುದರಲ್ಲಿ ಅನುಮಾನಕ್ಕೆ ಆಸ್ಪದವೇ ಇಲ್ಲ~ ಎಂದು ಸಮರ್ಥಿಸಿಕೊಂಡರು.`ವಿಶ್ವಸಂಸ್ಥೆಯ ಮಹಾಧಿವೇಶನದ ಸಭೆಯಲ್ಲಿ, ಕಾಶ್ಮೀರ ಕುರಿತು ತಾವು ಆಡಿರುವ ಮಾತುಗಳಲ್ಲಿ ಹೊಸದೇನೂ ಇಲ್ಲ. ಹಲವು ದಶಕಗಳಿಂದ ರಾಷ್ಟ್ರದ ನಿಲುವು ಏನಾಗಿದೆಯೇ ಅದನ್ನೇ ಪುನರುಚ್ಚರಿಸಿದ್ದೇನೆ. ಪಾಕಿಸ್ತಾನದ ಅಧ್ಯಕ್ಷರ ಪ್ರಸ್ತಾಪಕ್ಕೆ ಪ್ರತಿಕ್ರಿಯೆಯಾಗಿ ಈ ನಿಲುವನ್ನು ಸ್ಪಷ್ಟಪಡಿಸಿದ್ದೇನೆ~ ಎಂದರು.ಜರ್ದಾರಿ ಅವರು ಕಾಶ್ಮೀರ ಕುರಿತು ಮಾಡಿದ ಪ್ರಸ್ತಾಪವು, ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿ ಯತ್ನಗಳಿಗೆ ತೊಡಕಾಗಲಿದೆಯೇ ಎಂದು ನಂತರ ಸುದ್ದಿಗಾರರು ಕೇಳಿದಾಗ, `ನಾವು ನೆರೆ ರಾಷ್ಟ್ರದೊಂದಿಗೆ ಮಾತುಕತೆ ಮುಂದುವರಿಸುತ್ತೇವೆ. ಯಾವ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದೇವೋ ಅದಕ್ಕೆ ಬದ್ಧವಾಗಿರುತ್ತೇವೆ. ಏನಾಗುತ್ತದೋ ನೋಡೋಣ~ ಎಂದು ಕೃಷ್ಣ ಪ್ರತಿಕ್ರಿಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry