ವಿಶ್ವ ಕನ್ನಡ ಸಮ್ಮೇಳನ ವೇದಿಕೆಯಲ್ಲಿ ಪಟ್ಟದಕಲ್ಲು ವಾಸ್ತುಶಿಲ್ಪದ ವೈಭವ

7

ವಿಶ್ವ ಕನ್ನಡ ಸಮ್ಮೇಳನ ವೇದಿಕೆಯಲ್ಲಿ ಪಟ್ಟದಕಲ್ಲು ವಾಸ್ತುಶಿಲ್ಪದ ವೈಭವ

Published:
Updated:

ಬೆಳಗಾವಿ: ನಾಡನ್ನು ಆಳಿದ ವಿವಿಧ ರಾಜರ ಕಾಲದ ವಾಸ್ತುಶಿಲ್ಪಗಳ ಹಿರಿಮೆ, ಗರಿಮೆಯನ್ನು ವಿಶ್ವ ಕನ್ನಡ ಸಮ್ಮೇಳನದ ಮುಖ್ಯ ವೇದಿಕೆ ಬಿಂಬಿಸಲಿದೆ. ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಾಣಗೊಳ್ಳಲಿರುವ 120 ಅಡಿ ಅಗಲದ ಬೃಹತ್ ವೇದಿಕೆಯಲ್ಲಿ ವಾಸ್ತುಶಿಲ್ಪದ ತೊಟ್ಟಿಲು ಎಂದೇ ಖ್ಯಾತವಾಗಿರುವ ಪಟ್ಟದಕಲ್ಲು ವಾಸ್ತುಶಿಲ್ಪ ಮೂಡಿ ಬರಲಿದೆ. ವೇದಿಕೆಯ ಎರಡೂ ಬದಿಯಲ್ಲಿ ಬೆಳಗಾವಿಯ ಕಮಲ ಬಸದಿ ಕಾಣಿಸಿಕೊಳ್ಳಲಿದೆ.ವೇದಿಕೆಯ ತಳಗಟ್ಟು ರಾಷ್ಟ್ರಕೂಟ, ವಿಜಯನಗರ ಹಾಗೂ ಹೊಯ್ಸಳರ ಕಾಲದ ವಿವಿಧ ಶಿಲ್ಪಗಳಿಂದ ಕೂಡಿರಲಿದೆ. ಹತ್ತು ಅಡಿ ಎತ್ತರದ ವೀರರಾಣಿ ಚೆನ್ನಮ್ಮಳ ಮೂರ್ತಿ, ಇನ್ನೊಂದು ಬದಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಗೊಳ್ಳಲಿವೆ.ವೇದಿಕೆ ಮೇಲ್ಭಾಗದಲ್ಲಿ ರಾಜ್ಯವನ್ನು ಆಳಿದ ರಾಜರ ಲಾಂಛನಗಳನ್ನು ಹಾಕಲಾಗುತ್ತದೆ. ಎರಡು ಗೋಪುರಗಳು ಬರಲಿದ್ದು, ನಾಡಿನ ವಿವಿಧ ಧಾರ್ಮಿಕತೆ ಬಿಂಬಿಸುವ ಚಿತ್ರಣಗಳು ಬರಲಿವೆ ಎಂದು ವಿನ್ಯಾಸಕಾರ ಶಶಿಧರ ಅಡಪ ‘ಪ್ರಜಾವಾಣಿ’ಗೆ ತಿಳಿಸಿದರು.‘ಮುಖ್ಯ ವೇದಿಕೆಯ ಎಡ ಮತ್ತು ಬಲಭಾಗಗಳಲ್ಲಿ ಬೇಲೂರು ಚೆನ್ನಕೇಶವ ದೇವಾಲಯದ ಕಂಬಗಳು ಬರಲಿದ್ದು, ಎರಡು ಬದಿಗೆ ತಲಾ 20 ಆನೆಗಳ ಸಾಲು ಬರಲಿದೆ. ಏಷ್ಯಾದಲ್ಲಿಯೇ ಹೆಚ್ಚು ಆನೆಗಳನ್ನು ರಾಜ್ಯ ಹೊಂದಿದ್ದು ಅದಕ್ಕೆ ಕಾರಣವಾಗಿದೆ, ಪ್ರಾಣಿಗಳ ರಕ್ಷಣೆಯ ಸಂದೇಶ ಸಾರುವುದು ಇನ್ನೊಂದು ಕಾರಣವಾಗಿದೆ’ ಎನ್ನುತ್ತಾರೆ ಅಡಪ.‘ಕ್ರೀಡಾಂಗಣದ ಸುತ್ತಲು ದಕ್ಷಿಣ ಕನ್ನಡದಲ್ಲಿ ಬಳಸುವ 150 ‘ಭೂಕರೆ’ ಗಳನ್ನು ಹಾಕಲಾಗುತ್ತಿದೆ. ಬಟ್ಟೆಗಳಿಂದ ಇವುಗಳನ್ನು ಮಾಡಲಾಗುತ್ತಿದ್ದು, ಒಳಗೆ ವಿದ್ಯುದ್ದೀಪ ಇರುತ್ತದೆ. ನಾಲ್ಕು ದ್ವಾರಗಳನ್ನು ನಿರ್ಮಿಸಲಾಗುತ್ತಿದ್ದು, ಅವು ವಿವಿಧ ವಾಸ್ತುಶಿಲ್ಪಗಳನ್ನು ಒಳಗೊಂಡಿರಲಿವೆ’ ಎಂದು ಅವರು ಹೇಳಿದರು.ಪುಸ್ತಕ ಪ್ರದರ್ಶನದ ಪ್ರವೇಶ ದ್ವಾರವು ಪುಸ್ತಕ ರೂಪದಲ್ಲಿಯೇ ತಯಾರಿಸುತ್ತಿರುವುದು ವಿಶೇಷವಾಗಿದೆ. ತೆರೆದುಕೊಂಡಿರುವ ಪುಸ್ತಕ ರೂಪದಲ್ಲಿ ಅದು ಇರಲಿದೆ. ಮೆರವಣಿಗೆ ಸಾಗುವ ರಸ್ತೆಯಲ್ಲಿ ನಾಡಿನ ಹಿರಿಯ ಸಾಹಿತಿಗಳ ಚಿತ್ರ ಹೊಂದಿರುವ ವಿಭಿನ್ನ ಡಿಸೈನ್‌ಗಳ ಕಟೌಟ್‌ಗಳನ್ನು ನಿಲ್ಲಿಸಲಾಗುವುದು. ಮುಂದಿನ ಭಾಗದಲ್ಲಿ ಆನೆ ಇರಲಿದೆ. ಸ್ವಾಗತ ಕಮಾನುಗಳು ಎಲ್ಲ ಕಡೆ ವಿಭಿನ್ನವಾಗಿ ಮೂಡಿ ಬರಲಿವೆ.ವಿವಿಧೆಡೆ ಹಾಕಲಿರುವ ಇನ್ನುಳಿದ ವೇದಿಕೆಗಳು ವಾಸ್ತುಶಿಲ್ಪ, ನಾಡಿನ ಹಿರಿಮೆಯನ್ನು ಬಿಂಬಿಸಲಿವೆ.  ಬೆಳಗಾವಿಯ ವಿನ್ಯಾಸಕಾರ ಸುರೇಶ ಭಾಗನವರ ನಮ್ಮ ಜತೆಗೆ ಕೈಜೋಡಿಸಿದ್ದರಿಂದ ಅವು ಮತ್ತಷ್ಟು ಚೆನ್ನಾಗಿ ಮೂಡಿ ಬಂದಿವೆ’ ಎಂದು ಅಡಪ ಹೇಳಿದರು.ಈಗಾಗಲೇ ಎಲ್ಲ ವೇದಿಕೆಗಳಿಗೆ ಒಪ್ಪಿಗೆ ದೊರೆತಿದ್ದು, ಶೀಘ್ರದಲ್ಲಿಯೇ ನಿರ್ಮಾಣ ಕಾರ್ಯ ಆರಂಭಿಸಲಾಗುವುದು. ವೇದಿಕೆ ನಿರ್ಮಾಣ ಸಮ್ಮೇಳನಕ್ಕೆ ಎರಡು ದಿನ ಮುಂಚೆಯೇ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry