ಭಾನುವಾರ, ಡಿಸೆಂಬರ್ 8, 2019
21 °C

ವಿಶ್ವಾಸಮತ ಯಾಚನೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಾಸಮತ ಯಾಚನೆ ಇಲ್ಲ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರು ತಮ್ಮ ಸರ್ಕಾರದೊಡನೆ ನ್ಯಾಯಾಂಗ ಮತ್ತು ಸೇನೆ ಸಂಘರ್ಷಕ್ಕೆ ಇಳಿದಿರುವ ಹಿನ್ನೆಲೆಯಲ್ಲಿ ಉಂಟಾದ ಆಡಳಿತ ಬಿಕ್ಕಟ್ಟಿನಿಂದ ಪಾರಾಗಲು ತಾವು ಸಂಸತ್ತಿನಿಂದ ವಿಶ್ವಾಸಮತ ಯಾಚಿಸುವುದಿಲ್ಲ ಹಾಗೂ ಯಾವುದೇ ಆಡಳಿತ ಸಂಸ್ಥೆಗಳೊಂದಿಗೆ ತಿಕ್ಕಾಟ ನಡೆಸಲು ಬಯಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅವರು ಶುಕ್ರವಾರ ಪಾಕ್ ರಾಷ್ಟ್ರೀಯ ಅಸೆಂಬ್ಲಿ ಅಥವಾ ಸಂಸತ್ತಿನ ಕೆಳಮನೆಯ ವಿಶೇಷ ತುರ್ತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ, `ಈಗ ತಾವು ವಿಶ್ವಾಸಮತ ಯಾಚಿಸುವ ಅಗತ್ಯವಿಲ್ಲ~ ಎಂದರು. ಉನ್ನತ ವ್ಯಕ್ತಿಗಳ ಭ್ರಷ್ಟಾಚಾರ ಪ್ರಕರಣಗಳ ಮರುವಿಚಾರಣೆಗೆ ಮುಂದಾಗದಿದ್ದಲ್ಲಿ ಅಧ್ಯಕ್ಷರು ಮತ್ತು ಪ್ರಧಾನಿಯ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಸುಪ್ರೀಂ ಕೋರ್ಟ್ ನೀಡಿದ ಹಿನ್ನೆಲೆಯಲ್ಲಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರವು ಈ ವಿಶೇಷ ಅಧಿವೇಶನವನ್ನು ಕರೆದಿತ್ತು.

ತಮ್ಮ ಭಾಷಣದ ಉದ್ದಕ್ಕೂ ವಿರೋಧ ಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಅವರು, “ಹಿಂದಿನ ಸೇನಾಡಳಿತವು ಭ್ರಷ್ಟಾಚಾರ ಪ್ರಕರಣದ `ಕ್ಷಮಾದಾನ~ಕ್ಕಾಗಿ ಹೊರಡಿಸಿದ `ರಾಷ್ಟ್ರೀಯ ವ್ಯಾಜ್ಯ ಪರಿಹಾರ ಸುಗ್ರೀವಾಜ್ಞೆ~ ಅನ್ವಯ ರದ್ದುಗೊಳಿಸಲಾದ ಪ್ರಕರಣಗಳನ್ನು ಮರುವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ನಂತರ ಉಂಟಾಗಿರುವ ಆಡಳಿತ ಬಿಕ್ಕಟ್ಟನ್ನು ನಿಭಾಯಿಸಲು ಸರ್ಕಾರಕ್ಕೆ ಪ್ರತಿಪಕ್ಷಗಳ ಬೆಂಬಲ ಬೇಕಾಗಿಲ್ಲ” ಎಂದು ತಿರುಗೇಟು ನೀಡಿದರು.

ಈ ಸುಗ್ರೀವಾಜ್ಞೆಯನ್ನು 2009ರಲ್ಲಿ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಈ ಬಗ್ಗೆ ಮಾತನಾಡಿದ ಗಿಲಾನಿ, `ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಭ್ರಷ್ಟಾಚಾರ ಪ್ರಕರಣಗಳಿಂದ ಬಚಾವ್ ಆಗಲು ತುರ್ತು ಅಧಿವೇಶನ ಕರೆದಿದೆ ಎಂದು ಪ್ರತಿಪಕ್ಷ ನಾಯಕರು ಭಾವಿಸಿರಬಹುದು. ಆದರೆ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ಸಂಸತ್ತಿನ ಬೆಂಬಲ ಯಾಚಿಸಿ ನಾವಿಲ್ಲಿಗೆ ಬಂದಿಲ್ಲ~ ಎಂದು ಅವರು ತಿಳಿಸಿದರು.

`ಸೇನಾ ದಂಗೆಯಿಂದ ತಪ್ಪಿಸಿಕೊಳ್ಳಲು ನಿಮ್ಮ ಬೆಂಬಲ ಯಾಚಿಸಿ ನಾವಿಲ್ಲಿಗೆ ಬಂದಿಲ್ಲ ಅಥವಾ ಯಾವುದೇ ಆಡಳಿತ ಸಂಸ್ಥೆಗಳೊಡನೆ ಸಂಘರ್ಷ ನಡೆಸುವುದಕ್ಕೂ ಬಂದಿಲ್ಲ. ವಿರೊಧ ಪಕ್ಷಗಳು ನಂಬಿರುವಂತೆ ನಾವು ಹುತಾತ್ಮರಾಗಲು ಕೂಡಾ ಬಯಸಿಲ್ಲ~ ಎಂದು ಅವರು ನುಡಿದರು.

`ಸಂಸತ್ ಅಥವಾ ಪ್ರಧಾನಿಯ ಅಧಿಕಾರಾವಧಿಯನ್ನು ಮೊಟಕುಗೊಳಿಸಲು ಅವಿಶ್ವಾಸ ಮತ ಯಾಚನೆ ಅಥವಾ ಸಂವಿಧಾನ ತಿದ್ದುಪಡಿ ಸೇರಿದಂತೆ ಯಾವುದೇ ಬೇಡಿಕೆ ಮೇಲೆ ಸದನ ಚರ್ಚಿಸಬಹುದು. ಆದರೆ ಸರ್ಕಾರದ ಅಧಿಕಾರಾವಧಿ ಮತ್ತಿತರ ವಿಷಯಗಳನ್ನು ತೀರ್ಮಾನಿಸಲು ಇತರ ಆಡಳಿತ ಸಂಸ್ಥೆಗಳನ್ನು ಸಂಪರ್ಕಿಸಿ ಅವಲಂಬಿಸಬೇಡಿ~ ಎಂದು ಅವರು ಪ್ರತಿಪಕ್ಷಗಳಿಗೆ ಕಿವಿಮಾತು ಹೇಳಿದರು.

ಸೇನಾ ದಂಗೆ ತಪ್ಪಿಸಲು ಅಮೆರಿಕದ ಬೆಂಬಲ ಕೋರಿ ಸರ್ಕಾರ ಪತ್ರ ಬರೆದ `ಮೆಮೊಗೇಟ್~ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ಗೆ ಪ್ರಮುಖ ವಿರೋಧ ಪಕ್ಷ ಪಿಎಂಎಲ್-ಎನ್ ಅರ್ಜಿ ಸಲ್ಲಿಸಿರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಅವರು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು. `ಮೆಮೊಗೇಟ್ ಹಗರಣದ ತನಿಖೆಯನ್ನು ಸಂಸತ್ ನಡೆಸಬೇಕೇ ಹೊರತು ಸುಪ್ರೀಂಕೋರ್ಟ್ ಅಲ್ಲ~ ಎಂದೂ ಅವರು ಉತ್ತರಿಸಿದರು. ತಮ್ಮ ಸರ್ಕಾರವನ್ನು ಪತನಗೊಳಿಸುವುದರಿಂದ ಪ್ರತಿಪಕ್ಷಕ್ಕೆ ಯಾವುದೇ ಲಾಭವಾಗದು ಎಂದೂ ಅವರು ಎಚ್ಚರಿಸಿದರು.

ಸೇನಾ ಕಮಾಂಡರ್‌ಗಳ ಸಭೆ

ಇಸ್ಲಾಮಾಬಾದ್ (ಪಿಟಿಐ): ಸರ್ಕಾರ ಮತ್ತು ಸೇನೆ ನಡುವಿನ ಬಿಕ್ಕಟ್ಟು ಬಗೆಹರಿಸುವ ಹೊಣೆಯನ್ನು ಸುಪ್ರೀಂಕೋರ್ಟ್ ತೀರ್ಪಿಗೆ ಬಿಡಲು ಪಾಕ್ ಸೇನಾ ಕಮಾಂಡರ್‌ಗಳ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು `ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್~ ಶುಕ್ರವಾರ ಪ್ರಕಟಿಸಿದೆ.

ಜರ್ದಾರಿ ವಾಪಸ್

ಇಸ್ಲಾಮಾಬಾದ್ (ಪಿಟಿಐ): ಸಂಸತ್ತಿನ ತುರ್ತು ಅಧಿವೇಶನಕ್ಕೂ ಕೆಲ ಗಂಟೆಗಳ ಮುನ್ನ (ಶುಕ್ರವಾರ ಬೆಳಿಗ್ಗೆ 5ಕ್ಕೆ ) ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ದುಬೈನಿಂದ ಸ್ವದೇಶಕ್ಕೆ ಮರಳಿದರು. ಸ್ನೇಹಿತರೊಬ್ಬರ ಪುತ್ರನ ವಿವಾಹದಲ್ಲಿ ಪಾಲ್ಗೊಳ್ಳಲು ಅವರು ದುಬೈಗೆ ತೆರಳಿದ್ದರು ಎನ್ನಲಾಗಿದೆ.

ಅಣ್ವಸ್ತ್ರ ಸುರಕ್ಷಿತ: ಅಮೆರಿಕ

ವಾಷಿಂಗ್ಟನ್ (ಪಿಟಿಐ): ಪಾಕ್‌ನ ರಾಜಕೀಯ ಅಸ್ಥಿರತೆ ಹಿನ್ನೆಲೆಯಲ್ಲಿ ಅಣ್ವಸ್ತ್ರಸುರಕ್ಷತೆ ಮತ್ತು ಭದ್ರತೆಗೆ ಯಾವುದೇ ತೊಂದರೆಯಾಗದು. ಎಂಬ ವಿಶ್ವಾಸವನ್ನು ಅಮೆರಿಕ ವ್ಯಕ್ತಪಡಿಸಿದೆ. ಈ ಬಗ್ಗೆ ಒಬಾಮ ಆಡಳಿತಕ್ಕೆ ಭರವಸೆ ಇದೆ ಎಂದು ವಿದೇಶಾಂಗ ಸೇನಾ ನಿಯಂತ್ರಣಗಳ ಇಲಾಖೆ ತಿಳಿಸಿದೆ.

`ಹೊಣೆಗಾರಿಕೆ ಇರಲಿ~

ಇಸ್ಲಾಮಾಬಾದ್ (ಪಿಟಿಐ): ಪತ್ರಕರ್ತ ಸೈಯದ್ ಸಲೀಂ ಶಹಜಾದ್ ಹತ್ಯೆಯ ಬಗ್ಗೆ ತನಿಖೆ ನಡೆಸಿದ ಪಾಕ್ ನ್ಯಾಯಾಂಗ ಆಯೋಗವು ಪ್ರಧಾನಿಗೆ ಸಲ್ಲಿಸಿದ ತನ್ನ ವರದಿಯಲ್ಲಿ ಗುಪ್ತಚರ ಸಂಸ್ಥೆಗಳನ್ನು ಹೆಚ್ಚು ಜವಾಬ್ದಾರಿಯುತ ಮಾಡಬೇಕು ಮತ್ತು ಅವುಗಳಿಗೂ ಹೊಣೆಗಾರಿಕೆ ಇರಲಿ ಎಂದು ಸಲಹೆ ನೀಡಿದೆ.

ಪ್ರತಿಕ್ರಿಯಿಸಿ (+)