ಶನಿವಾರ, ಜೂನ್ 19, 2021
26 °C

ವಿಶ್ವ ದೇಹದಾನ ದಿನ ಆಚರಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರದ ಕೆಎಲ್‌ಇ ಆಸ್ಪತ್ರೆಯಲ್ಲಿ ತಮ್ಮ ತಂದೆಯ ದೇಹ ಛೇದಿಸಿದ ಐತಿಹಾಸಿಕ ದಿನವಾದ ನವೆಂಬರ್ 13, (2010) ವನ್ನು  `ವಿಶ್ವ ದೇಹದಾನ ದಿನ~ ವನ್ನಾಗಿ ಆಚರಿಸುವ ಮೂಲಕ ದೇಹದಾನದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿ ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಹಾಂತೇಶ ರಾಮಣ್ಣ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.



ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಮ್ ನಬಿ ಆಜಾದ್ ಅವರಿಗೆ ಮನವಿ ಸಲ್ಲಿಸಿದ ಡಾ. ಮಹಾಂತೇಶ ರಾಮಣ್ಣವರ, `ಆರೋಗ್ಯ ರಕ್ಷಣೆಯಲ್ಲಿ ವೈದ್ಯರು ಪ್ರಮುಖ ಪಾತ್ರ ವಹಿಸುತ್ತಾರೆ.



ವೈದ್ಯರು ಪ್ರಾವೀಣ್ಯತೆ ಪಡೆದುಕೊಳ್ಳಲು ಪ್ರಾಯೋಗಿಕವಾಗಿ ಅಧ್ಯಯನ ನಡೆಸಲು ಮಾನವನ ದೇಹದ ಅಂಗಾಂಗಗಳ ಬಗ್ಗೆ ತಿಳಿದುಕೊಳ್ಳಬೇಕು. ಇದಕ್ಕಾಗಿ ಮೃತ ದೇಹಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗತ್ಯವಿದೆ~ ಎಂದು ತಿಳಿಸಿದ್ದಾರೆ.



`ದೇಹದಾನದ ಬಗ್ಗೆ ಅರಿವು ಮೂಡಿಸಲು ಆಯುರ್ವೇದ ತಜ್ಞರಾಗಿದ್ದ ನನ್ನ ತಂದೆ ಡಾ. ಬಿ.ಎಸ್. ರಾಮಣ್ಣವರ ಅವರು ಬಿ.ಎಂ. ಕಂಕಣವಾಡಿ ಆಯುರ್ವೇದ ಮಹಾವಿದ್ಯಾಲಯಕ್ಕೆ ದೇಹ ದಾನ ಮಾಡಿ, ಮಗನಾದ ನನ್ನ ಕೈಯಿಂದಲೇ ಶವಚ್ಛೇದನ ಮಾಡಿಸಿಕೊಂಡಿದ್ದರು. ಈ ಐತಿಹಾಸಿಕ ಘಟನೆ ನಡೆದ ನವೆಂಬರ್ 13 ಅನ್ನು `ವಿಶ್ವ ದೇಹದಾನ ದಿನಾಚರಣೆ~ ಎಂದು ಆಚರಿಸಬೇಕು” ಎಂದು ಒತ್ತಾಯಿಸಿದರು.



ಈ ಸಂದರ್ಭದಲ್ಲಿ ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಅಧ್ಯಕ್ಷ ಶಿವಾನಂದ ಕೌಜಲಗಿ, ಸಂಸದ ಸುರೇಶ ಅಂಗಡಿ, ಡಾ. ಶ್ರೀನಿವಾಸ ಪ್ರಸಾದ, ಲಕ್ಷ್ಮಿ ಹೆಬ್ಬಾಳಕರ ಮತ್ತಿತರರು ಹಾಜರಿದ್ದರು.



ವಿದ್ಯಾರ್ಥಿಗಳ ಬೀಳ್ಕೊಡುಗೆ



ಬೆಳಗಾವಿ: `ಎಸ್ಸೆಸ್ಸೆಲ್ಸಿ ಶಿಕ್ಷಣ ಮುಗಿಸಿ ಕಾಲೇಜಿನ ಮೆಟ್ಟಿಲು ಹತ್ತಲಿರುವ ವಿದ್ಯಾರ್ಥಿಗಳಿಗೆ ನಿಜವಾದ ಹೊರಜಗತ್ತಿನ ಪರಿಚಯವಾಗಲಿದೆ~ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಹೇಳಿದರು.

ಕರ್ನಾಟಕ ಕಾನೂನು ಸಂಸ್ಥೆಯ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.



`ವಿದ್ಯಾರ್ಥಿಗಳು ಹೊರಜಗತ್ತಿನಲ್ಲಿ ಶಿಸ್ತು ಪ್ರಜ್ಞೆಯನ್ನು ರೂಢಿಸಿಕೊಂಡು ಜವಾಬ್ದಾರಿಯುತವಾಗಿ ವರ್ತಿಸಿ ಒಳ್ಳೆಯ ನಾಗರೀಕರಾಗಿ ರೂಪುಗೊಳ್ಳಬೇಕು. ಉತ್ತಮ ನಾಗರೀಕರೇ ದೇಶದ ಆಸ್ತಿ~ ಎಂದರು.ಪ್ರಾಚಾರ್ಯೆ ಸ್ವಾತಿ ಆಚಾರ್, `ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ನಿರ್ಧರಿಸಿಕೊಂಡು, ಅದನ್ನು ಸಾಧಿಸುವ ನಿಟ್ಟಿನಲ್ಲಿ ಮುನ್ನಡೆಯಬೇಕು~ ಎಂದರು.



ತ್ವರಿತಗತಿ ನ್ಯಾಯಾಲಯದ ಅಧಿಕಾರಿ ಗಣೇಶ ಕುರವತ್ತಿ ಮಾತನಾಡಿದರು. ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ ಕುಲಕರ್ಣಿ ವಹಿಸಿದ್ದರು.ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. 10ನೇ ತರಗತಿ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.