ಭಾನುವಾರ, ಫೆಬ್ರವರಿ 28, 2021
23 °C

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವ: ಚಿನ್ನದ ಹುಡುಗಿಯರ ಸಂಭ್ರಮ

ಬಸವರಾಜ ಹವಾಲ್ದಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವ: ಚಿನ್ನದ ಹುಡುಗಿಯರ ಸಂಭ್ರಮ

ಬೆಳಗಾವಿ: `ಎಷ್ಟು ಹೊತ್ತು ಓದುತ್ತೇವೆ ಎನ್ನುವುದು ಮುಖ್ಯವಲ್ಲ. ವಿಷಯ ಅರ್ಥ ಮಾಡಿಕೊಂಡು, ಮನಸ್ಸು ಕೇಂದ್ರೀಕರಿಸಿ ಎಷ್ಟು ಓದುತ್ತೇವೆ ಎನ್ನುವುದು ಮುಖ್ಯ~ - ಹೀಗೆಂದು ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಮೊದಲ ರ‌್ಯಾಂಕ್, 9 ಚಿನ್ನದ ಪದಕ ಹಾಗೂ ಎರಡು ನಗದು ಬಹುಮಾನವನ್ನು ಭಾನುವಾರ ನಡೆದ ಘಟಿಕೋತ್ಸವ ಸಮಾರಂಭದಲ್ಲಿ ತೆಗೆದುಕೊಂಡ ಚಿಕ್ಕಮಗಳೂರಿನ ಆದಿ ಚುಂಚನಗಿರಿ ಎಂಜಿನಿಯರ್ ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ ಕೆ.ಆರ್. `ಪ್ರಜಾವಾಣಿ~ಗೆ ಹೇಳಿದರು.`ಓದಿನೊಂದಿಗೆ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಯಲ್ಲೂ ಆಸಕ್ತಿಯಿಂದ ಭಾಗವಹಿಸಬೇಕು. ಇದರಿಂದ ಸಮಗ್ರ ವ್ಯಕ್ತಿತ್ವ ವಿಕಸನವಾಗುತ್ತದೆ. ಆಗಲೇ ಅತ್ಯುತ್ತಮವಾದ ಸಾಧನೆ ಸಾಧ್ಯವಾಗುತ್ತದೆ~ ಎಂದರು.

`ನಾವು ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದವರು. ಆದರೆ ಬೆಳೆದದ್ದು ಚಿಕ್ಕಮಗಳೂರಿನಲ್ಲಿ. ಈಗ ಸದ್ಯ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಉನ್ನತ ವ್ಯಾಸಂಗವನ್ನು ವಿದೇಶದಲ್ಲಿ ಪೂರೈಸಿದರೂ, ಕರ್ನಾಟಕದಲ್ಲಿಯೇ ಸೇವೆ ಮಾಡುವ ಇಚ್ಛೆ ಹೊಂದಿದ್ದೇನೆ~ ಎಂದು ಅವರು ಹೇಳಿದರು.`ಬಹಳ ಸಂತಸವಾಗಿದೆ. ಪೋಷಕರ ಪ್ರೋತ್ಸಾಹವೇ ಸಾಧನೆಗೆ ಕಾರಣ. ತಂದೆ ರತ್ನಾಕರ ಭಟ್ಟ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಸಾಧನೆಯಲ್ಲಿ ಅವರ್ದ್ದದೂ ಬಹುದೊಡ್ಡ ಪಾಲಿದೆ~ ಎಂದು ಅವರು ಸಂತಸ ಹಂಚಿಕೊಂಡರು.`ರ‌್ಯಾಂಕ್ ನಿರೀಕ್ಷೆ ಇತ್ತು. ಆದರೆ ಇಷ್ಟೊಂದು ಚಿನ್ನದ ಪದಕಗಳನ್ನು ಪಡೆಯುತ್ತೇನೆ ಅಂದುಕೊಂಡಿರಲಿಲ್ಲ. ಈ ಕ್ಷಣಗಳನ್ನು ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ~ ಎಂದು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಏಳು ಚಿನ್ನದ ಪದಕ ಗಳಿಸಿದ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಗಾರ್ಗಿ ಗಂಗೂಲಿ ತಮ್ಮ ಅನುಭವವನ್ನು ಆನಂದಬಾಷ್ಪ ಸುರಿಸುತ್ತಾ ಹೇಳಿದರು.`ಮೂಲತಃ ಪಶ್ಚಿಮ ಬಂಗಾಳದವಳಾಗಿದ್ದೇನೆ. ಇದು ಅಧ್ಯಯನಕ್ಕಾಗಿ ನಾನು ಪಟ್ಟ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ. ಉನ್ನತ ಶಿಕ್ಷಣದ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದುಕೊಂಡಿದ್ದೇನೆ~ ಎಂದು ಅವರು ತಿಳಿಸಿದರು.`ಮಕ್ಕಳಿಗೆ ಇಂತಹದೇ ಕೋರ್ಸ್ ಮಾಡು ಎಂದು ಒತ್ತಾಯಿಸಬಾರದು. ಅವರು ಇಷ್ಟ ಪಟ್ಟಿದ್ದನ್ನು ಓದಿಸಬೇಕು. ನನ್ನ ಆಯ್ಕೆಯ ಕೋರ್ಸ್ ಆಯ್ದುಕೊಳ್ಳಲು ಬಿಟ್ಟಿದ್ದೇ ನನ್ನ ಯಶಸ್ಸಿನ ಗುಟ್ಟು. ರ‌್ಯಾಂಕ್ ಗಳಿಸಬೇಕು ಎಂಬುದು ನಮ್ಮ ಮನೆಯವರ ಕನಸಾಗಿತ್ತು. ಅದು ಈಗ ನನಸಾಗಿದೆ~ ಎಂದು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಐದು ಚಿನ್ನದ ಪದಕ ಪಡೆದುಕೊಂಡ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಮೇಘಾ ಬಿ.ಆರ್ ಹೇಳಿದರು. `ಸಾಧನೆಯ ಹಾದಿಯನ್ನು ಮುಂದುವರಿಸಲಿದ್ದೇನೆ. ನ್ಯಾಶನಲ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ~ ಎಂದರು.ನಾಲ್ಕು ಚಿನ್ನದ ಪದಕ ಪಡೆದುಕೊಂಡಿರುವ ಬೆಂಗಳೂರಿನ ಸಿಎಂಆರ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಪ್ರಗತಿ ಕುಲಕರ್ಣಿ ಮಾತನಾಡಿ, ಪೋಷಕರಿಗೆ ಪದಕಗಳನ್ನು ಅರ್ಪಿಸುತ್ತಿದ್ದೇನೆ. ಸಂತಸವಾಗಿದೆ. ಕಠಿಣ ಪರಿಶ್ರಮದ ಫಲವಾಗಿ ಪದಕ ದಕ್ಕಿವೆ~ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.