ಸೋಮವಾರ, ಮಾರ್ಚ್ 8, 2021
26 °C
ಟೆನಿಸ್‌: ಲಿಯಾಂಡರ್‌ಗೆ ಏಳನೇ ಒಲಿಂಪಿಕ್ಸ್‌; ಇಂದು ಡಬಲ್ಸ್‌ ಪಂದ್ಯ

ವಿಶ್ವಾಸದಲ್ಲಿ ಪೇಸ್‌–ಬೋಪಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಾಸದಲ್ಲಿ ಪೇಸ್‌–ಬೋಪಣ್ಣ

ರಿಯೊ ಡಿ ಜನೈರೊ (ಪಿಟಿಐ):  ವಿವಾದಗಳ ನಡುವೆಯೂ ಒಲಿಂಪಿಕ್ಸ್‌ನಲ್ಲಿ ಒಂದಾಗಿ ಆಡಲು ಒಪ್ಪಿಕೊಂಡಿರುವ ಲಿಯಾಂಡರ್ ಪೇಸ್‌ ಮತ್ತು ಕರ್ನಾಟಕದ ರೋಹನ್‌ ಬೋಪಣ್ಣ ಅವರು ಶನಿವಾರ ಡಬಲ್ಸ್‌ ವಿಭಾಗದ ಪಂದ್ಯವಾಡಲಿದ್ದಾರೆ.ಮಹಿಳಾ ಡಬಲ್ಸ್‌ ಹಣಾಹಣಿಯಲ್ಲಿ ಸಾನಿಯಾ ಮಿರ್ಜಾ ಮತ್ತು ಪ್ರಾರ್ಥನಾ ತೊಂಬಾರೆ ಒಂದಾಗಿ ಆಡಲಿದ್ದಾರೆ. ಆಗಸ್ಟ್‌ 10 ನಡೆಯಲಿರುವ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಹಾಗೂ ಬೋಪಣ್ಣ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ.ಬೋಪಣ್ಣ ಮತ್ತು ಪೇಸ್ ನಡುವೆ  ಕೆಲವು ವರ್ಷಗಳಿಂದ ಮನಸ್ತಾಪವಿದೆ. ಆದ್ದರಿಂದ ಬೋಪಣ್ಣ ರಿಯೊ ಒಲಿಂಪಿಕ್ಸ್‌ನಲ್ಲಿ ತಮಗಿಂತಲೂ ಕಡಿಮೆ ರ್‍ಯಾಂಕ್‌ನಲ್ಲಿರುವ ಸಾಕೇತ್‌ ಮೈನೇನಿ ಜೊತೆ ಆಡುವುದಾಗಿ ಹೇಳಿದ್ದರು. ಈ ವೇಳೆ ಅಖಿಲ ಭಾರತ ಟೆನಿಸ್‌ ಸಂಸ್ಥೆ ಮಧ್ಯಪ್ರವೇಶಿಸಿ ಇಬ್ಬರ ನಡುವೆ ಸಂಧಾನ ಮಾಡಿತ್ತು. ಆದ್ದರಿಂದ ಇವರು ಒಂದಾಗಿ ಆಡಲು ಮುಂದಾಗಿದ್ದಾರೆ.43 ವರ್ಷದ ಪೇಸ್‌ ಅವರು ಪಾಲ್ಗೊಂಡಿರುವ ಏಳನೇ ಒಲಿಂಪಿಕ್ಸ್ ಇದು. 1996ರ ಅಟ್ಲಾಂಟಾದಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಕಂಚು ಜಯಿಸಿದ್ದರು. 2004ರ ಅಥೆನ್ಸ್‌ನಲ್ಲಿ ಮಹೇಶ್ ಭೂಪತಿ ಜೊತೆ ಡಬಲ್ಸ್‌ ಆಡಿ ನಾಲ್ಕನೇ ಸ್ಥಾನ ಪಡೆದಿದ್ದರು.ಪೇಸ್ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ಟೂರ್ನಿಗಳಲ್ಲಿ ಪಾಲ್ಗೊಂಡಿರಲಿಲ್ಲ. ಹೋದ ತಿಂಗಳು ಚಂಡೀಗಡದಲ್ಲಿ ನಡೆದಿದ್ದ ಡೇವಿಸ್‌ ಕಪ್‌ನಲ್ಲಿ ಆಡಿದ್ದರು. ಕೊರಿಯಾ ವಿರುದ್ಧ ಡೇವಿಸ್‌ ಕಪ್‌ ಪಂದ್ಯದಲ್ಲಿ ಭಾರತ ಸುಲಭವಾಗಿ ಗೆಲುವು ಪಡೆದಿತ್ತು. ಆ ಪಂದ್ಯದಲ್ಲಿ ಬೋಪಣ್ಣ ಮತ್ತು ಪೇಸ್‌ ಡಬಲ್ಸ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರು.ಪೇಸ್ ಡಬಲ್ಸ್ ವಿಭಾಗದ ರ್‍ಯಾಂಕಿಂಗ್‌ನಲ್ಲಿ ಮೊದಲ 50ರ ಒಳಗೆ ಸ್ಥಾನ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಡಬಲ್ಸ್‌ ತಂಡ 15ನೇ ಸ್ಥಾನ ಹೊಂದಿದೆ.  ಬೋಪಣ್ಣ ಮತ್ತು ಪೇಸ್‌ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಪೋಲೆಂಡ್‌ನ ಮಾರ್ಸಿನ್‌ ಮಟ್ಕೊವಿಸ್ಕಿ ಹಾಗೂ ಲೂಕಸ್‌ ಕುಬಟ್‌ ಎದುರು ಪೈಪೋಟಿ ನಡೆಸಲಿದ್ದಾರೆ.ಜಿಮೊಂಜಿಕ್‌ ಜತೆ ಅಭ್ಯಾಸ: ಪೇಸ್‌ ಅವರು ಟೆನಿಸ್ ಕೋರ್ಟ್‌ಗೆ ತಡವಾಗಿ ಬಂದ ಕಾರಣ ಬೋಪಣ್ಣ ಸರ್ಬಿಯಾದ ನೆನಾದ್ ಜಿಮೊಂಜಿಕ್‌ ಜೊತೆ ಅಭ್ಯಾಸ ನಡೆಸಿದರು.

ಕೊಠಡಿ ವಿವಾದವಾಗಿಲ್ಲ: ಸ್ಪಷ್ಟನೆ

‘ಲಿಯಾಂಡರ್ ಪೇಸ್ ಒಲಿಂ ಪಿಕ್ಸ್‌ ಕ್ರೀಡಾ ಗ್ರಾಮಕ್ಕೆ ತಡ ವಾಗಿ ಬಂದಿದ್ದರಿಂದ ಅವರಿಗೆ ಬೇಗನೆ ಕೊಠಡಿ ಸಿಗಲಿಲ್ಲ. ಗುರುವಾರ ಕೊಠಡಿ ಸಿಕ್ಕಿದೆ’ ಎಂದು ಭಾರತದ ಚೆಫ್‌ ಡಿ ಮಿಷೆನ್‌ ರಾಕೇಶ್‌ ಗುಪ್ತಾ ತಿಳಿಸಿದ್ದಾರೆ.ಪೇಸ್‌ ಅವರು ಇನ್ನೊಬ್ಬ ಆಟಗಾರನ  ಜೊತೆ ಕೊಠಡಿ ಹಂಚಿಕೊಳ್ಳಲು ನಿರಾಕರಿಸಿ ದ್ದಾರೆ ಎಂದು ಸುದ್ದಿ ಹಬ್ಬಿತ್ತು. ಇದನ್ನು ರಾಕೇಶ್‌ ತಳ್ಳಿ ಹಾಕಿದ್ದಾರೆ. ‘ಪೇಸ್‌ ಹಿರಿಯ ಆಟಗಾರ.  ಅವರಿಗೆ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಇದರಲ್ಲಿ ವಿವಾ ದವಾಗುವಂಥದ್ದು ಏನೂ ಇಲ್ಲ’ ಎಂದೂ ರಾಕೇಶ್‌ ಸ್ಪಷ್ಟಪಡಿಸಿದ್ದಾರೆ.

ಪೇಸ್ ಬೆಂಬಲಕ್ಕೆ ಎಐಟಿಎ

ನವದೆಹಲಿ (ಪಿಟಿಐ): ಟೆನಿಸ್ ಕ್ರೀಡೆಯ ಬಗ್ಗೆ ಲಿಯಾಂಡರ್ ಪೇಸ್ ಅವರ ಬದ್ಧತೆಯನ್ನು ಮಾಧ್ಯಮಗಳು ಪ್ರಶ್ನಿಸುವಂತಿಲ್ಲ ಎಂದು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ)    ಹೇಳಿದೆ. ರಿಯೊ ಒಲಿಂಪಿಕ್ಸ್ ಕ್ರೀಡಾಗ್ರಾಮಕ್ಕೆ ಅವರು ನಿಗದಿತ ವೇಳೆಗಿಂತ ತಡವಾಗಿ ಬಂದಿಳಿದಿದ್ದರು. ಅವರ ಡಬಲ್ಸ್ ಜೊತೆಗಾರ ರೋಹನ್ ಬೋಪಣ್ಣ ಅವರು ಪೇಸ್‌ಗಿಂತಲೂ ಮುಂಚೆ ರಿಯೊ ತಲುಪಿದ್ದರು. ಬೋಪಣ್ಣ ಅವರು ಸರ್ಬಿಯಾದ ನಿನಾದ್ ಜಿಮೊಂಜಿಕ್ ಅವರೊಂದಿಗೆ ಅಭ್ಯಾಸ ನಡೆಸಿದ್ದ ಚಿತ್ರಗಳು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.  ಇದರಿಂದಾಗಿ ಪೇಸ್ ಮತ್ತು ಬೋಪಣ್ಣ ನಡುವೆ ಮತ್ತೆ ಸಮಸ್ಯೆ ಆರಂಭವಾಗಿದೆ ಎಂಬ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಎಐಟಿಎ ಪೇಸ್ ಅವರನ್ನು ಬೆಂಬಲಿಸಿದೆ. ‘ಏಳನೇ ಒಲಿಂಪಿಕ್ಸ್‌ನಲ್ಲಿ ಆಡುತ್ತಿರುವ ಪೇಸ್ ಅವರ ಸಂಪೂರ್ಣ ಜೀವನವನ್ನು ಮಾಧ್ಯಮಗಳು ಅವಲೋಕನ ಮಾಡಲಿ. ಅವರ ಶಿಸ್ತು ಮತ್ತು ಬದ್ಧತೆಯ ಅರಿವಾಗುತ್ತದೆ’  ಎಂದು ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.