ವಿಶ್ವಾಸ ಗೆದ್ದ ಎಎಪಿ

7

ವಿಶ್ವಾಸ ಗೆದ್ದ ಎಎಪಿ

Published:
Updated:

ನವದೆಹಲಿ: ಆರು ದಿನದ ಹಿಂದೆ ಅಧಿ­ಕಾರಕ್ಕೆ ಬಂದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ‘ಆಮ್‌ ಆದ್ಮಿ ಪಕ್ಷ’ (ಎಎಪಿ) ಗುರು­ವಾರ ದೆಹಲಿ ವಿಧಾನಸಭೆಯಲ್ಲಿ ಬಹುಮತ ಪಡೆಯಿತು. ಭ್ರಷ್ಟಾಚಾರ ರಹಿತವಾದ ಆಡಳಿತ ನೀಡುವ ಭರ­ವಸೆ­ಯೊಂದಿಗೆ ಆಡಳಿತಕ್ಕೆ ಬಂದಿರುವ ಎಎಪಿಗೆ ಕಾಂಗ್ರೆಸ್‌, ಜೆಡಿಯು, ಪಕ್ಷೇತರ ಸದಸ್ಯರು ಬೆಂಬಲಿಸಿದರು.ಲೋಕೋಪಯೋಗಿ ಸಚಿವ ಮನೀಷ್‌ ಸಿಸೋಡಿಯ ಮಂಡಿಸಿದ ವಿಶ್ವಾಸ ಮತದ ನಿರ್ಣಯದ ಮೇಲೆ ಸದನ ನಾಲ್ಕೂವರೆ ಗಂಟೆ ಚರ್ಚಿ­ಸಿತು. ಕೊನೆಗೆ 25 ನಿಮಿಷ ಮಾತ­­--­ನಾಡಿದ ಮುಖ್ಯಮಂತ್ರಿ ಕೇಜ್ರಿವಾಲ್‌, ಎಎಪಿ ಸತ್ಯ ಮತ್ತು ನ್ಯಾಯಯುತ ಆಡಳಿತ ಕೊಡುವ ಸಂಕಲ್ಪ ಮಾಡಿ­ದ್ದು, ಶಾಸಕರು ತಮ್ಮ ದಾರಿ ಸ್ಪಷ್ಟಪಡಿಸಬೇಕು ಎಂದು ಹೇಳಿದರು.ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗಬೇಕೆಂದು ದೆಹಲಿ ಜನ ನಿರ್ಣಯಿಸಿದ್ದಾರೆ.ಜನ ಭ್ರಷ್ಟಾಚಾರ­ದಿಂದ ರೋಸಿದ್ದಾರೆ. ಅವರಿಗೆ ಪ್ರಾಮಾ­ಣಿಕವಾದ ಆಡಳಿತ ಬೇಕಾ­ಗಿದೆ. ಜನರ ನಿರೀಕ್ಷೆ ಸಾಕಾರ­ಗೊಳಿ­ಸಲು ಎಎಪಿ  ಬದ್ಧವಾಗಿದೆ ಎಂದು ಕೇಜ್ರಿವಾಲ್‌ ಭರವಸೆ ನೀಡಿದರು. ನಾವು ಭ್ರಷ್ಟಾಚಾರ ಸಹಿಸುವುದಿಲ್ಲ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವ್ಯವಹಾರಗಳು, ಬಿಜೆಪಿ ವಶದಲ್ಲಿರುವ ಪಾಲಿಕೆಗಳ ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ ಕೈಗೊಳ್ಳ­ಲಾಗುವುದು ಎಂದು ಪ್ರಕಟಿಸಿದರು.ತಮ್ಮ ಪಕ್ಷ ಇಲ್ಲವೆ ಸರ್ಕಾರಕ್ಕೆ ಬೆಂಬಲ ಕೊಡುವಂತೆ ತಾವು ಕೇಳುವುದಿಲ್ಲ. ರಾಜಧಾನಿ ದೆಹಲಿಯ ಜನರ ಮುಂದಿರುವ ಸಮಸ್ಯೆಗಳ ನಿವಾರಣೆಗೆ ಸಹಕರಿಸಿ ಎಂದು ಕೇಳುತ್ತಿರುವೆ ಎಂದರು.

ಮುಖ್ಯಮಂತ್ರಿ ಭಾಷಣದ ಬಳಿಕ ಸರ್ಕಾರದ ವಿಶ್ವಾಸಮತ ಬೆಂಬಲಿಸುವವರು ಎದ್ದು ನಿಲ್ಲುವಂತೆ ಹಂಗಾಮಿ ಸ್ಪೀಕರ್‌ ಎಂ. ಅಹಮದ್‌ ಹೇಳಿದರು. ಎಎಪಿಯ 28, ಕಾಂಗ್ರೆಸಿನ ಏಳು, ಜೆಡಿಯು ಒಬ್ಬರು ಮತ್ತು ಪಕ್ಷೇತರ ಸದಸ್ಯರೊಬ್ಬರು ಎದ್ದು ನಿಂತರು. ರಾಜ್ಯ ಸರ್ಕಾರ ವಿಶ್ವಾಸ ಮತ ಪಡೆದಿದೆ ಎಂದು ಸ್ಪೀಕರ್‌ ಘೋಷಿಸಿದರು. ಬಿಜೆಪಿಯ 31, ಅಕಾಲಿದಳ ಒಬ್ಬರು ಸದಸ್ಯರು ವಿಶ್ವಾಸಮತ ವಿರೋಧಿಸಿದರು.ರಾಜಧಾನಿಯಲ್ಲಿ ಹದಿನೈದು ವರ್ಷ ಆಡಳಿತ ನಡೆಸಿ, ಹೀನಾ­ಯ­ವಾಗಿ ಸೋತ ಕಾಂಗ್ರೆಸ್‌ ಪಕ್ಷದ ಏಳು ಸದಸ್ಯರು ಸರ್ಕಾರ­ವನ್ನು ಬೆಂಬಲಿಸಲಿದ್ದಾರೆಂದು ಆ ಪಕ್ಷದ ನಾಯಕ ಅರವಿಂದರ್‌ ಲೌವ್ಲಿ ಹೇಳಿದಾಗಲೇ ಎಎಪಿ ವಿಶ್ವಾಸ ಮತ ಪಡೆಯುವುದು ಖಾತ್ರಿಯಾಗಿತ್ತು.

ರಾಜ್ಯ ಸರ್ಕಾರ ಎಲ್ಲಿವರೆಗೆ ಜನಪರ ಆಡಳಿತ ಕೊಡುತ್ತದೆ ಅಲ್ಲಿವರೆಗೆ ನಮ್ಮ ಬೆಂಬಲ ಮುಂದುವರಿಯುತ್ತದೆ. ಆದರೆ, ದುಡುಕಿನ ಮತ್ತು ಸೇಡಿನ ತೀರ್ಮಾನ ಮಾಡಬೇಡಿ ಎಂದರು.ನಿರೀಕ್ಷೆಯಂತೆ ವಿರೋಧ ಪಕ್ಷ ಬಿಜೆಪಿ ವಿಶ್ವಾಸಮತ ವಿರೋಧಿಸಿತು. ಅರವಿಂದ್‌ ಕೇಜ್ರಿವಾಲ್‌ ಅಧಿಕಾರಕ್ಕಾಗಿ ಭ್ರಷ್ಟ ಕಾಂಗ್ರೆಸ್‌ ಪಕ್ಷದ ಜೊತೆ ಕೈಜೋಡಿಸುತ್ತಿದ್ದಾರೆ. ಹಿಂದಿನ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ ಕುರಿತು ಮೌನವಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಡಾ. ಹರ್ಷವರ್ಧನ್‌ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry