ಗುರುವಾರ , ಫೆಬ್ರವರಿ 25, 2021
29 °C

ವಿಶ್ವ ಟ್ವೆಂಟಿ–20 ಟೂರ್ನಿ ನಂತರ ಕೋಚ್ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಟ್ವೆಂಟಿ–20 ಟೂರ್ನಿ ನಂತರ ಕೋಚ್ ನೇಮಕ

ನವದೆಹಲಿ (ಪಿಟಿಐ): ವಿಶ್ವ ಟ್ವೆಂಟಿ–20 ಟೂರ್ನಿಯ ನಂತರ ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಪೂರ್ಣಾವಧಿ ಕೋಚ್  ನೇಮಕ ಮಾಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ತಿಳಿಸಿದ್ದಾರೆ.ಸೋಮವಾರ ಇಲ್ಲಿ ಆಯೋಜಿಸಲಾಗಿದ್ದ  ಐಸಿಸಿ ಪ್ರಚಾರ ಕಾರ್ಯಕ್ರಮದ ಸಂದರ್ಭದಲ್ಲಿ ಅವರು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು.

‘ಸಚಿನ್ ತೆಂಡೂಲ್ಕರ್, ವಿ.ವಿ.ಎಸ್. ಲಕ್ಷ್ಮಣ್ ಮತ್ತು ಸೌರವ್ ಗಂಗೂಲಿ ಅವರು ಇರುವ ಸಲಹಾ ಸಮಿತಿಯು ಅಭಿಪ್ರಾಯವನ್ನು ಸಲ್ಲಿಸಲಿದೆ. ನಂತರ ನಡೆಯುವ ಸಭೆಯಲ್ಲಿ ಕೋಚ್ ನೇಮಕ ಮಾಡುವ ಸಾಧ್ಯತೆ ಇದೆ’ ಎಂದರು.‘ಸುದೀರ್ಘ ಅವಧಿಯಿಂದ ತಂಡಕ್ಕೆ ಕೋಚ್ ನೇಮಕಕ್ಕೆ ಆಗ್ರಹ ಇದೆ. ಅದಕ್ಕಾಗಿ ಚಿಂತನೆ ಕೂಡ ನಡೆದಿದೆ. ವಿಶ್ವ ಟ್ವೆಂಟಿ–20 ಸನಿಹದಲ್ಲಿರುವುದರಿಂದ ಈಗಲೇ ಹೊಸ ಕೋಚ್ ನೇಮಕ ಮಾಡುವುದು ಅಷ್ಟೊಂದು ಸೂಕ್ತವಲ್ಲ.  ಟೂರ್ನಿ ಮುಗಿಯುವವರೆಗೂ ರವಿಶಾಸ್ತ್ರಿ ಅವರೇ ತಂಡದ ನಿರ್ದೇಶಕರಾಗಿ ಮುಂದುವರಿಯುವರು’ ಎಂದು ಠಾಕೂರ್ ಸ್ಪಷ್ಟಪಡಿಸಿದರು.ಹೋದ ವರ್ಷ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಡಂಕೆನ್ ಫ್ಲೆಚರ್‌ ಕೋಚ್ ಸ್ಥಾನದಿಂದ ನಿರ್ಗಮಿಸಿದ್ದರು. ಅದರ ನಂತರ ಹೊಸ ಕೋಚ್ ನೇಮಕವಾಗಿಲ್ಲ.ಆಸ್ಟ್ರೇಲಿಯಾದ ಏಕದಿನ ಸರಣಿಯಲ್ಲಿ ಭಾರತ ತಂಡವು 3–0ಯಿಂದ ಸೋಲನುಭವಿಸಿದೆ.  ಮಹೇಂದ್ರಸಿಂಗ್ ದೋನಿ ನಾಯಕತ್ವ ಕಳೆದುಕೊಳ್ಳುವರೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದರು. ‘ಮಹೇಂದ್ರಸಿಂಗ್ ದೋನಿ ಅವರು ಭಾರತ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. 2007 ಮತ್ತು 2011ರ ವಿಶ್ವಕಪ್ ಗೆದ್ದಿದ್ದು ಅವರ ನಾಯಕತ್ವದಲ್ಲಿಯೇ. ಕಳೆದ ಎಂಟು ವರ್ಷಗಳಿಂದ ಅವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದೀಗ ಒಂದು ಸೋಲಿನ ಕಾರಣದಿಂದ ಅವರನ್ನು ಟೀಕಿಸುವುದು ಸರಿಯಲ್ಲ’ ಎಂದು ಠಾಕೂರ್ ಹೇಳಿದರು.‘ಸರಣಿ ಸೋಲಿನ ಕುರಿತು ತಂಡದ ಆಡಳಿತ ಮತ್ತು ಆಯ್ಕೆ ಸಮಿತಿಯ ಸದಸ್ಯರು ಚರ್ಚೆ ನಡೆಸುತ್ತಿದ್ದಾರೆ. ಸೋಲಿಗೆ ಕಾರಣಗಳನ್ನು ಪರಿಶೀಲಿಸುತ್ತಿದ್ದಾರೆ. ಟಿ20 ವಿಶ್ವಕಪ್ ಮತ್ತು ಟಿ20 ಏಷ್ಯಾ ಕಪ್ ಟೂರ್ನಿಗಳಿಗೂ ಮುನ್ನ ಲೋಪಗಳನ್ನು ಸರಿಪಡಿಸಲಾಗು ವುದು’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.