ವಿಶ್ವ ಚಾಂಪಿಯನ್‌ಷಿಪ್‌ಗೆ 8 ವರ್ಷದ ಅನಘಾ

ಮೈಸೂರು: ನಂಜನಗೂಡು ತಾಲ್ಲೂಕಿನ ಕುಗ್ರಾಮ ಕಳಲೆಯ ಎಂಟು ವರ್ಷದ ಕೆ.ಜಿ.ಆರ್.ಅನಘಾ ರಷ್ಯಾದ ಜಾರ್ಜಿಯಾದಲ್ಲಿ ನಡೆಯಲಿರುವ ವಿಶ್ವ ಕೆಡೆಟ್ ಚೆಸ್ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿದ್ದಾಳೆ.
ವಿಶ್ವ ಚೆಸ್ ಫೆಡರೇಷನ್ ಆಯೋಜಿಸುವ ವಿವಿಧ ವಯೋಮಿತಿಯ ಈ ಚಾಂಪಿಯನ್‌ಷಿಪ್ ಅಕ್ಟೋಬರ್ 18ರಿಂದ 31ರವರೆಗೆ ನಡೆಯಲಿದೆ. 8 ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಅನಘಾ ಸ್ಪರ್ಧಿಸುತ್ತಿದ್ದಾಳೆ.
ಬಾಲಕಿಯ ತಂದೆ ಕೆ.ಎಂ.ಗೋಪಿನಾಥ್ ಖಾಸಗಿ ಶಾಲೆಯಲ್ಲಿ ಗಣಿತದ ಉಪಧ್ಯಾಯರು. ಇವರು ಸುತ್ತಮುತ್ತಲ ಹಳ್ಳಿಗಳ ಮಕ್ಕಳಿಗೆ 15 ವರ್ಷಗಳಿಂದ ಉಚಿತವಾಗಿ ಚೆಸ್ ತರಬೇತಿ ನೀಡುತ್ತಿದ್ದಾರೆ. 15ಕ್ಕೂ ಹೆಚ್ಚು ಮಂದಿ ಮಕ್ಕಳು ರಾಜ್ಯಮಟ್ಟದ ವಿವಿಧ ಟೂರ್ನಿಗಳಲ್ಲಿ ಆಡಿದ್ದಾರೆ. ನಿತ್ಯ ತರಬೇತಿ ವೀಕ್ಷಿಸುತ್ತಿದ್ದ ಅನಘಾ ಕೂಡ ಚೆಸ್ ಆಡಲು ಶುರು ಮಾಡಿದಳು.
ಐದನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡು ಗಮನ ಸೆಳೆದಿರುವ ಈ ಬಾಲಕಿ, ರಾಜ್ಯಮಟ್ಟದ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿದ್ದಾಳೆ. ಗೋವಾದಲ್ಲಿ ನಡೆದ ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದಾಳೆ. ಮಂಗೋಲಿಯಾದಲ್ಲಿ ಈಚೆಗೆ ನಡೆದ ಏಷ್ಯನ್ ಯೂತ್ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಿದ್ದಳು.
ಚೆನ್ನೈನಲ್ಲಿ ನಡೆದ 7 ವರ್ಷದೊಳಗಿನವರ ರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಅನಘಾ ಚಾಂಪಿಯನ್ ಆಗಿದ್ದಳು. ವಿವಿಧ ರಾಜ್ಯಗಳ ನೂರು ಬಾಲಕಿಯರು ಪಾಲ್ಗೊಂಡಿದ್ದ ಟೂರ್ನಿಯಲ್ಲಿ 11 ಪಂದ್ಯ ಆಡಿ 9ರಲ್ಲಿ ಗೆಲುವು ಸಾಧಿಸಿದ್ದಳು. ಇದೊಂದು ದಾಖಲೆಯ ಸಾಧನೆ.
ಆಚಾರ್ಯ ಗುರುಕುಲ ವಿದ್ಯಾಪೀಠ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿರುವ ಈ ಬಾಲಕಿ ಗ್ರ್ಯಾಂಡ್‌ಮಾಸ್ಟರ್ ಆಗುವ ಕನಸು ಹೊಂದಿದ್ದಾಳೆ.
‘ನನಗೆ ಚೆಸ್ ಆಟವೆಂದ್ರೆ ತುಂಬಾ ಇಷ್ಟ. ಪದಕ ಗೆದ್ದಾಗ ಖುಷಿಯಾಗುತ್ತೆ. ದಿನ 2–3 ಗಂಟೆ ಅಭ್ಯಾಸ ನಡೆಸುತ್ತೇನೆ. ಕಂಪ್ಯೂಟರ್‌ನಲ್ಲೂ ಆಡುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದಳು. ‘ಚೆಸ್ ನಮಗೆ ವಂಶಪಾರಂಪರ್ಯವಾಗಿ ಬಂದಿದೆ. ನನ್ನ ತಾತನ ತಾತ ಚೆಸ್ ಆಡುತ್ತಿದ್ದರು. ಚೆಸ್ ಆಡಲು ಅವರನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಆಹ್ವಾನಿಸುತ್ತಿದ್ದರಂತೆ. ಈಗ ನನ್ನ ಮಗಳು ಚೆಸ್‌ನಲ್ಲಿ ಪರಿಣತಿ ಸಾಧಿಸಿದ್ದಾಳೆ’ ಎಂದು ತಂದೆ ಗೋಪಿನಾಥ್ ತಿಳಿಸಿದರು.
ವಿಶ್ವ ಚಾಂಪಿಯನ್‌ಷಿಪ್‌ಗೆ ಅನಘಾ ಜೊತೆ ತಂದೆಯೂ ತೆರಳಲಿದ್ದಾರೆ. ಅನಘಾ ಅವರ ವೆಚ್ಚವನ್ನು ಅಖಿಲ ಭಾರತ ಚೆಸ್ ಫೆಡರೇಷನ್ ಭರಿಸುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.