`ವಿಶ್ವ ಸಿನಿಮಾ' ಹಬ್ಬದ ಇಣುಕು ನೋಟ

7

`ವಿಶ್ವ ಸಿನಿಮಾ' ಹಬ್ಬದ ಇಣುಕು ನೋಟ

Published:
Updated:
`ವಿಶ್ವ ಸಿನಿಮಾ' ಹಬ್ಬದ ಇಣುಕು ನೋಟ

ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸಂಘಟಿಸುವ `ಡಿಎಫ್‌ಎಫ್'ಗೆ (ಚಲನಚಿತ್ರೋತ್ಸವ ನಿರ್ದೇಶನಾಲಯ) ಕೊನೆಗೂ ಜ್ಞಾನೋದಯ ಆದಂತಿದೆ. ಹತ್ತು ದಿನಗಳ ಚಿತ್ರೋತ್ಸವಕ್ಕೆ ಬಾಲಿವುಡ್‌ನ ಜನಪ್ರಿಯ ನಟ-ನಟಿಯರನ್ನು ಆಮಂತ್ರಿಸಿ, ಅವರಿಗೆ ರತ್ನಗಂಬಳಿ ಹಾಸಿ ಸಂಭ್ರಮಿಸುವ ಮೂಲಕ ಭಾರತೀಯ ಸಿನಿಮಾಗಳೆಂದರೆ ಬಾಲಿವುಡ್ ಸಿನಿಮಾಗಳು ಎಂಬಂತೆ ಬಿಂಬಿಸುವ ಪ್ರಯತ್ನವನ್ನು `ಡಿಎಫ್‌ಎಫ್' ಈ ವರ್ಷ ಮಾಡಲಿಲ್ಲ! ಇದು 43ನೇ ಭಾರತದ ಅಂತರರಾಷ್ಟ್ರೀಯ ಚಿತ್ರೋತ್ಸವದ ಹೊಸ ಬೆಳವಣಿಗೆ.ಭಾರತೀಯ ಸಿನಿಮಾ ಎಂದರೆ ಬಾಲಿವುಡ್ ಚಿತ್ರಗಳಷ್ಟೇ ಅಲ್ಲ ಎನ್ನುವುದು ಕೊನೆಗೂ ಡಿಎಫ್‌ಎಫ್‌ಗೆ ಅರ್ಥವಾಗಿರಬಹುದೇ?

ಸಮಕಾಲೀನ ಬಾಲಿವುಡ್ ಸಿನಿಮಾಗಳು ದೇಶದ ಸಾಂಸ್ಕೃತಿಕ ವೈವಿಧ್ಯ ಮತ್ತು ಭಾರತೀಯ ಜೀವನಕ್ರಮವನ್ನು ಬಿಂಬಿಸುವುದಿಲ್ಲ. ಅವು ಮನರಂಜನೆಗೆ ಮೀಸಲು. ಸಿನಿಮಾಗಳ ಮೂಲಕ ಭಾರತವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಭಾರತೀಯ ಭಾಷೆಗಳ ಪರ್ಯಾಯ ಸಿನಿಮಾಗಳನ್ನೂ ನೋಡಬೇಕು ಎನ್ನುವ ವಾದವನ್ನು ತಳ್ಳಿಹಾಕಲಾಗದು. ಆದರೆ, 2004ರಿಂದಲೂ ಪಣಜಿ ಚಿತ್ರೋತ್ಸವದಲ್ಲಿ ಬಾಲಿವುಡ್ ನಟ, ನಟಿಯರಿಗೆ ವಿಶೇಷ ಮನ್ನಣೆ ನೀಡಿ ಪ್ರಾದೇಶಿಕ (ಮರಾಠಿ ಹೊರತುಪಡಿಸಿ) ಭಾಷೆಗಳ ಕಲಾವಿದರು ಮತ್ತು ತಂತ್ರಜ್ಞರನ್ನುಉಪೇಕ್ಷಿಸುವ ಪ್ರವೃತ್ತಿ ಇತ್ತು. ಇದರ ವಿರುದ್ಧ ಪ್ರತಿ ವರ್ಷ ಟೀಕೆಗಳು ಕೇಳಿ ಬರುತ್ತಿದ್ದವು. ಬಾಲಿವುಡ್ ತಾರೆಯರಿಗೆ ಮಾತ್ರ ವಿಶೇಷ ಮನ್ನಣೆ ಸಿಗುತ್ತದೆ ಎಂಬ ಕಾರಣಕ್ಕೋ ಏನೋ, ಅಪರೂಪಕ್ಕೆ ಚಿತ್ರೋತ್ಸವಕ್ಕೆ ಬರುತ್ತಿದ್ದ ದಕ್ಷಿಣ ಭಾರತದ ಕೆಲ ನಟ ನಟಿಯರೂ ಈ ಸಲ ಇತ್ತ ತಲೆಹಾಕಲಿಲ್ಲ. ಈ ವರ್ಷ ಪರ್ಯಾಯ ಸಿನಿಮಾಗಳ ನಿರ್ದೇಶಕರು ಮತ್ತು ತಂತ್ರಜ್ಞರು ಚರ್ಚೆ, ಸಂವಾದ ಇತ್ಯಾದಿಗಳಲ್ಲಿ ಭಾಗವಹಿಸಿ ಎಲ್ಲರ ಗಮನಸೆಳೆದರು.ವಿಶ್ವ ಸಿನಿಮಾಗಳನ್ನು ನೋಡುವಷ್ಟೇ ಆಸಕ್ತಿಯಿಂದ ಪ್ರತಿನಿಧಿಗಳು ಭಾರತೀಯ ಪನೋರಮಾ ವಿಭಾಗದ ಸಿನಿಮಾಗಳನ್ನೂ ನೋಡಿದ್ದು ವಿಶೇಷ. ಕನ್ನಡ, ಬ್ಯಾರಿ, ಪಂಜಾಬಿ, ಬೆಂಗಾಳಿ, ಮಲಯಾಳಂ, ಅಸ್ಸಾಮಿ, ಹಿಂದಿ, ಕೊಂಕಣಿ ಮತ್ತು ತಮಿಳು ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಸ್ಪರ್ಧೆಯಲ್ಲಿದ್ದ ಸಿನಿಮಾಗಳೂ ಸೇರಿದಂತೆ ವಿದೇಶಿ (ವಿಶ್ವ ಸಿನಿಮಾ) ಚಿತ್ರಗಳಲ್ಲಿ ವೈವಿಧ್ಯತೆ ಇತ್ತು. ಆದರೆ ನೆನಪಿನಲ್ಲಿ ಉಳಿಯುವಂತಹ ಚಿತ್ರಗಳ ಸಂಖ್ಯೆ ಹೆಚ್ಚಿರಲಿಲ್ಲ. ಸ್ಪರ್ಧೆಯಲ್ಲಿದ್ದ ಎರಡು ಭಾರತೀಯ ಸಿನಿಮಾಗಳ ಪೈಕಿ ಪಂಜಾಬಿ ಚಿತ್ರ (ಇನ್ನೊಂದು ಬೆಂಗಾಳಿ) `ಅನ್ಹೆ ಘೋರೆಯ್ ದಾ ದಾನ್' ಪ್ರತಿಷ್ಠಿತ ಸ್ವರ್ಣ ಮಯೂರ ಪ್ರಶಸ್ತಿ ಪಡೆಯುವ ಮೂಲಕ ಸಿನಿಮಾ `ಜಗತ್ತಿ'ನ ಗಮನ ಸೆಳೆಯಿತು.ಪನೋರಮಾ ವಿಭಾಗದಲ್ಲಿದ್ದ 20 ಸಿನಿಮಾಗಳ ಪೈಕಿ ಒಂದು ಹಿಂದಿ ಚಿತ್ರ (ಐ.ಡಿ.) ಇತ್ತು. ಪ್ರತಿ ವರ್ಷ ಈ ವಿಭಾಗದಲ್ಲಿ ವಿಜೃಂಭಿಸುವುದು ಪ್ರಾದೇಶಿಕ ಭಾಷೆಗಳ ಸಿನಿಮಾಗಳೇ. ಈ ವರ್ಷ ಒರಿಯಾ, ತೆಲುಗು, ರಾಜಸ್ತಾನಿ ಹಾಗೂ ಇತರ ಭಾಷೆಗಳ ಸಿನಿಮಾಗಳಿರಲಿಲ್ಲ. ಪರ್ಯಾಯ ಸಿನಿಮಾ ನಿರ್ದೇಶಕರ ಗಮನ ಜಾಗತೀಕರಣದ ನಂತರ ದೇಶದಲ್ಲಿ ಆಗಿರುವ ಬದಲಾವಣೆಗಳಿಗಿಂತ ಇನ್ನೂ ಸಂಕೀರ್ಣ ಸ್ಥಿತಿಯಲ್ಲಿಯೇ ಉಳಿದಿರುವ ನಮ್ಮ ಸಾಮಾಜಿಕ ವ್ಯವಸ್ಥೆಯತ್ತಲೇ ಇದೆ.

ಈ ಹಿನ್ನೆಲೆಯಲ್ಲಿಯೇ ಗಿರೀಶ್ ಕಾಸರವಳ್ಳಿ ಮತ್ತು ಅಡೂರು ಗೋಪಾಲಕೃಷ್ಣನ್ ಪತ್ರಕರ್ತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಪ್ರತಿಯೊಂದು ಭಾರತೀಯ ಭಾಷೆಗಳ ಪರ್ಯಾಯ ಚಿತ್ರವೂ ವಿಭಿನ್ನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ್ದು. ಈ ಹಿನ್ನೆಲೆಯಲ್ಲಿ ಪಣಜಿ ಚಿತ್ರೋತ್ಸವದಲ್ಲಿ ಎಲ್ಲಾ ಭಾರತೀಯ ಭಾಷೆಗಳ ಚಿತ್ರಗಳಿಗೂ ಪ್ರಾತಿನಿಧ್ಯ ಇರಬೇಕು. ಹಿಂದಿ ಮತ್ತಿತರ ಜನಪ್ರಿಯ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಕೊಡುವುದು ಸರಿಯಲ್ಲ. ಅವುಗಳ ಪ್ರದರ್ಶನಕ್ಕೆ ಬೇಕಾದಷ್ಟು ಅವಕಾಶಗಳಿವೆ.ಪನೋರಮಾ ಚಿತ್ರಗಳ ಪ್ರದರ್ಶನ ಉದ್ಘಾಟಿಸುತ್ತ ಹಿರಿಯ ನಟ ಓಂಪುರಿ ಅವರು ಬಾಲಿವುಡ್ ಸಿನಿಮಾಗಳನ್ನಷ್ಟೇ ಭಾರತೀಯ ಸಿನಿಮಾಗಳೆಂದು ಪರಿಗಣಿಸುವ ಪ್ರವೃತ್ತಿ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಿರಿಯ ನಿರ್ದೇಶಕ ಶ್ಯಾಮ್ ಬೆನಗಲ್ ಬಾಲಿವುಡ್ ಸಿನಿಮಾಗಳ ಅಬ್ಬರದಲ್ಲಿ ಅನೇಕ ಪ್ರಾದೇಶಿಕ ಸಿನಿಮಾಗಳು ಮತ್ತು ರ್ಯಾಯ ಸಿನಿಮಾಗಳು ಸೊರಗುತ್ತಿವೆ. ಅದಕ್ಕೆ ಅವಕಾಶ ಕೊಡಬಾರದು ಎಂಬ ಕಾಳಜಿ ವ್ಯಕ್ತಪಡಿಸಿದರಲ್ಲದೆ ಪರ್ಯಾಯ ಸಿನಿಮಾಗಳನ್ನು ಜನರಿಗೆ ತಲುಪಿಸಲು ಒಂದು ವ್ಯವಸ್ಥೆ ಇರಬೇಕು ಎಂದೂ ಒತ್ತಾಯಿಸಿದರು.ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ `ಸಿನಿಮಾಗಳನ್ನು ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗ'ವೆಂದು ಪರಿಗಣಿಸಲು ಸಾಧ್ಯವಾಗುವ ಕಾರ್ಯಕ್ರಮಗಳನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ರೂಪಿಸಲು ಸರ್ಕಾರ ಉದ್ದೇಶಿಸಿದೆ ಎಂದು ಹೇಳಿದರು. ಪನೋರಮಾ ಚಿತ್ರಗಳ ಪ್ರದರ್ಶನದ ಉದ್ಘಾಟನೆ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಉದಯಕುಮಾರ್ ವರ್ಮಾ ಅವರು ಸಿನಿಮಾ ಮತ್ತು ಡಾಕ್ಯುಮೆಂಟರಿ ಚಿತ್ರಗಳನ್ನು ನಿರ್ಮಿಸುವ ಯುವ ಪ್ರತಿಭಾವಂತರಿಗೆ 400 ಕೋಟಿ ರೂ ಆರ್ಥಿಕ ನೆರವು ನೀಡುವ ಉದ್ದೇಶ ಸರ್ಕಾರಕ್ಕೆ ಇದೆ ಎಂದರು. ಈ ನೆರವು ಎಲ್ಲ ಭಾರತೀಯ ಭಾಷೆಗಳ ಪ್ರತಿಭಾವಂತರಿಗೂ ಸಿಗುವಂತಾಗಬೇಕು.ಪರ್ಯಾಯ ಸಿನಿಮಾಗಳು ದೇಶದ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸಿದರೂ ಅವು ದೊಡ್ಡ ಮಟ್ಟದಲ್ಲಿ ಜನರ ಗಮನ ಸೆಳೆಯುತ್ತಿಲ್ಲ. ಸಿನಿಮಾಗಳ ಮುಖ್ಯ ಉದ್ದೇಶ ಕೇವಲ ಮನರಂಜನೆ ಎಂಬ ಧೋರಣೆ ಬದಲಾಗುವವರೆಗೆ ಪರಿಸ್ಥಿತಿ ಹೀಗೇ ಇರುತ್ತದೆ. ಪರ್ಯಾಯ ಚಿತ್ರಗಳನ್ನು ನೋಡುವ ಅಭಿರುಚಿ ಬೆಳೆಸುವ ಕೆಲಸ ನಡೆಯುತ್ತಿಲ್ಲ. ಪರ್ಯಾಯ ಸಿನಿಮಾಗಳ ನಿರ್ಮಾಣಕ್ಕೆ ಹೂಡಿದ ಹಣ ಹಿಂದಕ್ಕೆ ಬರುವ ಸಾಧ್ಯತೆ ಕಡಿಮೆ. ಸರ್ಕಾರಗಳು ನೀಡುವ ಪ್ರಶಸ್ತಿ ಮತ್ತು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಅವಕಾಶಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ಪರಿಸ್ಥಿತಿ ಇದೆ.

ಇದಕ್ಕೆ ಅಪವಾದ ಎನ್ನುವಂತಹ ಉದಾಹರಣೆಗಳಿವೆ. ಅಡೂರ್ ಗೋಪಾಲಕೃಷ್ಣನ್ ಅವರ ಎರಡನೇ ಚಿತ್ರ `ಕೋಡಿಯಾಟ್ಟಂ' ಕೇರಳದಲ್ಲಿ 145 ದಿನಗಳ ಪ್ರದರ್ಶನ ಕಂಡಿತ್ತು. ಕರ್ನಾಟಕದಲ್ಲಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ `ಭಾಗೀರತಿ' ನೂರು ದಿನಗಳ ಪ್ರದರ್ಶನ ಕಂಡಿದೆ. ಇವು ವಿರಳ ಉದಾಹರಣೆಗಳು. `ಈಗ ಪ್ರಶಸ್ತಿ ಪಡೆದ ಸಿನಿಮಾಗಳೆಂದರೆ ಜನ ಓಡಿಹೋಗುವ ಪರಿಸ್ಥಿತಿ ಕೇರಳದಲ್ಲಿದೆ' ಎಂದು ಅಡೂರು ಹೇಳಿದರು. ಬಹುತೇಕ ಪರ್ಯಾಯ ಚಿತ್ರಗಳು ಬಿಡುಗಡೆ ಆಗುವುದಿಲ್ಲ. ಹೀಗಾಗಿ ಪರ್ಯಾಯ ಚಿತ್ರಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಪ್ರತ್ಯೇಕ ಟಿವಿ ಚಾನಲೊಂದನ್ನು ಆರಂಭಿಸಬೇಕು ಎಂಬ ಒತ್ತಾಯ ಈ ವರ್ಷವೂ ಕೇಳಿಬಂತು. ಕೇಂದ್ರ ಸರ್ಕಾರ ಸಿನಿಮಾಗಳಿಗೆ ಆರ್ಥಿಕ ನೆರವು ನೀಡುವುದರ ಜತೆಗೆ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಬೇಕಿದೆ.ಪಣಜಿ ಚಿತ್ರೋತ್ಸವದಲ್ಲಿ 19 ಡಾಕ್ಯುಮೆಂಟರಿ ಚಿತ್ರಗಳು ಪ್ರದರ್ಶನವಾದವು. ಅವೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ಹಲವು ಮುಖಗಳನ್ನು ಬಿಂಬಿಸಿದವು. ಆದರೆ, ದೀರ್ಘ ಅವಧಿಯ ಡಾಕ್ಯುಮೆಂಟರಿಗಳು ಪ್ರತಿನಿಧಿಗಳ ತಾಳ್ಮೆ ಪರೀಕ್ಷಿಸಿದವು. ಉದ್ಘಾಟನಾ ಡಾಕ್ಯುಮೆಂಟರಿ ಚಿತ್ರ `ಸೆಲ್ಯುಲಾಯ್ಡ ಮ್ಯಾನ್' (ಪುಣೆಯ ಫಿಲ್ಮ್ ಆರ್ಕ್ವೈವ್‌ನ ರೂವಾರಿ ಕೆ.ಪಿ. ನಾಯರ್ ಅವರ ಪರಿಶ್ರಮ ಕುರಿತದ್ದು) 162 ನಿಮಿಷಗಳದ್ದು.

ಇದನ್ನು ಹೊರತುಪಡಿಸಿದರೆ 93 ನಿಮಿಷಗಳ `ಐ ವಾಸ್ ಬಾರ್ನ್ ಇನ್ ಡೆಲ್ಲಿ', 77 ನಿಮಿಷಗಳ `ಕಾಟನ್ ಫಾರ್ ಮೈ...', 70 ನಿಮಿಷಗಳ `ಅರಣ್ಯೆ ಕಂಡೊ', `ಹರಿ ಗಾಟ್ ಮ್ಯಾರಿಡ್', `ಕ್ವಾರ್ಟರ್ ನಂಬರ್ 4/11' ಇತ್ಯಾದಿ ಸಾಕ್ಷ್ಯಚಿತ್ರಗಳನ್ನು ಕಥಾಚಿತ್ರಗಳ ಮೊದಲು ನೋಡುವುದು ಪ್ರಯಾಸವೆನಿಸಿತು. ಇದಕ್ಕೆ ಅಪವಾದ 38 ನಿಮಿಷಗಳ `ಆಫ್ಟರ್‌ಗ್ಲೋ' (ಗುಜರಾತಿ/ ಇಂಗ್ಲಿಷ್) ಮತ್ತು `ಅಲ್ಲಾ ಈಸ್ ಗ್ರೇಟ್' (ಹಿಂದಿ/ಇಂಗ್ಲಿಷ್). ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಡಾಕ್ಯುಮೆಂಟರಿಗಳ ಪ್ರದರ್ಶನ ಅವಧಿಗೆ ಕಾಲಮಿತಿ ಕುರಿತು ಡಿಎಫ್‌ಎಫ್ ಚಿಂತಿಸಬೇಕು.

ಶತಮಾನೋತ್ಸವ ಸ್ಮರಣೆ

ಈ ವರ್ಷ ಭಾರತೀಯ ಸಿನಿಮಾದ ಶತಮಾನೋತ್ಸವ ವರ್ಷ. ಡಿಎಫ್‌ಎಫ್ ಚಿತ್ರೋತ್ಸವದ ಜತೆಗೆ ಶತಮಾನೋತ್ಸವ ವರ್ಷಾಚರಣೆಗೆ ನಾಂದಿಹಾಡಿತು. ದಾದಾಸಾಹೇಬ್ ಫಾಲ್ಕೆ ನಿರ್ದೇಶನದ ಮೂಕಿ ಚಿತ್ರ `ರಾಜಾ ಹರಿಶ್ಚಂದ್ರ' ಮತ್ತು ಶತಮಾನದ ಪ್ರಮುಖ ಮೈಲಿಗಳನ್ನು ಗುರುತಿಸುವ ಸಿನಿಮಾಗಳೆಂದು ಪರಿಗಣಿಸಿದ ವಿವಿಧ ಭಾಷೆಗಳ 26 (ಇವುಗಳಲ್ಲಿ ಮೃಣಾಲ್ ಸೆನ್, ಸೌಮಿತ್ರ ಚಟರ್ಜಿ, ಅಡೂರು, ಶ್ಯಾಂ ಬೆನಗಲ್, ಗಿರೀಶ್ ಕಾಸರವಳ್ಳಿ, ರಾಮಾನಾಯ್ಡು, ಕೆ. ಬಾಲಚಂದರ್ ಮತ್ತಿತರರ) ಚಿತ್ರಗಳು ಮತ್ತು ಅಷ್ಟೇ ಸಂಖ್ಯೆಯ ಡಾಕ್ಯುಮೆಂಟರಿಗಳು ಮತ್ತು ಆರು ನ್ಯೂಸ್ ರೀಲ್‌ಗಳು ಪ್ರದರ್ಶನಗೊಂಡವು.

ಅಲ್ಲದೆ ವಿವಿಧ ರಾಜ್ಯಗಳ ಫಿಲ್ಮ್ ಇನ್‌ಸ್ಟಿಟ್ಯೂಟ್ ವಿದ್ಯಾರ್ಥಿಗಳು ನಿರ್ಮಿಸಿದ ಕಿರುಚಿತ್ರಗಳಿದ್ದವು. ಒಟ್ಟಾರೆ 43ನೇ ಚಲನಚಿತ್ರೋತ್ಸವದಲ್ಲಿ ವೈವಿಧ್ಯತೆ ಇತ್ತು. ಚಿತ್ರೋತ್ಸವದಲ್ಲಿ ಭಾಗವಹಿಸಲು 10 ಸಾವಿರ ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂಬ `ಡಿಎಫ್‌ಎಫ್' ಹೇಳಿಕೊಂಡರೂ ಅಷ್ಟು ಜನರು ಕಂಡು ಬರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ದೇಶದ ಹಲವಾರು ರಾಜ್ಯಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತಿರುವುದು ಅದಕ್ಕೆ ಕಾರಣವಿರಬಹುದು. ಅದೇನೇ ಇರಲಿ ಪಣಜಿ ಚಿತ್ರೋತ್ಸವಕ್ಕೆ ವಿಶ್ವ ಮಾನ್ಯತೆ ಇದೆ. ಅದು ಸೊರಗಬಾರದು.

ಸಮಕಾಲೀನ ಜಗತ್ತಿನ ಕನ್ನಡಿ`ವಿಶ್ವ ಸಿನಿಮಾ' ವಿಭಾಗದಲ್ಲಿ ಪ್ರದರ್ಶನವಾದ ಚಿತ್ರಗಳಲ್ಲಿ ವೈವಿಧ್ಯತೆ ಇತ್ತು. ಆದರೆ ಪ್ರೇಕ್ಷಕರ ಮನಸ್ಸಿನಲ್ಲಿ ದಾಖಲಾಗಿ ಮತ್ತೆ ಮತ್ತೆ ಕಾಡುವಂತಹ ಸಿನಿಮಾಗಳ ಸಂಖ್ಯೆ ಕಡಿಮೆ. ಬಹುತೇಕ ಚಿತ್ರಗಳಲ್ಲಿ ಎದ್ದು ಕಂಡದ್ದು ಹೆಣ್ಣಿನ ಶೋಷಣೆ ಮತ್ತು ಮುಕ್ತ ಲೈಂಗಿಕತೆ. ಅದನ್ನು ಬಿಟ್ಟರೆ ಪಶ್ಚಿಮ ದೇಶಗಳತ್ತ ಮುಖ ಮಾಡಿರುವ ಹಲವಾರು ಸಣ್ಣ ಪುಟ್ಟ ದೇಶಗಳ ಜನರ ತಳಮಳಗಳು, ಆರ್ಥಿಕವಾಗಿ ಹಿಂದುಳಿದ ದೇಶಗಳ ಯುವಜನರ ಪ್ರಕ್ಷುಬ್ಧ ಮನಃಸ್ಥಿತಿ, ಹಿಂಸೆ, ರಕ್ತಪಾತ ಇತ್ಯಾದಿಗಳೇ ಈ ವರ್ಷದ ವಿಶ್ವ ಸಿನಿಮಾಗಳ ಕಥಾವಸ್ತು.

ರಷ್ಯ, ಜರ್ಮನಿ, ಪೋಲಂಡ್, ಶ್ರೀಲಂಕಾ ಇನ್ನಿತರ ದೇಶಗಳ ಸಿನಿಮಾ ನಿರ್ದೇಶಕರು ಇನ್ನೂ ಯುದ್ಧದ ಕರಾಳ ನೆನಪುಗಳಿಂದ ಹೊರಬಂದಿಲ್ಲ. ಒಟ್ಟಾರೆ 2012ನೇ ವರ್ಷದ ವಿಶ್ವ ಸಿನಿಮಾಗಳು ಸಮಕಾಲೀನ ಜಗತ್ತಿನ ಹಲವಾರು ಸಮಸ್ಯೆಗಳತ್ತ ಬೆಳಕು ಚೆಲ್ಲಿದವು.

ಆಧುನಿಕತೆಗೆ ತೆರೆದುಕೊಂಡಿರುವ ಟರ್ಕಿ ದೇಶದ ಸಾಮಾಜಿಕ ಬದುಕು ಮತ್ತು ಬದಲಾದ ರಾಜಕೀಯ ಪರಿಸ್ಥಿತಿ ಕುರಿತ ಆರು ಚಿತ್ರಗಳು ಚಿತ್ರೋತ್ಸವದ ವಿಶೇಷ ಪ್ಯಾಕೇಜ್. ಸಂಪ್ರದಾಯವನ್ನೂ ಬಿಡದೆ, ಆಧುನಿಕ ಜೀವನಶೈಲಿಯನ್ನು ರೂಢಿಸಿಕೊಳ್ಳಲೂ ಆಗದೆ ಸಂದಿಗ್ಧ ಸ್ಥಿತಿಯಲ್ಲಿರುವ ಕೆಲ ಮುಸ್ಲಿಂ ದೇಶಗಳು ಎದುರಿಸುತ್ತಿರುವ ಸಾಂಸ್ಕೃತಿಕ ತಳಮಳಗಳನ್ನು ಕಟ್ಟಿಕೊಡುವ ಚಿತ್ರಗಳಿದ್ದವು.

ಕೆಲವು ಸಿನಿಮಾಗಳಲ್ಲಿ ಬಿಡಿ ಘಟನೆಗಳೇ ಪ್ರಾಮುಖ್ಯತೆ ಪಡೆದುಕೊಂಡು ಸಿನಿಮಾ ಉದ್ದೇಶ ಗೌಣವಾಗಿತ್ತು. ಹಲವು ಚಿತ್ರಗಳಲ್ಲಿ ಕಥೆಗೆ ಸಂಬಂಧವೇ ಇಲ್ಲದ ಸಂಭೋಗದ ದೃಶ್ಯಗಳಿದ್ದವು. ಸೆರ್ಬಿಯಾ ದೇಶದ `ಕ್ಲಿಪ್' ಹೆಸರಿನ ಸಿನಿಮಾಕ್ಕೂ `ನೀಲಿ ಚಿತ್ರ'ಕ್ಕೂ ವ್ಯತ್ಯಾಸವೇ ಇರಲಿಲ್ಲ. ಈ ಚಿತ್ರವನ್ನು ಆಯ್ಕೆ ಮಾಡಿದ್ದಕ್ಕೆ ಕೆಲ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಿದರು.ಚಿತ್ರೋತ್ಸವದ ಉದ್ಘಾಟನಾ ಚಿತ್ರ ಆಂಗ್ ಲೀ ನಿರ್ದೇಶನದ `ಲೈಫ್ ಆಫ್ ಪಿಐ' (ತ್ರೀ ಡಿ) ಚಿತ್ರದಲ್ಲಿ ಅತಿಯಾದ ಗ್ರಾಫಿಕ್ ಬಳಕೆಯಿಂದಾಗಿ ರೋಚಕತೆಯೇ ಪ್ರಧಾನವಾಗಿತ್ತು. ಸಮಾರೋಪ ಚಿತ್ರ ಮೀರಾ ನಾಯರ್ ನಿರ್ದೇಶನದ `ರಿಲಕ್ಟಂಟ್ ಟು ದಿ ಫಂಡಮೆಂಟಲಿಸ್ಟ್' ಚಿತ್ರ ಭಾರತೀಯ ಸಿನಿಮಾ ಶತಮಾನೋತ್ಸವ ಪ್ರಶಸ್ತಿಗೆ ಭಾಜನವಾಯಿತು.ವಿಶ್ವ ಸಿನಿಮಾದ ಪ್ರಸಿದ್ಧ ನಿರ್ದೇಶಕರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪುರಸ್ಕೃತ ಡೆನ್ಮಾರ್ಕಿನ ನಿರ್ದೇಶಕಿ ಸೂಸನ್ ಬೇರ್ ನಿರ್ದೇಶನದ ಆರು ಚಿತ್ರಗಳು ಮತ್ತು ಮಾಜಿ ಟೆನಿಸ್ ಆಟಗಾರ ಹಾಗೂ ಹಾಲಿವುಡ್‌ನ ಪ್ರತಿಷ್ಠಿತ ನಿರ್ಮಾಪಕ ಅಶೋಕ್ ಅಮೃತರಾಜ್ ನಿರ್ಮಾಣದ ಮೂರು ಚಿತ್ರಗಳು ಮತ್ತು ದಕ್ಷಿಣ ಕೊರಿಯಾ ನಿರ್ದೇಶಕ ಕಿಮ್‌ಕಿ ಡುಕ್ ಅವರ ನಾಲ್ಕು ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry