ವಿಶ್ವ ಕನ್ನಡ ಸಮ್ಮೇಳನಕ್ಕೆ ಗಡಿಬಿಡಿ ಸಿದ್ಧತೆ

7

ವಿಶ್ವ ಕನ್ನಡ ಸಮ್ಮೇಳನಕ್ಕೆ ಗಡಿಬಿಡಿ ಸಿದ್ಧತೆ

Published:
Updated:
ವಿಶ್ವ ಕನ್ನಡ ಸಮ್ಮೇಳನಕ್ಕೆ ಗಡಿಬಿಡಿ ಸಿದ್ಧತೆ

ಬೆಳಗಾವಿ: ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನಕ್ಕೆ ಹತ್ತು ದಿನಗಳು ಮಾತ್ರ ಬಾಕಿ ಇವೆ. ಈ ಹಿಂದೆ ಪ್ರಕಟಿಸಿದಂತೆ ಫೆಬ್ರುವರಿ ಅಂತ್ಯಕ್ಕೆ ಏನಾಗಬೇಕಿತ್ತೋ ಆ ಎಲ್ಲ ಕಾರ್ಯಗಳು ನಿಗದಿಯಂತೆ ನಡೆದಿಲ್ಲ.ಮುಖ್ಯವಾಗಿ ಸಮ್ಮೇಳನವನ್ನು ಯಾರು ಉದ್ಘಾಟಿಸಬೇಕು ಎಂಬ ಗೊಂದಲ ಬಗೆಹರಿದಿಲ್ಲ. ಹೀಗಾಗಿ ಆಮಂತ್ರಣ ಪತ್ರಿಕೆಯೂ ಹೊರಬಂದಿಲ್ಲ. ಆಮಂತ್ರಣ ಪತ್ರಿಕೆಗೆ ಇನ್ನೂ ಮೂರ್ನಾಲ್ಕು ದಿನ ತಡವಾಗಬಹುದು ಎನ್ನಲಾಗುತ್ತಿದೆ.ಈ ಮಧ್ಯೆ ಬೆಳಗಾವಿ ನಗರದ ಅಕ್ರಮ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಲು ಸ್ಥಳೀಯ ಆಡಳಿತ ಮುಂದಾಗಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ಡಬ್ಬಾ ಅಂಗಡಿ ಮಾಲೀಕರ ಹಿತರಕ್ಷಣಾ ಸಮಿತಿ ಜತೆಗೆ ಎಂಇಎಸ್ ಮುಖಂಡರು ಪರೋಕ್ಷವಾಗಿ ಕೈ ಜೋಡಿಸಿದ್ದಾರೆ. ಈ ಮೊದಲು ಸುಮ್ಮನಿದ್ದ ಸ್ಥಳೀಯ ಶಾಸಕರೊಬ್ಬರು ಅವರ ಪರವಾಗಿ ನಿಂತಿದ್ದಾರೆ.ಈ ನಡುವೆ ‘ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಬೆಳಗಾವಿ ಬಂದ್ ಆಚರಿಸಲಾಗುತ್ತದೆ’ ಎಂಬ ಬೆದರಿಕೆಯನ್ನೂ ಒಡ್ಡಲಾಗಿದೆ. ಹೀಗಾಗಿ ಡಬ್ಬಾ ಅಂಗಡಿ ಮಾಲೀಕರ ಪರವಾಗಿ ‘ರಾಜಕೀಯ’ ಮಾಡುತ್ತಿರುವವರನ್ನು ಸಮಾಧಾನಗೊಳಿಸಬೇಕಾದ ಹೊಸ ಜವಾಬ್ದಾರಿ ಸಮ್ಮೇಳನ ಸಮಿತಿಯ ಮೇಲೆ ಬಿದ್ದಿದೆ. ಡಬ್ಬಾ ಅಂಗಡಿ ಮಾಲೀಕರ ಜತೆಗೆ ನಿರಂತರ ಸಭೆಗಳೂ ನಡೆಯುತ್ತಿವೆ.ಇಂತಹ ಹೆಚ್ಚುವರಿ ಗೊಂದಲಗಳ ಮಧ್ಯೆ ಸಮ್ಮೇಳನದ ಸಿದ್ಧತೆಗಳನ್ನು ಅವಧಿಯೊಳಗೆ ಹೇಗೆ ಮುಗಿಸಬೇಕು? ಗಡಿಬಿಡಿಯೂ ಹೆಚ್ಚಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಮುಖ್ಯವೇದಿಕೆಯ ನಿರ್ಮಾಣ ನಡೆಯುತ್ತಿದೆ.ಅದರ ಪ್ಲಾಟ್‌ಫಾರಂ ಮಾತ್ರ ಮುಗಿದಿದ್ದು, ಮುಂದಿನ ದಿನಗಳಲ್ಲಿ ವಿನ್ಯಾಸ, ಕ್ರೀಡಾಂಗಣದ ಸಮತಟ್ಟು ಮೊದಲಾದ ಕಾರ್ಯಗಳು ನಡೆಯಬೇಕಿದೆ. ಅದೇ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವೂ ಚಾಲ್ತಿಯಲ್ಲಿದ್ದು, ಹೆಚ್ಚುವರಿ ಸಮಸ್ಯೆಗಳನ್ನು ಹುಟ್ಟುಹಾಕಿದೆ.ಈ ನಡುವೆ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಗೊಳಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ರಸ್ತೆಗಳನ್ನು ಅಗಲಗೊಳಿಸುವುದು, ಡಾಂಬರೀಕರಣ ನಡೆಯುತ್ತಿದೆ. ಕೆಲ ಕಡೆಗಳಲ್ಲಿ ಹೊಸ ರಸ್ತೆ ನಿರ್ಮಾಣವೂ ಆರಂಭಗೊಂಡಿದೆ. ಜತೆಗೆ ಅಲ್ಲಲ್ಲಿ ಹಳೆಯ ರಸ್ತೆ ವಿಭಜಕಗಳನ್ನು ಒಡೆದುಹಾಕಿ ಹೊಸ ವಿಭಜಕಗಳನ್ನೂ ನಿರ್ಮಿಸುವ ಕಾಮಗಾರಿ ಆಶ್ಚರ್ಯ ಹುಟ್ಟಿಸಿದೆ.ನಗರದಾದ್ಯಂತ ವಿಶ್ವ ಕನ್ನಡ ಸಮ್ಮೇಳನದ ಬ್ಯಾನರ್‌ಗಳನ್ನು ಕಟ್ಟಲಾಗುತ್ತಿದೆ. ಸಮ್ಮೇಳನದ ಮೆರುಗು ಹೆಚ್ಚಿಸುವ ಉದ್ದೇಶದಿಂದ ಬೆಳಗಾವಿ ನಗರದ ಪ್ರಮುಖ ರಸ್ತೆಗಳ ಇಕ್ಕೆಲಗಳ ಗೋಡೆ ಮೇಲೆ ಈ ಭಾಗದ ವೈಶಿಷ್ಟ್ಯ, ಪ್ರಕೃತಿ ಸೌಂದರ್ಯ, ಐತಿಹಾಸಿಕ ತಾಣಗಳು, ಆಟೋಟಗಳ ಕುರಿತು ದೊಡ್ಡ, ದೊಡ್ಡ ಚಿತ್ರಗಳನ್ನು ಬರೆಯುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಸುಮಾರು 90ಸಾವಿರ ಚದರ ಅಡಿ ಗೋಡೆಗಳ ಮೇಲೆ ಅಂತಹ ಚಿತ್ರಗಳನ್ನು ಬರೆಯುವ ಯೋಜನೆ ಇದಾಗಿದೆ. ಆದರೆ ಈ ತನಕ ಶೇ 20ರಷ್ಟು ಮಾತ್ರ ಕಾರ್ಯ ಮುಗಿದಿದ್ದು, ಸಮ್ಮೇಳನದ ಒಳಗೆ ಉದ್ದೇಶಿತ ಯೋಜನೆ ಪೂರ್ಣಗೊಳ್ಳಲಿದೆಯೇ? ಸಂದೇಹ ಶುರುವಾಗಿದೆ.ಈ ಎಲ್ಲ ಗಡಿಬಿಡಿಯ ‘ಲಾಭ’ ಮಾಡಿಕೊಳ್ಳಲು ಗುತ್ತಿಗೆದಾರರು, ವಿವಿಧ ಕುಶಲಕರ್ಮಿಗಳು ಮುಂದಾಗಿದ್ದಾರೆ. ನಿಗದಿತ ಅವಧಿಯೊಳಗೆ ಕೆಲಸ ಮುಗಿಸಬೇಕಿದ್ದರೆ ಹೆಚ್ಚುವರಿ ಹಣ ನೀಡಬೇಕು ಎಂಬ ಹೊಸ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ.ಜತೆಗೆ ಬೆಳಗಾವಿ, ಬೈಲಹೊಂಗಲ, ಖಾನಾಪುರ ಭಾಗದ ಸರ್ಕಾರಿ ಪ್ರೌಢ ಶಾಲೆಗಳ ಒಟ್ಟು 34 ಚಿತ್ರಕಲಾ ಶಿಕ್ಷಕರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳ ಲಾಗುತ್ತದೆ.ಅವರಿಗೆಲ್ಲ ಅಗತ್ಯ ಪರಿಕರಗಳನ್ನು ಸಮ್ಮೇಳನ ಸಮಿತಿಯ ವತಿಯಿಂದ ಒದಗಿಸಲಾಗುತ್ತಿದೆ. ಆದರೆ ಅವರೆಲ್ಲ ‘ಸರ್ಕಾರಿ’ ಶಿಕ್ಷಕರಾಗಿರುವ ಕಾರಣಕ್ಕೆ ಅಲ್ಲೂ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದೆ.ಅತಿಥಿಗಳಿಗೆ ವಸತಿ ಸೌಕರ್ಯ ಉದ್ದೇಶದಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ಶೌಚಾಲಯಗಳ ನಿರ್ಮಾಣವೂ ಗಡಿಬಿಡಿಯಲ್ಲಿ ನಡೆಯುತ್ತಿದೆ. ಈ ಎಲ್ಲ ‘ತುರ್ತು’ ಕಾಮಗಾರಿಗಳ ಗುಣಮಟ್ಟದ ಬಗ್ಗೆಯೂ ಮಾತನಾಡಿಕೊಳ್ಳುವಂತಾಗಿದೆ.ಈ ಗಡಿಬಿಡಿ, ಗೊಂದಲಗಳ ಕುರಿತು ಸಮ್ಮೇಳನ ಸಮಿತಿಯ ಅಧ್ಯಕ್ಷ ಸಚಿವ ಉಮೇಶ ಕತ್ತಿ ಅವರನ್ನು ಸಂಪರ್ಕಿಸಿದರೆ ‘ಸಡಗರದಲ್ಲಿ ಗಡಿಬಿಡಿ ಸಾಮಾನ್ಯ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry