ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ಹೀನಸ್ಥಿತಿ

7

ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ಹೀನಸ್ಥಿತಿ

Published:
Updated:
ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ಹೀನಸ್ಥಿತಿ

ಬೆಂಗಳೂರು: ಬಾಗಿಲುಗಳಿಲ್ಲದ ಶೌಚಾಲಯಗಳು. ಕೊಳೆ, ಕಸ ತುಂಬಿದ ಡೈನಿಂಗ್ ಹಾಲ್. ನೀರು ಬಾರದ ಸ್ನಾನಗೃಹದ ನಲ್ಲಿಗಳು. ಇಲಿ, ಹೆಗ್ಗಣಗಳ ಗೂಡಾಗಿರುವ ಸ್ಟೋರ್ ರೂಮು. ತೆರೆದ ಪಿಟ್ ಗುಂಡಿಗಳು. ಹಳೆಯ ಭೂತ ಬಂಗಲೆಯಂತಿರುವ, ಸೋರುವ ಕೊಠಡಿಗಳು. ಹಾಸಿಗೆ ಇಲ್ಲದ ಕಬ್ಬಿಣದ ಮಂಚಗಳು...ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಶನಿವಾರ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯದಲ್ಲಿ ನಡೆಸಿದ ಪರಿಶೀಲನೆ ವೇಳೆ ಕಂಡು ಬಂದ ಅವ್ಯವಸ್ಥೆಯ ಒಂದು ಸಣ್ಣ ತುಣುಕು ಇದು.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯ ಸೇರಿದಂತೆ ಮಹಿಳಾ ವಿದ್ಯಾರ್ಥಿನಿ ನಿಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ವಿವಿಧ ವಿಭಾಗಗಳಿಗೆ ಕುಲಸಚಿವರು ಭೇಟಿ ನೀಡಿದರು. ವಿದ್ಯಾರ್ಥಿ ನಿಲಯಗಳು ಹಾಗೂ ಕಾಲೇಜಿನ ಸಮಸ್ಯೆಗಳನ್ನು ವೀಕ್ಷಿಸಿ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 

ಅವ್ಯವಸ್ಥೆಗಳ ಆಗರ:  ಒಟ್ಟು 360 ವಿದ್ಯಾರ್ಥಿಗಳಿರುವ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯದ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. 30 ಶೌಚಾಲಯಗಳಿದ್ದರೂ ಒಂದೇ ಒಂದು ಶೌಚಾಲಯಕ್ಕೂ ಸರಿಯಾದ ಬಾಗಿಲು, ಚಿಲಕ ಹಾಗೂ ನೀರಿನ ವ್ಯವಸ್ಥೆ ಇಲ್ಲ. ಗಬ್ಬು ನಾರುವ ಈ ಶೌಚಾಲಯಗಳನ್ನೇ ವಿದ್ಯಾರ್ಥಿಗಳು ಇಲ್ಲಿ ಅನಿವಾರ್ಯವೆಂಬಂತೆ ಬಳಸುತ್ತಿದ್ದಾರೆ. ಇಲ್ಲಿನ ಅಡುಗೆ ಕೋಣೆ ಬಚ್ಚಲು ಮನೆಗಿಂತಲೂ ಕೆಟ್ಟದಾಗಿದೆ. ಆದರೂ ವಿದ್ಯಾರ್ಥಿಗಳಿಗೆ ಇಲ್ಲಿಯೇ ಊಟದ ವ್ಯವಸ್ಥೆಯಾಗುತ್ತಿದೆ.ಇಲ್ಲಿರುವ ಎಲ್ಲ ವಿದ್ಯಾರ್ಥಿಗಳೂ ಇರುವ ಎರಡು ನಲ್ಲಿಗಳಿಂದಲೇ ಸ್ನಾನಕ್ಕೆ ನೀರು ಪಡೆಯಬೇಕು.

`ವಾರ್ಡನ್‌ಗೆ ಹೇಳಿ ಸಾಕಾಗಿದೆ. ಹಿರಿಯ ಅಧಿಕಾರಿಗಳಿಗೂ ಹಲವು ಬಾರಿ ಮನವಿ ಮಾಡಿದ್ದೇವೆ. ಮೂರ‌್ನಾಲ್ಕು ಬಾರಿ ವಿವಿಯಲ್ಲಿ ಪ್ರತಿಭಟನೆಯನ್ನೂ ಮಾಡಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ದೂರು ನೀಡಿದವರ ಮೇಲೆಯೇ ಅಧಿಕಾರಿಗಳು ಕಣ್ಣಿಟ್ಟು, ಆಂತರಿಕ ಮೌಲ್ಯಮಾಪನದ ಅಂಕಗಳಿಗೆ ಕತ್ತರಿ ಹಾಕಿಸುತ್ತಾರೆ~ ಎಂಬುದು ಹೆಸರು ಹೇಳಲಿಚ್ಛಿಸದ ಎಂ.ಇ ವಿದ್ಯಾರ್ಥಿಯ ಅಳಲು.ಇಲಿ ಹೆಗ್ಗಣಗಳ ಕಾಟ: ವಿಶ್ವವಿದ್ಯಾಲಯ ಮಹಿಳಾ ವಿದ್ಯಾರ್ಥಿನಿ ನಿಲಯದ ಕಾಂಪೌಂಡ್‌ಗಳೇ ಸರಿಯಿಲ್ಲ. ಈಗಲೋ, ಆಗಲೋ ಬೀಳುವಂತಿರುವ ಕಾಂಪೌಡ್‌ನ ಕಿಂಡಿಗಳಿಂದ ಪೋಲಿ ಪುಂಡರ ಹಾವಳಿ ವಿದ್ಯಾರ್ಥಿನಿಯರಿಗೆ ತಪ್ಪಿದ್ದಲ್ಲ. ಸ್ನಾನ ಗೃಹಗಳಿಗೆ ಸರಿಯಾದ ಬಾಗಿಲುಗಳಿಲ್ಲ. ಊಟದ ವ್ಯವಸ್ಥೆ ಒಂದನ್ನು ಬಿಟ್ಟರೆ ಮತ್ತಾವ ವ್ಯವಸ್ಥೆಯೂ ಸರಿಯಿಲ್ಲ ಎಂಬುದು ವಿದ್ಯಾರ್ಥಿನಿಯರ ಆರೋಪ.`ಹಳೆಯ ಕಾನೂನು ಕಾಲೇಜಿನ ಕಟ್ಟಡವನ್ನೇ ಈಗ ವಿದ್ಯಾರ್ಥಿನಿಯರ ಹಾಸ್ಟೆಲ್ ಆಗಿ ಬಳಸಲಾಗುತ್ತಿದೆ. ಒಡೆದ ಕಿಟಕಿಗಳಿಗೆ ಗಾಜು ಹಾಕಿಸದೇ ಇಲಿ, ಹೆಗ್ಗಣಗಳು ರಾತ್ರಿ ವೇಳೆ ಕೊಠಡಿಗಳಿಗೆ ನುಗ್ಗಿ ಮೈ ಮೇಲೆ ಹರಿದಾಡುತ್ತವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೊಸ ಕಟ್ಟಡ ನಿರ್ಮಾಣವಾಗುತ್ತದೆ ಎಂದು ಹೇಳುತ್ತಾ ನಾಲ್ಕು ವರ್ಷ ಕಳೆದಿದೆ. ಇದೆಲ್ಲ ನಮ್ಮ ಹಣೆ ಬರಹ ಅಷ್ಟೇ~ ಎಂಬುದು ಎಂ.ಕಾಂ ವಿದ್ಯಾರ್ಥಿನಿ ರೇಖಾ ಅವರ ದೂರು.ದೂಳು ಹಿಡಿದ ಯಂತ್ರಗಳು:  ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿನ ಎಲ್ಲ ವಿಭಾಗಗಳೂ ದೂಳು ತುಂಬಿದ್ದು ಕಂಡ ಕುಲಸಚಿವರು ಅಧಿಕಾರಿಗಳ ಮೇಲೆ ಹರಿಹಾಯ್ದರು. ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಯೋಗಾಲಯಗಳ ಪುರಾತನ ಯಂತ್ರಗಳು ದೂಳು ಹಿಡಿದು, ಕೆಲವು ತುಕ್ಕು ಹಿಡಿಯುತ್ತಿವೆ. ಡ್ರಾಯಿಂಗ್ ವಿಭಾಗದ ಡ್ರಾಯಿಂಗ್ ಟೇಬಲ್‌ಗಳು ಗೆದ್ದಲು ತಿನ್ನುತ್ತಿವೆ.`ಇಷ್ಟೆಲ್ಲ ಸಮಸ್ಯೆ ಕಣ್ಣಿಗೆ ಕಾಣುತ್ತಿದ್ದರೂ ಏಕೆ ಸರಿಪಡಿಸಲು ಮುಂದಾಗಿಲ್ಲ~ ಎಂಬ ಕುಲಸಚಿವರ ಪ್ರಶ್ನೆಗೆ ಅಧಿಕಾರಿಗಳು ಸಮರ್ಪಕವಾಗಿ ಉತ್ತರಿಸಲಿಲ್ಲ.`ಒಂದು ವಾರದೊಳಗೇ ಎಲ್ಲವೂ ಸರಿಯಾಗಬೇಕು. ವಿಭಾಗಗಳ ಹಳೆಯ ವಸ್ತುಗಳ ವಿಲೇವಾರಿ ಕೂಡಲೇ ಆಗಬೇಕು. ವಿಭಾಗಗಳ ಯಾರಿಗೂ ಜವಾಬ್ದಾರಿಯೇ ಇಲ್ಲ. ಇರುವ ಅವ್ಯವಸ್ಥೆ ಸರಿಹೋಗದಿದ್ದಲ್ಲಿ ಕಠಿಣ ಕ್ರಮ ಅನಿವಾರ್ಯವಾಗುತ್ತದೆ~ ಎಂದು ವಿವಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಲಸಚಿವ ಮೈಲಾರಪ್ಪ, `ಇದು ಕೇವಲ ಇಂದು ನಿನ್ನೆಯ ಅವ್ಯವಸ್ಥೆಯಲ್ಲ. ಹಿಂದಿನವರೂ ಈ ಅವ್ಯವಸ್ಥೆಯ ಪಾಲುದಾರರು. ಈಗಲಾದರೂ ಹಂತ ಹಂತವಾಗಿ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳು ಮನಸ್ಸು ಮಾಡಬೇಕು. ತಾಂತ್ರಿಕ ಕಾಲೇಜಿನ ವಿದ್ಯಾರ್ಥಿ ನಿಲಯ ಹಾಗೂ ಕೊಠಡಿಗಳ ದುರಸ್ತಿಗಾಗಿ ಕಳೆದ ವರ್ಷದಿಂದ 17 ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ ಎಂಬುದನ್ನು ನೋಡಿದರೆ ವಿವಿಯ ಆಂತರಿಕ ಆಡಳಿತ ಎಷ್ಟು ಹದಗೆಟ್ಟಿದೆ ಎಂಬುದು ತಿಳಿಯುತ್ತದೆ. 70 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯಗಳ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ~ ಎಂದು ಅವರು ತಿಳಿಸಿದರು.

 

`ದಂತ ಗೋಪುರದಲ್ಲಿ ಅವರು, ನೆಲದ ಮೇಲೆ ನಾನು...~

ಬೆಂಗಳೂರು:  `ಕುಲಪತಿಯವರು ಅಧಿಕಾರಕ್ಕೆ ಬಂದು ಮೂರು ವರ್ಷಗಳೇ ಕಳೆದರೂ ವಿ.ವಿ.ಯ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ದಂತಗೋಪುರದಲ್ಲಿ ಕುಳಿತಿರುವ ಅವರು ಪತ್ರಿಕಾ ಹೇಳಿಕೆಗಳನ್ನು ನೀಡುವುದರಲ್ಲಿ ನಿರತರಾಗಿದ್ದಾರೆ. ನೆಲದ ಮೇಲೆ ನಿಂತಿರುವ ನಾನು ವಿ.ವಿ.ಯ ವಾಸ್ತವ ಚಿತ್ರಣವನ್ನು ಜನರಿಗೆ ತೋರಿಸುತ್ತಿದ್ದೇನೆ ಅಷ್ಟೆ~ ಎಂದು ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ ಮಾರ್ಮಿಕವಾಗಿ ನುಡಿದರು.ಪರಿಶೀಲನೆ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ಮೊದಲು ಸಮಸ್ಯೆಗಳಿರುವುದನ್ನು ಒಪ್ಪಿಕೊಳ್ಳಬೇಕು. ಆಗ ಮಾತ್ರ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ~ ಎಂದರು.`ಸಮೀಕ್ಷೆಯೊಂದರ ಪ್ರಕಾರ ದೇಶದ ವಿಶ್ವವಿದ್ಯಾಲಯಗಳ ಪೈಕಿ 2010ರಲ್ಲಿ 13 ನೇ ಸ್ಥಾನದಲ್ಲಿದ್ದ ಬೆಂ.ವಿ.ವಿ 2011ರಲ್ಲಿ 9 ನೇ ಸ್ಥಾನಕ್ಕೆ ಏರಿದೆ ಎಂದು ಕುಲಪತಿಯವರು ಪದೇ ಪದೇ ಹೇಳುತ್ತಿದ್ದಾರೆ. ಆದರೆ ನಿಜವಾದ ಸ್ಥಿತಿಗತಿ ಬೇರೆಯೇ ಇದೆ~ ಎಂದು ಅವರು ಹೇಳಿದರು.`ಪ್ರಚಾರಕ್ಕಾಗಿ ನಾನು ಈ ಪರಿಶೀಲನೆ ನಡೆಸುತ್ತಿಲ್ಲ~ ಎಂದು ಸ್ಪಷ್ಟಪಡಿಸಿದ ಅವರು, `ನನಗೆ ವಿದ್ಯೆ ಬುದ್ಧಿ ಕಲಿಸಿದ ಈ ಸಂಸ್ಥೆಯು ನನಗೆ ಅನ್ನವನ್ನೂ ನೀಡಿದೆ. ಕಿಂಚಿತ್ತಾದರೂ ವಿ.ವಿ ಸುಧಾರಣೆಗಾಗಿ ಶ್ರಮಿಸಬೇಕೆಂಬುದು ನನ್ನ ಗುರಿ~ ಎಂದರು.`ವಿ.ವಿ ವಿದ್ಯಾರ್ಥಿಗಳು ಹಲವು ಮನವಿ ಸಲ್ಲಿಸಿದರು, ಪ್ರತಿಭಟನೆ ಮಾಡಿದರು. ಆದರೂ ಅವರು ವಿ.ವಿ. ವಿಭಾಗಗಳಿಗೆ ಭೇಟಿ ಕೊಡುವ ಮನಸ್ಸು ಮಾಡಲಿಲ್ಲ. ಈಗ ನಾನು ಅವರನ್ನು ಕರೆಯಬೇಕಿತ್ತೆಂದು ಹೇಳುತ್ತಿರುವುದು ತಮಾಷೆಯಾಗಿದೆ. ಮೂರು ತಿಂಗಳ ಹಿಂದೆ ನಾನು ಈ ಅಧಿಕಾರ ಸ್ಥಾನದಲ್ಲಿ ಇರಲಿಲ್ಲ. ಅವರೇ ಪರಿಶೀಲನೆ ನಡೆಸಿ, ಅಭಿವೃದ್ಧಿ ಮಾಡಲು ಯಾರು ಅಡ್ಡಿಯಾಗಿದ್ದರು?~ ಎಂದು ಅವರು ಪ್ರಶ್ನಿಸಿದರು.`ಜ್ಞಾನಭಾರತಿ ವಿ.ವಿ.ಯ ತವರು ಮನೆ ಇದ್ದಂತೆ. ಅಲ್ಲಿ ಆಡಳಿತ ನಡೆಸುವ ಬದಲು, ವಿದ್ಯಾರ್ಥಿಗಳ ಕಷ್ಟ ಸುಖ ಕೇಳುವ ಬದಲು ದೂರದ ಕಾಲೇಜುಗಳಲ್ಲಿ ಅವರು ವಿದ್ಯಾರ್ಥಿ ದರ್ಶನ ಮಾಡುತ್ತಿದ್ದಾರೆ. ಹಿಂದೆ ಕುಲಪತಿಯಾಗಿದ್ದ ಡಿ.ಎಂ.ನಂಜುಂಡಪ್ಪ ಅವರಂತಹವರು ತರಗತಿಗಳಿಗೆ ಭೇಟಿ ನೀಡಿ, ಪಾಠ ಪ್ರವಚನಗಳ ವೈಖರಿಯನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ. ಈಗಿನ ಕುಲಪತಿಯವರು ವಿ.ವಿ ಕಡೆ ತಿರುಗಿಯೂ ನೋಡುತ್ತಿಲ್ಲ~ ಎಂದು ಅವರು ದೂರಿದರು.`ದೂರಶಿಕ್ಷಣ ವಿಭಾಗದ ನಿರ್ದೇಶಕರನ್ನು ಬದಲಾಯಿಸುವಂತೆ ಸ್ವತಃ ಉನ್ನತ ಶಿಕ್ಷಣ ಸಚಿವರು ಆದೇಶ ಮಾಡಿದರೂ ಅದನ್ನು ಪಾಲಿಸುತ್ತಿಲ್ಲ. ವಿ.ವಿ. ಅಭಿವೃದ್ಧಿಗೆ ಸಂಬಂಧಿಸಿದಂತೆ ನಾನು ಕಳುಹಿಸುವ ಟಿಪ್ಪಣಿ, ಕಡತಗಳಿಗೆ ಸಹಿ ಹಾಕುವುದಿಲ್ಲ. ವಾಪಸ್ ಸಹ ಕಳುಹಿಸುವುದಿಲ್ಲ~ ಎಂದು ಆರೋಪಿಸಿದರು.`ಸೋಮವಾರ (ಫೆ. 13) ನಡೆಯುವ ಕಾಮಗಾರಿ ಸಮಿತಿ ಸಭೆಯ ನಂತರ ಸಿಂಡಿಕೇಟ್ ಸಭೆ ಕರೆಯುವಂತೆ ನಾನು ಮನವಿ ಮಾಡಿದ್ದೆನೇ ಹೊರತು ಸಭೆ ಕರೆಯಬಾರದೆಂದು ಹೇಳಿಲ್ಲ. ಇಂದಿನ ಮತ್ತು ಹಿಂದಿನ ಪರಿಶೀಲನೆಗೆ ಕುಲಪತಿಗಳನ್ನೂ ಕರೆದಿದ್ದೆ. ಕೆಲಸದ ಒತ್ತಡದ ಕಾರಣದಿಂದ ಅವರು ಬರಲಾಗಲಿಲ್ಲ~ ಎಂದು ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry