ವಿಶ್ವ ಪರಂಪರೆ ಪಟ್ಟಿ ವಿರೋಧಕ್ಕೆ ಅರ್ಥವಿಲ್ಲ

7

ವಿಶ್ವ ಪರಂಪರೆ ಪಟ್ಟಿ ವಿರೋಧಕ್ಕೆ ಅರ್ಥವಿಲ್ಲ

Published:
Updated:

ಫ್ರಾನ್ಸ್‌ನ ಪಿಯರಿ ಅವರನ್ನು ಮದುವೆಯಾಗಿರುವ ವಸುಂಧರಾ ಕವಲಿ ಮೂಲತಃ ಧಾರವಾಡದವರು. ಹಂಪಿ, ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಬಗೆಗೆ ಅವರು ಸಂಶೋಧನೆ ಕೈಗೊಂಡಿದ್ದಾರೆ. ಧಾರವಾಡದಲ್ಲಿ ಇತ್ತೀಚೆಗೆ ನಡೆದ `ಕಲ್ಯಾಣದ ಚಾಲುಕ್ಯರು ಮತ್ತು ಅವರ ಕೊಡುಗೆ~ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬಂದಿದ್ದ ಅವರು ಹಂಚಿಕೊಂಡ ಕೆಲ ಸಂಗತಿಗಳು ಇಲ್ಲಿವೆ.*ನಿಮ್ಮ ಸಾಹಿತ್ಯ ಕೃಷಿಯ ಬಗ್ಗೆ ತಿಳಿಸಿ

1963ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮಗ್ರ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಪಿಎಚ್.ಡಿ ಮಾಡಲೆಂದು ಪ್ಯಾರಿಸ್‌ಗೆ ತೆರಳಿದೆ. ನನ್ನ ಪ್ರೌಢ ಪ್ರಬಂಧದ ಹೆಸರು `ಫಸ್ಟ್ ಟು ಕಿಂಗ್ಸ್ ಆಫ್ ವಿಜಯನಗರ~ ಎಂಬುದು. ಈ ಪಿಎಚ್.ಡಿ ಪ್ರಬಂಧಕ್ಕೆ ಮಾರ್ಗದರ್ಶನ ಮಾಡಿದವರು ನನ್ನ ಮಾವನವರಾದ ಜೀನ್ ಫಿಲಿಯೊಝಾಟ್.ಅಂದಿನಿಂದಲೂ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರದ ಬಗ್ಗೆ ಅಧ್ಯಯನ ಶುರು ಮಾಡಿದೆ. ಒಟ್ಟು 25ಕ್ಕೂ ಅಧಿಕ ಗ್ರಂಥಗಳನ್ನು ಬರೆದಿದ್ದೇನೆ. ಅದರಲ್ಲಿ ಕೆಲವು ಅನುವಾದಗಳೂ ಸೇರಿವೆ. 1960ರ ದಶಕದಲ್ಲಿ ಪ್ರವರ್ಧಮಾನದಲ್ಲಿದ್ದ ಫ್ರೆಂಚ್ ಲೇಖಕ ಆಂದ್ರೆ ಗೈಡ್ ಎಂಬುವವರ `ಸೇಫನಿ ಪಾಸ್ತುರಾಲ್~ ಎಂಬ ಕೃತಿಯನ್ನು `ಪ್ರಕೃತಿ ಗೀತ~ ಎಂಬ ಹೆಸರಿನಲ್ಲಿ ಹಾಗೂ `ಫೋರ್ತ್ ಎಟ್ರಾಯ್ಟ~ ಎಂಬ ಕೃತಿಯನ್ನು `ದಿಡ್ಡಿ ಬಾಗಿಲು~ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದೇನೆ.

 

`ಕಾಳಾಮುಖ ಟೆಂಪಲ್ಸ್ ಆಫ್ ಕರ್ನಾಟಕ~, ಪ್ರಭುಶಂಕರರ 101 ವಚನಗಳ ಶಬ್ದಶಃ ಅನುವಾದ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯ ಆಯ್ದ ಕೆಲ ಭಾಗಗಳನ್ನು ಕ್ರಮವಾಗಿ ಫ್ರೆಂಚ್ ಹಾಗೂ ಇಂಗ್ಲಿಷ್‌ಗೆ ಅನುವಾದಿಸಿದ್ದೇನೆ.

*ಪ್ಯಾರಿಸ್‌ನಲ್ಲಿ ಏನಾದರೂ ಚಟುವಟಿಕೆ ಕೈಗೊಂಡಿದ್ದೀರಾ?

ಪ್ಯಾರಿಸ್‌ನಲ್ಲಿ ಚಟುವಟಿಕೆ ಮಾಡಬೇಕು ಎಂಬ ಉದ್ದೇಶದಿಂದಲೇ `ಭಾರತ ಸಂಸ್ಕೃತಿ ಸಂಗಮ~ ಎಂಬ ಸಂಸ್ಥೆ ಕಟ್ಟಿಕೊಂಡು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ. ಪ್ಯಾರಿಸ್‌ನಲ್ಲಿ ಕೇವಲ ನಾಲ್ಕೈದು ಕನ್ನಡಿಗರ ಕುಟುಂಬಗಳಿವೆ. ಉಳಿದಂತೆ ತಮಿಳು, ಗುಜರಾತಿ, ಕೇರಳ ರಾಜ್ಯದವರೂ ಅಲ್ಲಿ ನೆಲೆಸಿದ್ದಾರೆ.ಅವರನ್ನೆಲ್ಲ ಕೂಡಿಸಿ ಡಾ. ಗಂಗೂಬಾಯಿ ಹಾನಗಲ್, ಸಹೋದರ ಜಯಂತ್ ಕವಲಿ ಅವರ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದೆವು. ಅಲ್ಲಿನ ಇಕೊಮಸ್ ಎಂಬ ಸಭಾಂಗಣದಲ್ಲಿ ಹಂಪಿಯ ವೈಭವವನ್ನು ಬಿಂಬಿಸುವ ಛಾಯಾಚಿತ್ರಗಳ ಪ್ರದರ್ಶನವನ್ನೂ ಆಯೋಜಿಸಿದ್ದೆವು. ಇದನ್ನು ಗುರುತಿಸಿದ ವಿಶ್ವಸಂಸ್ಥೆಯ ಯುನೆಸ್ಕೊದವರು ಹಂಪಿ ಹಾಗೂ ಆನೆಂದಿಯ ಕೆಲ ಭಾಗಗಳ ಸಂರಕ್ಷಣೆಗೆ ಮುಂದಾದರು.

*ವಿಶ್ವ ಪರಂಪರೆ ಪಟ್ಟಿಯಲ್ಲಿ ರಾಜ್ಯದ ಪಶ್ಚಿಮಘಟ್ಟಗಳನ್ನು ಸೇರಿಸಲು ಕೆಲವರು ವಿರೋಧಿಸುತ್ತಿದ್ದಾರಲ್ಲ, ಸರಿಯೇ?

ರಾಜ್ಯದ ಪಾರಂಪರಿಕ ತಾಣಗಳನ್ನು ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಗೆ ಸೇರಿಸುವುದರಿಂದ ಅಂಥ ಆರ್ಥಿಕ ಪ್ರಯೋಜನವಿಲ್ಲವಾದರೂ ಅದೊಂದು ಹೆಮ್ಮೆಯ ಗರಿಮೆ ಮೂಡಿಸುತ್ತದೆ. ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಯನ್ನು ವಿರೋಧಿಸುತ್ತಿರುವುದು ಮೂರ್ಖತನದ ಕ್ರಮ. ಫ್ರಾನ್ಸ್‌ನ ಜನ ತಮ್ಮ ಪ್ರತಿಯೊಂದು ಸ್ಮಾರಕವೂ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಎಂದು ಹಂಬಲಿಸುತ್ತಾರೆ. ಆದರೆ ಆ ಆಸಕ್ತಿ ನಮ್ಮಲ್ಲಿ ಕಾಣುವುದಿಲ್ಲ.

*ನೀವು ವಿದೇಶಿ ವ್ಯಕ್ತಿಯನ್ನು ಮದುವೆಯಾಗಿದ್ದೀರಿ. ನಿಮ್ಮ ಮನೆಯಲ್ಲಿ ವಿರೋಧ ಬರಲಿಲ್ಲವೇ?

ನನ್ನ ಮತ್ತು ಪಿಯರಿ ಮದುವೆಗೆ ನಮ್ಮ ಎರಡೂ ಕುಟುಂಬದವರು ವಿರೋಧಿಸಲಿಲ್ಲ. ಇದು ದೈವಾನುಗ್ರಹವೇ ಸರಿ. ಒಬ್ಬ ಯೂರೋಪಿಯನ್‌ನನ್ನು ಮದುವೆಯಾಗುವುದೇ ಎಂದು ನನಗೇ ಕೊಂಚ ಇರುಸು ಮುರುಸಿತ್ತು. ಆದರೆ ಅವರು ನನ್ನ ಪಿಎಚ್.ಡಿ ಮಾರ್ಗದರ್ಶಕರಾದ ಜೀನ್ ಅವರ ಪುತ್ರ.ಅಂದರೆ ಗುರುಪುತ್ರರೇ ಆಗಿದ್ದರಿಂದ ಹಾಗೂ ಮನೆಯಲ್ಲಿ ಮದುವೆಗೆ ಒಪ್ಪಿಗೆ ದೊರೆತಿದ್ದರಿಂದ ಮದುವೆ ಆದೆ. ಭಾರತದಲ್ಲಿ ಶೈವಾಗಮಗಳ ಬಗ್ಗೆ ಅತ್ಯಂತ ಶಾಸ್ತ್ರೀಯವಾಗಿ ಅಧ್ಯಯನ ನಡೆಸಿದ ಜೀನ್ ಅವರು ಪುದುಚೇರಿಯಲ್ಲಿ ಆರಂಭವಾದ `ಫ್ರೆಂಚ್ ಇನ್‌ಸ್ಟಿಟ್ಯೂಟ್ ಆಫ್ ಇಂಡೋಲಜಿ~ ಸಂಸ್ಥೆಯ ಸ್ಥಾಪಕ ನಿರ್ದೇಶಕರು.

 

ಸ್ವತಃ ಕಣ್ಣಿನ ವೈದ್ಯರಾಗಿದ್ದ ಅವರು ಶೈವಾಗಮಗಳ ಬಗ್ಗೆ ಭಾರತೀಯರ ಕಣ್ಣನ್ನು ತೆರೆಸಿದ ಮಹಾನುಭಾವರು. ತಾವೇ ಆಸಕ್ತಿ ವಹಿಸಿ ಎನ್.ಆರ್. ಭಟ್ ಎಂಬ ಸಂಶೋಧಕರನ್ನು ಗೊತ್ತು ಮಾಡಿ ಅವರಿಗೆ ಕಾರು ಹಾಗೂ ಚಾಲಕನನ್ನು ಒದಗಿಸಿ ಶೈವಾಗಮಗಳ ಬಗ್ಗೆ ಊರೂರಿಗೆ ಕಳುಹಿಸಿ ಮಾಹಿತಿ ಸಂಗ್ರಹಿಸಿದರು.

*ನಿಮ್ಮ ವಾಸ್ತವ್ಯ?

ಭಾರತ ಹಾಗೂ ಫ್ರಾನ್ಸ್‌ಗಳಲ್ಲಿ. ಆರು ತಿಂಗಳು ಭಾರತದಲ್ಲಿದ್ದರೆ, ಇನ್ನಾರು ತಿಂಗಳು ಫ್ರಾನ್ಸ್‌ನಲ್ಲಿ ಕಳೆಯುತ್ತೇವೆ. ಪ್ರಸ್ತುತ ಭಾರತೀಯ ಸರ್ವೇಕ್ಷಣಾ ಇಲಾಖೆ ಹಾಗೂ ಫ್ರಾನ್ಸ್‌ನ ಸಂಸ್ಥೆಯೊಂದರ ಸಹಯೋಗದಲ್ಲಿ ಐಹೊಳೆಯ ಬಗ್ಗೆ ಪತಿ ಹಾಗೂ ನಾನು ಸಂಶೋಧನೆ ನಡೆಸಿದ್ದೇವೆ. ಪಟ್ಟದಕಲ್ಲಿನ ಬಗೆಗಿನ ಅಧ್ಯಯನ ಈಗಷ್ಟೇ ಪೂರ್ಣಗೊಂಡಿದೆ. ಐಹೊಳೆಯ ಬಗೆಗೆ ಸಂಶೋಧನೆ ಕೈಗೆತ್ತಿಕೊಂಡಿದ್ದೇವೆ.

*ನಿಮ್ಮ ಕುಟುಂಬದ ಬಗ್ಗೆ ತಿಳಿಸಿ

ಮನೋನ್ಮನಿ ಹಾಗೂ ಭಾಮತಿ ಎಂಬ ಇಬ್ಬರು ಪುತ್ರಿಯರು ಸದ್ಯ ಫ್ರಾನ್ಸ್‌ನಲ್ಲೇ ವಾಸವಾಗಿದ್ದಾರೆ. ಪ್ಯಾರಿಸ್‌ನ ಪ್ರಾಚ್ಯಶಾಸ್ತ್ರ ಕೇಂದ್ರದಲ್ಲಿ ಹಿರಿಯ ಮಗಳು ಕೆಲಸ ಮಾಡುತ್ತಿದ್ದಾಳೆ. ಭಾಮತಿ ಗ್ರೀಕ್, ಲ್ಯಾಟಿನ್ ಭಾಷೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾಳೆ. ಇಬ್ಬರಿಗೂ ಭಾರತೀಯ ವರ ಸಿಗಲಿಲ್ಲ ಎಂಬ ಬೇಸರ ಕಾಡುತ್ತಿದೆ. ಇಬ್ಬರೂ ತಮ್ಮ ಬಾಳ ಸಂಗಾತಿಗಳನ್ನು ಫ್ರಾನ್ಸ್‌ನಲ್ಲೇ ಹುಡುಕಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry