ಮಂಗಳವಾರ, ಅಕ್ಟೋಬರ್ 15, 2019
29 °C

ವಿಶ್ವ ಪರಂಪರೆ ಪಟ್ಟಿ ಮುಂದುವರಿದ ವಿವಾದ

Published:
Updated:

ಬೆಂಗಳೂರು: ರಾಜ್ಯದ ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರಿಸುವ ವಿಷಯದಲ್ಲಿ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಅರಣ್ಯ ಮತ್ತು ಪರಿಸರ ಇಲಾಖೆ ನಡುವಿನ ಹಗ್ಗ ಜಗ್ಗಾಟ ಮುಂದುವರಿದಿದೆ. ಈ ನಡುವೆಯೇ ರಾಜ್ಯವನ್ನು ಕತ್ತಲೆಯಲ್ಲಿಟ್ಟು ಮುಂದಿನ ಯುನೆಸ್ಕೊ ಅಧಿವೇಶನದಲ್ಲಿ ಈ ಸಂಬಂಧ ಪ್ರಸ್ತಾವ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಅನುಮಾನ ಕರ್ನಾಟಕದಿಂದ ವ್ಯಕ್ತವಾಗಿದೆ.ಪಶ್ಚಿಮ ಘಟ್ಟಗಳು ಸೇರಿದಂತೆ ರಾಜ್ಯದ ಹತ್ತು ತಾಣಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಪ್ರಸ್ತಾವ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯದ್ದು. ಇದೇ ರೀತಿ ಕೇರಳದ 19, ತಮಿಳುನಾಡಿನ ಆರು ಮತ್ತು ಮಹಾರಾಷ್ಟ್ರದ ನಾಲ್ಕು ತಾಣಗಳನ್ನೂ ಈ ಪಟ್ಟಿಗೆ ಸೇರಿಸುವ ಪ್ರಯತ್ನದಲ್ಲಿದೆ.ಪ್ರಸಕ್ತ ವರ್ಷದ ಜೂನ್ 25ರಿಂದ ಜುಲೈ 6ರವರೆಗೆ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಯುನೆಸ್ಕೊದ ಸಮ್ಮೇಳನ ನಡೆಯುತ್ತಿದೆ. ಅಲ್ಲಿ ವಿಶ್ವ ಪರಂಪರೆ ತಾಣಗಳ ಪಟ್ಟಿ ಪರಿಷ್ಕರಿಸುವ ಸಂಬಂಧ ಚರ್ಚೆ ನಡೆಯಲಿದೆ.

 

ದೇಶದ 39 ತಾಣಗಳನ್ನೂ ಈ ಪಟ್ಟಿಯಲ್ಲಿ ಸೇರಿಸಿಕೊಳ್ಳುವ ವಿಷಯ ಚರ್ಚೆಗೆ ಬರಬೇಕಾದರೆ ಇನ್ನು 20 ದಿನಗಳೊಳಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಪ್ರಸ್ತಾವ ಕಳುಹಿಸಬೇಕಾಗುತ್ತದೆ.ರಾಜ್ಯದ ಅನುಮಾನ: ರಾಜ್ಯ ಸರ್ಕಾರದ ಮೌನವನ್ನೇ ಸಮ್ಮತಿ ಎಂಬುದಾಗಿ ಅರ್ಥೈಸಿಕೊಂಡಿರುವ ಕೇಂದ್ರ ಸರ್ಕಾರ, ಪಶ್ಚಿಮ ಘಟ್ಟಗಳೂ ಸೇರಿದಂತೆ ರಾಜ್ಯದ 10 ತಾಣಗಳನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವ ಸಂಬಂಧ ಪ್ರಸ್ತಾವ ಕಳುಹಿಸಲು ಮುಂದಾಗಿದೆ ಎಂಬ ಅನುಮಾನ ರಾಜ್ಯ ಸರ್ಕಾರದ ಕಡೆಯಿಂದ ವ್ಯಕ್ತವಾಗಿದೆ.

Post Comments (+)