ವಿಶ್ವಾರಾಧ್ಯರ ವಿಚಾರಧಾರೆ ಸಾರ್ವಕಾಲಿಕ

7

ವಿಶ್ವಾರಾಧ್ಯರ ವಿಚಾರಧಾರೆ ಸಾರ್ವಕಾಲಿಕ

Published:
Updated:

ಯಾದಗಿರಿ: ಗಂವ್ಹಾರ ಕ್ಷೇತ್ರದಲ್ಲಿ ಜನಿಸಿದ ವಿಶ್ವಾರಾಧ್ಯರು ಕಾಶಿ ಘನ ಪಂಡಿತರಾಗಿ ಅಬ್ಬೆತುಮಕೂರಿನಲ್ಲಿ ನೆಲೆನಿಂತು ಮನುಕುಲವನ್ನು ಉದ್ಧರಿಸಿದ ಮಹಾಪುರುಷರಾಗಿದ್ದಾರೆ ಎಂದು ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಅಬ್ಬೆತುಮಕೂರಿನ ಶ್ರೀಮಠದಲ್ಲಿ ಗುರುವಾರ ಸಂಜೆ ಪುರಾಣ ಪ್ರಾರಂಭೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ    ನೀಡಿದರು.ವಿಶ್ವಾರಾಧ್ಯರು ಕಲಿತ ಜ್ಞಾನ, ಜೀವನಾನುಭವ, ಗಳಿಸಿದ ಅನುಭಾವವನ್ನು ಲೋಕದ ಜನತೆಗೆ ಉಣಬಡಿಸಿ, ಅವರ ಭವದ ಕತ್ತಲೆಯನ್ನು ಹೊಡೆದೋಡಿಸುವ ಮೂಲಕ ಅರಿವಿನ ಜ್ಯೋತಿ ಬೆಳಗಿದ್ದಾರೆ. ಮನುಷ್ಯ ಅರಿವಿನ ಜೀವಿಯಾಗಿದ್ದು, ಆಚಾರ-ವಿಚಾರಗಳಿಂದ ಸಂಪನ್ನನಾಗಿ ಬದುಕಬೇಕು ಎಂದು ತಿಳಿ ಹೇಳುತ್ತಿದ್ದರು.

 

ಅವರ ವಿಚಾರಧಾರೆಗಳು ಮನುಕುಲಕ್ಕೆ ಸರ್ವಕಾಲಕ್ಕೂ ದಾರಿದೀಪವಾಗಿವೆ. ಅದಕ್ಕಾಗಿಯೇ ಪ್ರತಿ ವರ್ಷ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ವಿಶ್ವಾರಾಧ್ಯರ ಪಾರಾಯಣವನ್ನು ಪರಂಪರಾಗತವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.ಪುರಾಣ ಪ್ರವಚನ ಆಲಿಸುವುದರಿಂದ ಮನುಷ್ಯನ ಅಂತರಂಗ ಶುದ್ಧಿಯಾಗುತ್ತದೆ. ವರ್ತಮಾನದ ಬದುಕಿನ ಜಂಜಾಟಗಳಿಂದ ಮನುಷ್ಯ ಜರ್ಝರಿತನಾಗಿದ್ದಾನೆ. ಬದುಕಿನಲ್ಲಿ ಶಾಂತಿ, ನೆಮ್ಮದಿ, ಸಂತೋಷಗಳು ಅಗತ್ಯ. ಅವುಗಳನ್ನು ಪಡೆಯಲು ಪುಣ್ಯ ಪುರುಷರ ಚರಿತ್ರೆಗಳನ್ನು ಓದಬೇಕು, ಇಲ್ಲವೇ ಕೇಳಬೇಕು. ಅಂದಾಗ ಒತ್ತಡಗಳಿಂದ ಮನುಷ್ಯ ಮುಕ್ತನಾಗಿ ಸಂತೋಷವನ್ನು ಹೊಂದಲು ಸಾಧ್ಯ.ಎಲ್ಲರೂ ಸದಾಚಾರ, ಸದ್ಗುಣವಂತರಾದಾಗ ಸಮಾಜ ಸಮೃದ್ಧವಾಗುತ್ತದೆ. ಅಂತಹ ವಾತಾವರಣ ಪುರಾಣಗಳನ್ನು ಕೇಳುವುದರಿಂದ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಪುರಾಣ ಪ್ರಾರಂಭೋತ್ಸವ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಸವರಾಜೇಶ್ವರಿ ಪಾಟೀಲ ತಂಗಡಿಗಿ ಮಾತನಾಡಿ, ಕನ್ನಡ ನಾಡಿನ ಪರಂಪರೆಯಲ್ಲಿ ಮಠಮಾನ್ಯಗಳ ಕೊಡುಗೆ ಅಪಾರವಾಗಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಮಠಗಳು ಸಲ್ಲಿಸುತ್ತಿರುವ ಸೇವೆ ಅಗಾಧವಾದುದು.

 

ಈ ಸಾಲಿನಲ್ಲಿ ಅಬ್ಬೆತುಮಕೂರಿನ ಸಿದ್ಧಸಂಸ್ಥಾನ ಮಠವೂ ಅಗ್ರಪಂಕ್ತಿಯಲ್ಲಿದೆ. ಜಾತಿ ಮತಗಳ ಎಲ್ಲೆ ಮೀರಿ ಸರ್ವ ಧರ್ಮಗಳ ಸಮಾನತೆಯ ಕೇಂದ್ರವಾಗಿರುವುದು ಹೆಮ್ಮೆಯ ಸಂಗತಿ. ಪೀಠಾಧಿಪತಿಗಳು ಹತ್ತು ಹಲವು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಭಕ್ತರಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುತ್ತಿರುವುದು ಸ್ತುತ್ಯಾರ್ಹ.ಶೈಕ್ಷಣಿಕವಾಗಿಯೂ ಶ್ರೀಗಳು ಅಷ್ಟೇ ಆದ್ಯತೆಯನ್ನು ನೀಡಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು. 

ಬೆಂಗಳೂರಿನ ಖ್ಯಾತ ಪ್ರವಚನಕಾರ ಟಿ.ಎನ್.ಭಾರತೀಶ ಅವರು,  ವಿಶ್ವಾರಾಧ್ಯರ ಪುರಾಣದ ಮೊದಲ ಅಧ್ಯಾಯವನ್ನು ವಾಚಿಸಿ ಪುರಾಣಕ್ಕೆ ಚಾಲನೆ ನೀಡಿದರು.ಅನಿರುದ್ಧ ಕಾಕಲವಾರ ಮತ್ತು ಹಣಮಂತ ನರಿಬೋಳಿ ಇವರಿಂದ ಸುಗಮ ಸಂಗೀತ ಜರುಗಿತು. ಡಾ.ಸುಭಾಷಚಂದ್ರ ಕೌಲಗಿ, ಎಸ್.ಎನ್. ಮಿಂಚಿನಾಳ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry