ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತದ ಭರವಸೆ ಸೈನಾ ನೆಹ್ವಾಲ್

7

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತದ ಭರವಸೆ ಸೈನಾ ನೆಹ್ವಾಲ್

Published:
Updated:
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತದ ಭರವಸೆ ಸೈನಾ ನೆಹ್ವಾಲ್

ಲಂಡನ್ (ಪಿಟಿಐ): ಸೈನಾ ನೆಹ್ವಾಲ್ ಅವರು ಸೋಮವಾರ ಇಲ್ಲಿ ಆರಂಭ ವಾಗುವ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಭರವಸೆ ಎನಿಸಿದ್ದಾರೆ.ಸೈನಾ ಈ ಹಿಂದೆ ಎರಡು ಸಲ ಈ ಪ್ರತಿಷ್ಠಿತ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಈ ಬಾರಿ ಅವರು ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಅದು ನಿರೀಕ್ಷಿಸಿದಷ್ಟು ಸುಲಭವಲ್ಲ.ಹೈದರಾಬಾದ್‌ನ ಆಟಗಾರ್ತಿ ಸುಮಾರು ಒಂದು ತಿಂಗಳ ಬಿಡುವಿನ ಬಳಿಕ ಅಂಗಳಕ್ಕೆ ಇಳಿಯಲಿದ್ದಾರೆ. ಹಿಮ್ಮಡಿಯ ಗಾಯದಿಂದ ಬಳಲಿದ್ದ ಅವರು ಇದೀಗ ಪೂರ್ಣ ದೈಹಿಕ ಸಾಮರ್ಥ್ಯ ಹೊಂದಿದ್ದು, ಸವಾಲನ್ನು ಎದುರಿಸಲು ಸಜಾಗಿದ್ದಾರೆ.`ಈ ಟೂರ್ನಿಗಾಗಿ ಕಳೆದ ನಾಲ್ಕೈದು ತಿಂಗಳುಗಳಿಂದ ಸಿದ್ಧತೆ ನಡೆಸಿದ್ದೇನೆ. ನನ್ನ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿದೆ. ಆದರೆ ಲಂಡನ್‌ನ ಅಂಗಳಕ್ಕೆ ಬೇಗನೇ ಹೊಂದಿಕೊಳ್ಳುವುದು ಮುಖ್ಯ~ ಎಂದು ಸೈನಾ ಹೇಳಿದರು. ವಿಶ್ವದ ಆರನೇ ರ‌್ಯಾಂಕಿಂಗ್‌ನ ಆಟಗಾರ್ತಿಗೆ ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ `ಬೈ~ ಲಭಿಸಿದೆ.ಎರಡನೇ ಸುತ್ತಿನಲ್ಲಿ ಅವರಿಗೆ ಇಂಡೊನೇಷ್ಯದ ಅದ್ರಿಯಾಂತಿ ಫಿರ್ದಸರಿ ಎದುರಾಗುವ ಸಾಧ್ಯತೆಯಿದೆ. ಇದುವರೆಗಿನ ಪಂದ್ಯಗಳಲ್ಲಿ ಇವರಿಬ್ಬರು 2-2 ರಲ್ಲಿ ಸಮಬಲ ಹೊಂದಿದ್ದಾರೆ. ಇಲ್ಲಿ ಆರನೇ ಶ್ರೇಯಾಂಕ ಹೊಂದಿರುವ ಸೈನಾ ಪ್ರೀ ಕ್ವಾರ್ಟರ್ ಫೈನಲ್‌ನಲ್ಲಿ ಹಾಂಕಾಂಗ್‌ನ ಪ್ಯು ಯಿನ್ ಯಿಪ್ ಜೊತೆ ಪೈಪೋಟಿ ನಡೆಸುವ ಸಾಧ್ಯತೆಯೇ ಅಧಿಕ.ಭಾರತದ ಆಟಗಾರ್ತಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಯಶಸ್ವಿಯಾದರೆ ಅಲ್ಲಿ ಅಗ್ನಿಪರೀಕ್ಷೆ ಖಚಿತ. ಏಕೆಂದರೆ ವಿಶ್ವದ ಮೂರನೇ ರ‌್ಯಾಂಕ್‌ನ ಆಟಗಾರ್ತಿ ಚೀನಾ ವಾಂಗ್ ಕ್ಸಿನ್ ಎಂಟರಘಟ್ಟದಲ್ಲಿ ಸೈನಾ ಅವರಿಗೆ ಎದುರಾಗಬಹುದು. ಕ್ಸಿನ್ ಈ ಹಿಂದೆ ಮೂರು ಸಲ ಸೈನಾ ಅವರನ್ನು ಮಣಿಸಿದ್ದರು. ಆದರೆ ಮೇ ತಿಂಗಳಲ್ಲಿ ನಡೆದ ಸುಧಿರ್‌ಮನ್ ಕಪ್ ಟೂರ್ನಿಯಲ್ಲಿ ಸೈನಾ ಚೀನಾದ ಎದುರಾಳಿಯನ್ನು ಸೋಲಿಸಿದ್ದರು.ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪಿ. ಕಶ್ಯಪ್ ಮತ್ತು ಅಜಯ್ ಜಯರಾಮ್ ಭಾರತದ ಭರವಸೆ ಎನಿಸಿದ್ದಾರೆ. ಇದೇ ಮೊದಲ ಬಾರಿಗೆ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿರುವ ಜಯರಾಮ್ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಕೆನಿಚಿ ಟಾಗೊ ಅವರನ್ನು ಎದುರಿಸುವರು. 28 ನೇ ರ‌್ಯಾಂಕ್‌ನ ಆಟಗಾರ ಕಶ್ಯಪ್ ಜರ್ಮನಿಯ ಡೀಟೆರ್ ಡಾಮ್ಕೆ ವಿರುದ್ಧ ಪೈಪೋಟಿ ನಡೆಸುವರು.ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಮಲೇಷ್ಯದ ಎವಾ ಲೀ ಹಾಗೂ ಪೌಲಾ ಲಿನ್ ಒಬ್ನಾನಾ ಅವರ ಸವಾಲನ್ನು ಎದುರಿಸುವರು.ಮಿಶ್ರ ಡಬಲ್ಸ್ ವಿಭಾಗದಲ್ಲಿ ಜ್ವಾಲಾ ಮತ್ತು ವಿ. ದಿಜು ಅವರು ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ದಿಜು ಹಲವು ತಿಂಗಳ ಬಿಡುವಿನ ಬಳಿಕ ಕಣಕ್ಕಿಳಿಯಲಿದ್ದಾರೆ.ಈ ಜೋಡಿಗೆ ಮೊದಲ ಸುತ್ತಿನಲ್ಲಿ `ಬೈ~ ಲಭಿಸಿದೆ. ಪುರುಷರ ಡಬಲ್ಸ್ ವಿಭಾಗದಲ್ಲಿ ರೂಪೇಶ್ ಕುಮಾರ್- ಸನಾವೆ ಥಾಮಸ್ ಮತ್ತು ಪ್ರಣವ್ ಚೋಪ್ರಾ- ತರುಣ್ ಕೋನಾ ಅವರು ಪಾಲ್ಗೊಳ್ಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry