ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿ

7

ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿ

Published:
Updated:

ಕಾರವಾರ: ಶಿಕ್ಷಣ ಹಾಗೂ ಔದ್ಯಮಿಕ ಕ್ಷೇತ್ರದಲ್ಲಿ ಆಗುತ್ತಿರುವ ಕ್ರಾಂತಿ ಹಾಗೂ ಸ್ಪರ್ಧೆಯಿಂದಾಗಿ ಪ್ರತಿಯೊಬ್ಬರು ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಬೇಕಾಗಿದೆ. ಶಿಕ್ಷಣ ಹಾಗೂ ಸಾಮಾನ್ಯ ಜ್ಞಾನದ ತಿಳಿವಳಿಕೆಯಿಂದ ಈ ಹಂತವನ್ನು ತಲುಪಲು ಸಾಧ್ಯ ಎಂದು ಕೊಂಕಣಿ ಭಾಷಾ ಆನಿ ಸಂಸ್ಕೃತಿ ಪ್ರತಿಷ್ಠಾಪನದ ಗೌರವಾಧ್ಯಕ್ಷ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರ, ಕೊಂಕಣಿ ಭಾಷಾ ಆನಿ ಸಂಸ್ಕೃತಿ ಪ್ರತಿಷ್ಟಾನ ಹಾಗೂ ಅಖಿಲ ಕರ್ನಾಟಕ ಕೊಂಕಣ ಖಾರ್ವಿ ಮಹಾಜನಸಭಾ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲೆ ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಈಚೆಗೆ ನಡೆದ ಉತ್ತರಕನ್ನಡ, ಶಿವಮೊಗ್ಗ, ಉಡುಪಿ ಹಾಗೂ ದ.ಕ.ಜಿಲ್ಲೆಯ ಕೊಂಕಣಿ ಖಾರ್ವಿ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.ಆರ್ಥಿಕ ಸ್ಥಿತಿ ಹಾಗೂ ಶಿಕ್ಷಣ ಸಂಸ್ಥೆಯ ಕೊರತೆಯಿಂದಾಗಿ ದಶಕಗಳ ಹಿಂದೆ ಮಕ್ಕಳಿಗೆ ಶಿಕ್ಷಣ ನೀಡಲು ಅಸಾಧ್ಯವಾಗಿತ್ತು. ಈ ಹಂತದಲ್ಲಿ ಶಿಕ್ಷಣ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಕೇಂದ್ರ ರಾಜ್ಯ ಸರ್ಕಾರಗಳು ಹಾಗೂ ಕೆಲವು ಖಾಸಗಿ  ಸಂಸ್ಥೆಗಳು, ದಾನಿಗಳು ಶಿಕ್ಷಣಕ್ಕೆ  ಹೆಚ್ಚಿನ ಮಹತ್ವ ನೀಡುವ ಮೂಲಕ ಶಿಕ್ಷಣದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ಅಧ್ಯಕ್ಷತೆ  ವಹಿಸಿದ್ದ ಅಖಿಲ ಕರ್ನಾಟಕ ಕೊಂಕಣ ಖಾರ್ವಿ  ಮಹಾಜನ ಸಭಾದ ಅಧ್ಯಕ್ಷ ಕೆ.ಬಿ. ಖಾರ್ವಿ ಮಾತನಾಡಿ, ಕೊಂಕಣ ಖಾರ್ವಿ ಸಮಾಜದ ಅಭಿವೃದ್ದಿಗೆ  ಹೆಚ್ಚಿನ ಸಹಕಾರ ನೀಡಬೇಕು ಎಂದರು.ವಿಶ್ವಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಚೇರಮನ್ ರಾಮದಾಸ್ ಕಾಮತ್ ಮಾತನಾಡಿ , ಕೊಂಕಣಿ ಖಾರ್ವಿ ಸಮಾಜದ ಸುಮಾರು 3000 ಕುಟುಂಬಗಳಿಗೆ ವಿಮೆ ಭದ್ರತೆ ಒದಗಿಸಲಾಗಿದೆ. ವಿದ್ಯಾರ್ಥಿ ವೇತನ ಹೆಚ್ಚಿಸುವುದು, ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಂತಹ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಮಂಗಳೂರು ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಉದ್ಯಮಿ ಕಾಂತು ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಕೆ.ನಾಗ ಖಾರ್ವಿ, ವಿಶ್ವಕೊಂಖಣಿ ಕೇಂದ್ರದ ಕಾರ್ಯದರ್ಶಿ ವೆಂಕಟೇಶ ಎನ್.ಬಾಳಿಗಾ, ವಿದ್ಯಾರ್ಥಿ ನಿಧಿ ಕಾರ್ಯದರ್ಶಿ ಪ್ರದೀಪ ಜಿ.ಪೈ ಹಾಜರಿದ್ದರು.

ಮಹಾಜನ ಸಂಘದ ಉಪಾಧ್ಯಕ್ಷ ಮೋಹನ ಬಾನಾವಳಿಕರ್ ಸ್ವಾಗತಿಸಿದರು.ವಸಂತ ಖಾರ್ವಿ ಭಟ್ಕಳ ಪರಿಚಯಿಸಿದರು. ಮಾಲಿನಿ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಉಮಾನಾಥ ಗಂಗೊಳ್ಳಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry