ಭಾನುವಾರ, ಮೇ 22, 2022
25 °C

ವಿಶ್ವಸಂಸ್ಥೆ ಸ್ವರೂಪ ಬದಲಾಗಲಿ: ಗೈಡೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಬದಲಾದ ಜಾಗತಿಕ ವಿದ್ಯಮಾನಗಳಿಗೆ ತಕ್ಕಂತೆ ವಿಶ್ವಸಂಸ್ಥೆಯ ಸ್ವರೂಪ ಕೂಡ ಬದಲಾಗಬೇಕು. ಜರ್ಮನಿ, ಭಾರತ ಸೇರಿದಂತೆ ಇತರ ದೇಶಗಳಿಗೂ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಸಿಗಬೇಕು~ ಎಂದು ಜರ್ಮನಿಯ ವಿದೇಶಾಂಗ ಸಚಿವ ಡಾ.ಗೈಡೊ ವೆಸ್ಟರ್‌ವೆಲ್ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.ಉಭಯ ದೇಶಗಳ ಜತೆಗಿನ ಸಂಬಂಧ ಸುಧಾರಣೆ, ಜಾಗತಿಕ ಆರ್ಥಿಕ ಬಿಕ್ಕಟ್ಟು ಇತ್ಯಾದಿ ವಿಷಯಗಳ ಕುರಿತು ಇಲ್ಲಿನ ಪಂಚತಾರಾ ಹೋಟೆಲ್‌ನಲ್ಲಿ ನಡೆದ ಸಮಾಲೋಚನಾ ಸಭೆ ನಂತರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ಗೈಡೊ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.`ಕಾಲ ಬದಲಾಗಿದೆ. ಪರಿಸ್ಥಿತಿಯೂ ಬದಲಾಗಿದೆ. ಇಂತಹ ಸನ್ನಿವೇಶದಲ್ಲಿ ವಿಶ್ವಸಂಸ್ಥೆಯ ಸ್ವರೂಪ ಕೂಡ ಬದಲಾಗಬೇಕು. ಈ ವಿಷಯದಲ್ಲಿ ಭಾರತದ ನಿಲುವನ್ನು ಜರ್ಮನಿ ಬೆಂಬಲಿಸುತ್ತದೆ~ ಎಂದು ಅವರು ಹೇಳಿದರು.`ಯೂರೋಪ್‌ನಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಇದಕ್ಕೆ ಪ್ರಮುಖವಾಗಿ ಸಾಲ ಮುಗ್ಗಟ್ಟೇ ಕಾರಣ. ಯೂರೋಪ್ ಒಕ್ಕೂಟದ ಉತ್ತಮ ಭವಿಷ್ಯಕ್ಕಾಗಿ ಹಾಗೂ `ಯೂರೊ~ (ಕರೆನ್ಸಿ) ಸ್ಥಿರತೆಗಾಗಿ ಕಠಿಣ ಶ್ರಮ ಹಾಕಬೇಕಾಗಿದೆ. ಈ ಬಿಕ್ಕಟ್ಟಿನಿಂದ ಯೂರೋಪ್ ಪಾರಾಗಲಿದೆ~ ಎಂದು ಅವರು ಭವಿಷ್ಯ ನುಡಿದರು.`ಯೂರೋಪ್‌ನಲ್ಲಿ ಹಲವು ಎಡರುತೊಡರುಗಳ ನಡುವೆಯೂ ಜರ್ಮನಿಯ ಆರ್ಥಿಕ ಸ್ಥಿತಿ ಸದೃಢವಾಗಿದೆ~ ಎಂದ ಅವರು `ಜರ್ಮನಿ, ಭಾರತದ ಪ್ರಮುಖ ವಾಣಿಜ್ಯ ಪಾಲುದಾರ ದೇಶ. ಬೆಂಗಳೂರಿನಲ್ಲೇ ಸುಮಾರು 150 ಜರ್ಮನ್ ಕಂಪೆನಿಗಳು ಕೆಲಸ ನಿರ್ವಹಿಸುತ್ತಿವೆ. ಅವುಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ~ ಎಂದು ಹೇಳಿದರು.`ಶಿಕ್ಷಣ, ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರದಲ್ಲಿನ ಸಾಧನೆ ಕುರಿತು ಎರಡೂ ದೇಶಗಳ ನಡುವೆ ವಿನಿಮಯ ಆಗಬೇಕು. ಯುವ ಸಮುದಾಯ ಎರಡೂ ದೇಶಗಳ ವಿನಿಮಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು.  ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದ 60ನೇ ವರ್ಷಾಚರಣೆಯ ಈ ಸಂದರ್ಭದಲ್ಲಿ ಇವೆಲ್ಲವೂ ಅಗತ್ಯ. ಇದರಿಂದ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ~ ಎಂದರು.ಇದಕ್ಕೂ ಮುನ್ನ ಎಸ್.ಎಂ.ಕೃಷ್ಣ ಮಾತನಾಡಿ, ಜಾಗತಿಕ ಆರ್ಥಿಕ ಬಿಕ್ಕಟ್ಟು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿನ ಬದಲಾವಣೆ, ವಿಶ್ವವನ್ನು ಕಾಡುತ್ತಿರುವ ಭಯೋತ್ಪಾದನೆ ಸೇರಿದಂತೆ ಉಭಯ ದೇಶಗಳಿಗೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆಯೂ ವಿದೇಶಾಂಗ ಸಚಿವರ ಮಟ್ಟದ ಸಭೆಯಲ್ಲಿ ಚರ್ಚಿಸಲಾಯಿತು ಎಂದರು.`ಯೂರೋಪ್‌ನಲ್ಲಿನ ಆರ್ಥಿಕ ಬಿಕ್ಕಟ್ಟು ಕೇವಲ ಆ ಪ್ರಾಂತ್ಯದ ಮೇಲೆ ಪರಿಣಾಮ ಬೀರಿಲ್ಲ. ಜಗತ್ತಿನ ಎಲ್ಲೆಡೆ ಸಮಸ್ಯೆ ಸೃಷ್ಟಿಸಿದೆ. ಭಾರತ ಸೇರಿದಂತೆ ಇತರ ಹಲವು ದೇಶಗಳು ಯೂರೋಪ್ ಜತೆ ವಾಣಿಜ್ಯ ಸಂಬಂಧಗಳನ್ನು ಹೊಂದಿವೆ. ಹೀಗಾಗಿ ಇದರ ಪರಿಣಾಮದ ಆಳ-ಅಗಲ ದೊಡ್ಡದು. ಈ ಬಿಕ್ಕಟ್ಟಿನಿಂದ ಪಾರಾಗಲು ಭಾರತ ಅಗತ್ಯ ಸಹಕಾರ ನೀಡಲಿದೆ~ ಎಂದು ಕೃಷ್ಣ ವಿವರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.