ಮಂಗಳವಾರ, ಮೇ 11, 2021
20 °C
ಚಾಂಪಿಯನ್ಸ್ ಟ್ರೋಫಿ: ಭಾರತದ ಎದುರು ಇಂದು ಪಂದ್ಯ, ಮೊದಲ ಗೆಲುವಿನ ಗುರಿಯಲ್ಲಿ ದಕ್ಷಿಣ ಆಫ್ರಿಕಾ

ವಿಶ್ವಾಸದ ಅಲೆಯಲ್ಲಿ ದೋನಿ ಬಳಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಡಿಫ್ : ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಗೆಲುವು ಪಡೆದು ವಿಶ್ವಾಸದ ಚಿಲುಮೆಯಾಗಿರುವ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ  ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುರುವಾರ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಿಸಲಿದೆ.ಸ್ಪಾಟ್ ಫಿಕ್ಸಿಂಗ್ ಪ್ರಕರಣದಿಂದ ತೀವ್ರ ಮುಜುಗರ ಎದುರಿಸಿರುವ ಮಹೇಂದ್ರ ಸಿಂಗ್ ದೋನಿ ಸಾರಥ್ಯದ ಭಾರತ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಸವಾಲು ಹೊಂದಿದೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಮೇಲೆ, ಮತ್ತೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಲಭಿಸಿರುವ ಜಯ ಭಾರತದ ವಿಶ್ವಾಸವನ್ನು ಹೆಚ್ಚಿಸಿದೆ.ಚಾಂಪಿಯನ್ಸ್ ಟ್ರೋಫಿಯ ಇತಿಹಾಸದ ಪುಟ ತಿರುವಿ ಹಾಕಿದಾಗ ದಕ್ಷಿಣ ಆಫ್ರಿಕಾದ ಎದುರು ಭಾರತವೇ ಮೇಲುಗೈ ಹೊಂದಿರುವುದು ಗೊತ್ತಾಗುತ್ತದೆ. ಉಭಯ ತಂಡಗಳು ಎರಡು ಸಲ ಮುಖಾಮುಖಿಯಾಗಿದ್ದು, ಎರಡೂ ಸಲ ಭಾರತವೇ ಗೆಲುವು ಪಡೆದಿದೆ. 2000ರಲ್ಲಿ ಕೀನ್ಯಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ 95 ರನ್‌ಗಳ ಜಯ ಪಡೆದಿತ್ತು. 2002ರಲ್ಲಿ ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಭಾರತ 10 ರನ್‌ಗಳ ವಿಜಯ ಸಾಧಿಸಿತ್ತು.`ಬಿ' ಗುಂಪಿನ ಈ ಪಂದ್ಯದಲ್ಲಿ ಭಾರತಕ್ಕೆ ಸೋಲಿನ ರುಚಿ ತೋರಿಸಬೇಕು ಎನ್ನುವುದು ದಕ್ಷಿಣ ಆಫ್ರಿಕಾದ ಗುರಿಯಾಗಿದೆ. ಇದೇ ಗುಂಪಿನಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಂಡಗಳಿವೆ. 2006-07ರ ಟೂರ್ನಿಯಲ್ಲಿ ಪ್ರಶಸ್ತಿಯ ಸನಿಹ ಬಂದಿದ್ದ ಭಾರತಕ್ಕೆ ಫೈನಲ್‌ನಲ್ಲಿ ನಿರಾಸೆಯಾಗಿತ್ತು.ಅದಕ್ಕೂ ಮುನ್ನ 2000-01ರಲ್ಲಿ ಕೀನ್ಯಾದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿ ನ್ಯೂಜಿಲೆಂಡ್ ಎದುರು ಸೋಲು ಕಂಡಿತ್ತು. 2002-03ರಲ್ಲಿ ಶ್ರೀಲಂಕಾದಲ್ಲಿ ನಡೆದ ಟೂರ್ನಿಯಲ್ಲಿ ಲಂಕಾ ಜೊತೆ ಭಾರತ ಜಂಟಿ ಚಾಂಪಿಯನ್ ಆಗಿತ್ತು. ಕಳೆದ ಸಲದ ವಿಶ್ವಕಪ್ ಜಯಿಸಿ ಏಕದಿನ ಕ್ರಿಕೆಟ್‌ನ ಸಾಮ್ರಾಟನಾಗಿರುವ ಭಾರತ ಈಗ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯುವ ಗುರಿ ಹೊಂದಿದೆ.ಹಿಂದಿನ ಚಾಂಪಿಯನ್ಸ್ ಟ್ರೋಫಿ (2009-10ರಲ್ಲಿ) ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಎರಡು ವರ್ಷಗಳ ಬಳಿಕ ದ್ರಾವಿಡ್ ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿತ್ತು. `ದ ವಾಲ್' ಖ್ಯಾತಿಯ ದ್ರಾವಿಡ್ ಆಡಿದ ಕೊನೆಯ ಪಂದ್ಯ ಕೂಡಾ ಕಾರ್ಡಿಫ್‌ನಲ್ಲಿಯೇ ನಡೆದಿತ್ತು. ಅದಾದ ನಂತರ ಭಾರತ ಮತ್ತೆ ಇಲ್ಲಿ ಆಡಲಿದೆ.ಯುವ ಆಟಗಾರರಿಗೆ ಅಗ್ನಿ ಪರೀಕ್ಷೆ:

ಯುವ ಆಟಗಾರರು ಹೆಚ್ಚಾಗಿರುವ ಭಾರತ ತಂಡದಲ್ಲಿ ಅಂತಿಮ ಹನ್ನೊಂದರಲ್ಲಿ ಯಾರಿಗೆ ಸ್ಥಾನ ಲಭಿಸಲಿದೆ ಎನ್ನುವ ಕುತೂಹಲವಿದೆ. ಆಸ್ಟ್ರೇಲಿಯಾ ಎದುರಿನ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ ದಿನೇಶ್ ಕಾರ್ತಿಕ್ ಅವರಿಗೆ ಬ್ಯಾಟಿಂಗ್‌ನಲ್ಲಿ ಬಡ್ತಿ ಲಭಿಸುವ ಸಾಧ್ಯತೆಯಿದೆ. ಈ ಬಲಗೈ ಬ್ಯಾಟ್ಸ್‌ಮನ್ ಅಸೀಸ್ ಎದುರು 140 ಎಸೆತಗಳಲ್ಲಿ 146 ರನ್ ಗಳಿಸಿದ್ದರು. ವೇಗಿ ಉಮೇಶ್ ಯಾದವ್ ಐದು ಓವರ್‌ಗಳಲ್ಲಿ ಕೇವಲ 18 ರನ್ ನೀಡಿ ಐದು ವಿಕೆಟ್‌ಗಳನ್ನು ಉರುಳಿಸಿದ್ದರು. ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಗಳಿಸಿದ್ದರು. ಈ ಎರಡೂ ಗೆಲುವುಗಳು ಭಾರತದ ವಿಶ್ವಾಸ ಹೆಚ್ಚಿಸಿವೆ. ಅದರ ಜೊತೆಗೆ ಇಲ್ಲಿನ ವಾತಾವರಣಕ್ಕೆ ಬೇಗನೆ ಒಗ್ಗಿಕೊಂಡಿರುವ ಕಾರಣ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು.ಸ್ವಾಲಿಸ್ ಕ್ರೀಡಾಂಗಣದ ಪಿಚ್ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆಯಿರುವ ಕಾರಣ ಐದು ಜನ ಬೌಲರ್‌ಗಳೊಂದಿಗೆ ಕಣಕ್ಕಿಳಿಯಲು ದೋನಿ ಯೋಜಿಸಿದ್ದಾರೆ. ಉಮೇಶ್ ಮತ್ತು ಇಶಾಂತ್ ಶರ್ಮ ಅಭ್ಯಾಸ ಪಂದ್ಯಗಳಲ್ಲಿ ನೀಡಿದ ಪ್ರದರ್ಶನ ದೋನಿ ಮೆಚ್ಚುಗೆಗೆ ಕಾರಣವಾಗಿದೆ. ಆದ್ದರಿಂದ ಈ ಜೋಡಿಯೇ ಭಾರತದ ಬೌಲಿಂಗ್ ವಿಭಾಗದ ಪ್ರಮುಖ ಶಕ್ತಿ.ಗೆಲುವಿನ ವಿಶ್ವಾಸ: ಭಾರತದ ಎದುರಿನ ಪಂದ್ಯದಲ್ಲಿ ಜಯದ ಮೂಲಕವೇ ಓಟ ಆರಂಭಿಸಬೇಕೆನ್ನುವ ಗುರಿ ದಕ್ಷಿಣ ಆಫ್ರಿಕಾ ತಂಡದ್ದು. ಆದರೆ, ಈ ತಂಡ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಎದುರು ಸೋಲು ಅನುಭವಿಸಿದೆ. ಆದರೆ, ಅದು ಭಾರತದ ಎದುರಿನ ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಎ.ಬಿ. ಡಿವಿಲಿಯರ್ಸ್ ಹೇಳಿದ್ದಾರೆ.`ಭಾರತದ ಆಟಗಾರರು ಟ್ವೆಂಟಿ-20 ಮಾದರಿ ಕ್ರಿಕೆಟ್‌ನಿಂದ ಬಲು ಬೇಗ ಏಕದಿನ ಮಾದರಿಗೆ ಒಗ್ಗಿಕೊಂಡು ಬಿಡುತ್ತಾರೆ. ಆದ್ದರಿಂದ ಭಾರತ ಎದುರಿನ ಪಂದ್ಯ ಕಠಿಣ ಸವಾಲಾಗಿದೆ' ಎಂದೂ ಅವರು ನುಡಿದರು.ಈ ತಂಡ ಬಾಂಗ್ಲಾದೇಶದಲ್ಲಿ ನಡೆದ ಚೊಚ್ಚಲ ಟೂರ್ನಿಯಲ್ಲಿಯೇ ಚಾಂಪಿಯನ್ ಆಗಿತ್ತು. ದಕ್ಷಿಣ ಆಫ್ರಿಕಾದ ಕೆಲ ಆಟಗಾರರು ಇತ್ತೀಚಿಗೆ ನಡೆದ ಐಪಿಎಲ್‌ನಲ್ಲಿ ಆಡಿದ್ದರು. ಆದ್ದರಿಂದ ಭಾರತದ ಬೌಲರ್‌ಗಳ ಸವಾಲನ್ನು ಹೇಗೆ ಎದುರಿಸಿ ನಿಲ್ಲಬೇಕೆಂಬ `ತಂತ್ರ' ಅವರಿಗೆ ತಿಳಿದಿದೆ. ತಂಡದ ಬೌಲಿಂಗ್ ಶಕ್ತಿ ಡೇಲ್ ಸ್ಟೈನ್ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಜಾಕ್ ಕಾಲಿಸ್, ಹಾಶಿಮ್ ಆಮ್ಲಾ, ಜೇನ್ ಪಾಲ್ ಡುಮಿನಿ ಮತ್ತು ಯುವ ಹಾಗೂ ಸ್ಫೂರ್ತಿ ತುಂಬಬಲ್ಲ ನಾಯಕ ಡಿವಿಲಿಯರ್ಸ್ ತಂಡದ ಪ್ರಮುಖ ಬಲ. ಇವರ ಬಲದ ನೆರವಿನಿಂದ ಭಾರತವನ್ನು ಮಣಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯುಬೇಕು ಎನ್ನುವ ಲೆಕ್ಕಾಚಾರ ದಕ್ಷಿಣ ಆಫ್ರಿಕಾ ತಂಡದ್ದಾಗಿದೆ.ತಂಡಗಳು ಇಂತಿವೆ

ಭಾರತ
: ಮಹೇಂದ್ರ ಸಿಂಗ್ ದೋನಿ (ನಾಯಕ), ಶಿಖರ್ ಧವನ್, ಮುರಳಿ   ವಿಜಯ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಇರ್ಫಾನ್ ಪಠಾಣ್, ಆರ್. ವಿನಯ್ ಕುಮಾರ್, ಭುವನೇಶ್ವರ್ ಕುಮಾರ್, ಅಮಿತ್ ಮಿಶ್ರಾ, ಇಶಾಂತ್ ಶರ್ಮ, ಉಮೇಶ್ ಯಾದವ್ದಕ್ಷಿಣ ಆಫ್ರಿಕಾ: ಎ.ಬಿ. ಡಿವಿಲಿಯರ್ಸ್ (ನಾಯಕ), ಹಾಶಿಮ್ ಆಮ್ಲಾ, ಫರ್ರ್ಹಾನ್ ಬೆಹರ್ಡಿಯನ್, ಜೇನ್ ಪಾಲ್ ಡುಮಿನಿ, ಫಾಫು ಡು ಪ್ಲೆಸಿಸ್, ಕಾಲಿನ್ ಇನ್‌ಗ್ರಾಮ್, ರೊರಿ ಕ್ಲೈನ್‌ವೆಲ್ಟ್, ರ‌್ಯಾನ್ ಮೆಕ್‌ಲಾರೆನ್, ಡೇವಿಡ್ ಮಿಲ್ಲರ್, ಮಾರ್ನೆ ಮಾರ್ಕೆಲ್, ಅಲ್ವಿರೊ ಪೀಟರ್ಸನ್, ರಾಬಿನ್  ಪೀಟರ್ಸನ್, ಆ್ಯರನ್ ಫಂಗಿಸೊ, ಡೇಲ್ ಸ್ಟೈನ್ ಮತ್ತು ಲೊವೊಬೊ ಸೊಸೊಬೆ.ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ. (ಭಾರತೀಯ ಕಾಲಮಾನ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.