ಭಾನುವಾರ, ಮೇ 22, 2022
28 °C

ವಿಶ್ವಾಸ ಮೂಡಿಸಿದ ನಿಷ್ಠುರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಚಾರಣೆ ಆರಂಭದ ಹಂತದಲ್ಲಿ ಜೈಲಿಗೆ ಹೋಗುವಂತೆ ಆಗಿರುವುದು ರಾಜ್ಯದ ನ್ಯಾಯಾಂಗ ವ್ಯವಸ್ಥೆಯ ನಿಷ್ಪಕ್ಷಪಾತ ನಿಷ್ಠುರ ನಡವಳಿಕೆಯ ಬಗ್ಗೆ ಸಾಮಾನ್ಯ ಜನತೆಯಲ್ಲಿ ವಿಶ್ವಾಸ ಮೂಡಿಸಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂಬುದಕ್ಕೆ ಈ ಪ್ರಕರಣ ನಿದರ್ಶನ.ಪ್ರಜಾಸತ್ತಾತ್ಮಕ ಆಡಳಿತ ಜಾರಿಗೆ ಬಂದ ಆರು ದಶಕಗಳಲ್ಲಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿದ್ದ ಮುಖ್ಯಸ್ಥರೊಬ್ಬರು ಅಧಿಕಾರ ದುರುಪಯೋಗ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಆರೋಪಗಳ ಕಾರಣ ಅಧಿಕಾರ ತ್ಯಾಗ ಮಾಡಿದ್ದಲ್ಲದೆ, ವಿಚಾರಣೆಯ ಹಂತದಲ್ಲಿಯೇ ಜಾಮೀನು ನಿರಾಕರಣೆಗೆ ಒಳಗಾಗಿ ಬಂಧನಕ್ಕೆ ಒಳಗಾಗಿರುವುದು ಇದೇ ಮೊದಲು.

 

ಅಧಿಕಾರ ದುರುಪಯೋಗದಿಂದ ಮಕ್ಕಳು, ಅಳಿಯ ಮತ್ತು ಇತರ ಫಲಾನುಭವಿಗಳು ಸದ್ಯಕ್ಕೆ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ. ಇತರ ರಾಜಕೀಯ ಪಕ್ಷಗಳಿಗಿಂತ ಭಿನ್ನವೆಂದು ಹೇಳಿಕೊಳ್ಳುತ್ತಿದ್ದ ಭಾರತೀಯ ಜನತಾ ಪಕ್ಷದ ನೈತಿಕತೆ ಭ್ರಷ್ಟಾಚಾರದ ಹೊಳೆಯಲ್ಲಿ ಹೀಗೆ ಕೊಚ್ಚಿ ಹೋಗಿರುವುದು ಆ ಪಕ್ಷಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ಹಿನ್ನಡೆ.ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೂರು ವರ್ಷಗಳಲ್ಲಿ ಬಿಜೆಪಿಯ ನಾಲ್ವರು ಮಾಜಿ ಸಚಿವರು ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಆರೋಪಗಳ ವಿಚಾರಣೆಯ ಹಂತದಲ್ಲಿ ಹೀಗೆ ಜೈಲು ಸೇರುವ ಮೂಲಕ ಪಕ್ಷದ ನೈತಿಕ ನೆಲೆಗಟ್ಟನ್ನೇ ದುರ್ಬಲಗೊಳಿಸಿದ್ದಾರೆ. ಇದು ಬಿಜೆಪಿ ಮುಟ್ಟಿರುವ ಹೀನಾಯ ಸ್ಥಿತಿಗೆ ದ್ಯೋತಕ.ದೇಶದ ಯಾವ ರಾಜಕೀಯ ಪಕ್ಷಗಳಲ್ಲೂ ಇಷ್ಟರ ಮಟ್ಟಿನ ಭ್ರಷ್ಟ ನಡವಳಿಕೆ ಇದುವರೆಗೆ ಬಹಿರಂಗವಾಗಿಲ್ಲ. ಪಕ್ಷದಲ್ಲಿ ಇಂಥ ಭ್ರಷ್ಟರು ಇದ್ದರೂ ಬಿಜೆಪಿ ವರಿಷ್ಠ ನಾಯಕ ಲಾಲಕೃಷ್ಣ ಅಡ್ವಾಣಿ ಭ್ರಷ್ಟಾಚಾರದ ವಿರುದ್ಧ ದೇಶದಾದ್ಯಂತ ಜನಜಾಗೃತಿ ಮೂಡಿಸಲು `ಜನಚೇತನ ಯಾತ್ರೆ~ಯನ್ನು ಕೈಗೊಂಡಿರುವುದು ನಾಚಿಕೆಗೇಡಿನ ವರ್ತನೆ.  ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನವನ್ನು ಪುತ್ರರು ಮತ್ತು ಅಳಿಯನ ಹೆಸರಲ್ಲಿ ಆಸ್ತಿ ಮಾಡಿಕೊಡುವುದಕ್ಕೆ ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಡಿನೋಟಿಫೈ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಈಗ ಜೈಲು ಸೇರಿದ್ದಾರೆ.

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಲೋಕಾಯುಕ್ತರ ತನಿಖೆಯಲ್ಲಿ ಬಯಲಿಗೆ ಬಂದ ಮುಖ್ಯಮಂತ್ರಿಯವರ ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಇಂಥ ಹಲವು ಪ್ರಕರಣಗಳ ವಿಚಾರಣೆ ನಡೆಯಬೇಕಿದೆ.ಮುಖ್ಯಮಂತ್ರಿ ಮಾತ್ರವಲ್ಲದೆ ಸರ್ಕಾರದ ಅವ್ಯವಹಾರಗಳನ್ನು ಸಾಂವಿಧಾನಿಕ ವೇದಿಕೆಗಳಲ್ಲಿ ಬಯಲಿಗೆಳೆದು ತಡೆ ಹಾಕಬೇಕಿದ್ದ ವಿರೋಧ ಪಕ್ಷಗಳ ನಿಷ್ಕ್ರಿಯತೆಯ ನಡುವೆ, ಇಬ್ಬರು ವಕೀಲರು ಮಾಹಿತಿ ಹಕ್ಕು ಕಾಯ್ದೆಯ ನೆರವಿನಿಂದ ಸರ್ಕಾರದ ಅಧಿಕೃತ ದಾಖಲೆಗಳನ್ನು ಪಡೆದು ಹೂಡಿರುವ ಖಾಸಗಿ ಮೊಕದ್ದಮೆ ಮಾಜಿ ಮುಖ್ಯಮಂತ್ರಿಯನ್ನು ಹೀಗೆ ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಿದೆ.ಸಾರ್ವಜನಿಕ ರಂಗದಲ್ಲಿ ಉನ್ನತ ಅಧಿಕಾರ ಸ್ಥಾನಗಳಿಂದ ನಡೆಯುತ್ತಿರುವ ಭಾರಿ ಭ್ರಷ್ಟಾಚಾರವನ್ನು ಧೈರ್ಯವಾಗಿ ಬಯಲಿಗೆ ಎಳೆಯಲು ಪ್ರಯತ್ನ ನಡೆಸಿದ ವಕೀಲರಾದ ಸಿರಾಜಿನ್ ಬಾಷಾ ಮತ್ತು ಕೆ. ಬಾಲರಾಜ್ ಅವರು ಪ್ರಶಂಸೆಗೆ ಪಾತ್ರರಾಗಿದ್ದಾರೆ.ಈ ಭ್ರಷ್ಟಾಚಾರದ ಪ್ರಕರಣಗಳು ಸಮರ್ಪಕವಾಗಿ ತನಿಖೆಗೆ ಒಳಪಟ್ಟು ರಾಜ್ಯದ ಬೊಕ್ಕಸಕ್ಕೆ  ಉಂಟಾಗಿರುವ ನಷ್ಟವನ್ನು ಆರೋಪಿಗಳಿಂದ ತುಂಬಿಸಿಕೊಳ್ಳುವಂತೆ ಮಾಡುವುದು ರಾಜ್ಯ ಸರ್ಕಾರದ ಹೊಣೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.