ಭಾನುವಾರ, ಮೇ 9, 2021
19 °C

ವಿಶ್ವೇಶ್ವರಯ್ಯ ಅವತಾರಪುರುಷರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: “ಅವರೊಂದಿಗೆ ತಾತ ಎಂಬ ಸಲುಗೆ ಇರಲಿಲ್ಲ. ಆದರೆ ಅವರನ್ನು ಅವತಾರಪುರುಷರನ್ನು ಗೌರವಿಸುವ ಮನಸ್ಸಾಗುತ್ತಿತ್ತು. ಆದ್ದರಿಂದಲೇ ಪೂಜಿಸಿ, ಗೌರವಿಸುತ್ತಿದ್ದೇವು..” ಈ ರೀತಿ ಗದ್ಗದಿತರಾಗಿ ನುಡಿದಿದ್ದು ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ವಂಶಸ್ಥ ಮೋಕ್ಷಗುಂಡಂ ಶೇಷಾದ್ರಿಯವರು.ಗುರುವಾರ ಸೆನೆಟ್ ಭವನದಲ್ಲಿ ಸರ್.ಎಂ. ವಿಶ್ವೇಶ್ವರಯ್ಯನವರ 151ನೇ ಜನ್ಮದಿನೋತ್ಸವ ಮತ್ತು ಎಂಜಿನಿಯರ್‌ಗಳ ದಿನಾಚರಣೆ ಅಂಗವಾಗಿ ಗುರುವಾರ ಕರ್ನಾಟಕ ಎಂಜಿನಿಯರುಗಳ ಸಂಘ, ಕರ್ನಾಟಕ ಎಂಜಿನಿಯರಂಗ್ ಸೇವಾ ಸಂಘ ಹಾಗೂ ಸರ್ಕಾರದ ಕಾಮಗಾರಿಗಳ ಗುಣನಿಯಂತ್ರಣ ಕಾರ್ಯಪಡೆ ಆಶ್ರಯದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಜ್ಯಮಟ್ಟದ ಸಮಾವೇಶದಲ್ಲಿ ವಿಶೇಷ ಆಹ್ವಾನಿತರಾಗಿ ಅವರು ಬಂದಿದ್ದರು.ಹೈದರಾಬಾದಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇಷಾದ್ರಿ ಎಂಬಿಎ ಪದವೀಧರರೂ ಹೌದು. ಸರ್.ಎಂ.ವಿ. ಕುಟುಂಬದ ಕುರಿತು ಹಲವು ಮಾಹಿತಿಗಳನ್ನು ಅವರು ಹಂಚಿಕೊಂಡರು.`ಎಷ್ಟೆಲ್ಲ ಸಾಧನೆಯನ್ನು ಕೇವಲ ಒಬ್ಬ ವ್ಯಕ್ತಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಅವರು ಉತ್ತರರೂಪವಾಗಿದ್ದರು. ಅದಕ್ಕೆ ಅವರನ್ನು ಅವತಾರಪುರುಷ ಎಂದಿದ್ದು. ನಮ್ಮನ್ನೆಲ್ಲ ವೈಯಕ್ತಿಕವಾಗಿ ಕರೆಸಿ ಕಷ್ಟಪಟ್ಟು ಓದಿ ದೊಡ್ಡ ವ್ಯಕ್ತಿಗಳಾಗಬೇಕು ಎಂದು ಹೇಳುತ್ತಿದ್ದರು. ಕುಗ್ರಾಮದಲ್ಲಿ ಹುಟ್ಟಿ, ಆರ್ಥಿಕ ಅನಾನುಕೂಲತೆಯಲ್ಲಿ ಬೆಳೆದರೂ ಅವರು ಏರಿದ ಎತ್ತರ ಅತ್ಯದ್ಭುತ~ ಎಂದು ಹೇಳಿದರು.`ಮಕ್ಕಳಿಗೆ ಪಾಠ ಹೇಳಿಕೊಟ್ಟು ಅದರಿಂದ ಬಂದ ದುಡ್ಡಿನಲ್ಲಿ ತಾವು ಓದಿಕೊಂಡವರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅವರ ಪ್ರತಿಭೆಯನ್ನು ಮೆಚ್ಚಿದ್ದ ಇಂಗ್ಲೆಂಡ್‌ನ ಪ್ರಾಧ್ಯಾಪಕ ಚಾರ್ಲ್ಸ್ ಅವರು ವೆಬ್‌ಸ್ಟರ್ ಶಬ್ದಕೋಶವನ್ನು ಕಾಣಿಕೆಯಾಗಿ ನೀಡಿದ್ದರು. ಅದನ್ನು ಇವತ್ತಿಗೂ ಸುಸ್ಥಿತಿಯಲ್ಲಿ ಕಾಣಬಹುದು.ಚಾರ್ಲ್ಸ್ ತಾವು ನಿಧನ ಹೊಂದುವ ಮುನ್ನ ತಮ್ಮ ಕೋಟಿನ ಚಿನ್ನದ ಬಟನ್ ಮತ್ತು ಟೈ ಪಿನ್ ಅನ್ನು ವಿಶ್ವೇಶ್ವರಯ್ಯನವರಿಗೇ ಕೊಡಬೇಕು ಎಂದು ತಮ್ಮ ಪತ್ನಿಗೆ ಕೊಟ್ಟರು. ಚಾರ್ಲ್ಸ್ ನಿಧನಾನಂತರ ಅವರ ಪತ್ನಿ ಇಲ್ಲಿಗೇ ಬಂದು ಅವನ್ನು ಕೊಟ್ಟು ಹೋಗಿದ್ದರು~ ಎಂದು ಸ್ಮರಿಸಿದರು.`ಸರ್.ಎಂವಿ ಬಹಳ ಶಿಸ್ತಿನ ಮನುಷ್ಯರಾಗಿದ್ದರು. ಹಾಗಾಗಿಯೇ ಅವರಿಗೆ ಆರೋಗ್ಯ ಸಿದ್ಧಿಸಿತ್ತು. ತಮ್ಮ 92ನೇ ವಯಸ್ಸಿನವರೆಗೂ ಕನ್ನಡಕವನ್ನೇ ಹಾಕಿರಲಿಲ್ಲ. ಪ್ರತಿದಿನ ಎರಡು ಮೈಲಿ ವಾಯುವಿಹಾರ ಮಾಡುತ್ತಿದ್ದರು. ಬುದ್ಧಿ ಹೇಳುವ ವಿಧಾನದಲ್ಲಿಯೂ ವಿನೂತನ ರೀತಿಯಿತ್ತು~ ಎಂದು ಹೇಳಿದರು.ಗಮನ ಸೆಳೆದ ಸ್ತಬ್ಧಚಿತ್ರ

ಮೈಸೂರು: ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಿಸಿ ಮೈಸೂರು, ಮಂಡ್ಯ ಭಾಗವನ್ನು ಅನ್ನದಾತ ಎನಿಸಿಕೊಂಡ ಭಾರತರತ್ನ ಸರ್  ಎಂ.ವಿಶ್ವೇಶ್ವರಯ್ಯನವರ 151ನೇ ಜಯಂತಿಯನ್ನು ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.|ನಿವೃತ್ತ ಎಂಜಿನಿಯರುಗಳು, ಕಾರ್ಯನಿರ್ವಾಹಕ ಎಂಜಿನಿಯರುಗಳು, ನಗರದ ವಿವಿಧ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜಿನ  ವಿದ್ಯಾರ್ಥಿಗಳನ್ನು ಸರ್‌ಎಂವಿ ಕೊಡುಗೆಯನ್ನು ಸ್ಮರಿಸಿದರು.ಪಿಡಬ್ಲ್ಯೂಡಿ ಕಚೇರಿ (ವಿಶ್ವೇಶ್ವರಯ್ಯನವರ ಶಿಲ್ಪಿ ನಿವಾಸ) ಮುಂಭಾಗದಲ್ಲಿರುವ ವಿಶ್ವೇಶ್ವರಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಅಲ್ಲಿಂದ ವಿವಿಧ ಜಾನಪದ ಕಲಾತಂಡಗಳು, ಬೀಸು ಕಂಸಾಳೆ ಕಲಾವಿದರೊಂದಿಗೆ ವಿಶ್ವೇಶ್ವರಯ್ಯನವರ ಭಾವಚಿತ್ರವಿರುವ ಸ್ತಬ್ಧ ಚಿತ್ರದೊಂದಿಗೆ ಮೆರವಣಿಗೆ ಹೊರಟ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಜೆಎಲ್‌ಬಿ ರಸ್ತೆಯ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ ಸಂಸ್ಥೆ ತಲುಪಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರುಗಳು ಹಾಗೂ ಸಿಬ್ಬಂದಿ ತಯಾರಿಸಿದ್ದ ಸ್ತಬ್ಧಚಿತ್ರ ನೋಡುಗರ ಗಮನ ಸೆಳೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.