ಶುಕ್ರವಾರ, ನವೆಂಬರ್ 22, 2019
22 °C
ಫಿಟ್‌ನೆಸ್‌ಗೆ ಮಹತ್ವ ನೀಡಬೇಕು: ಸರ್ದಾರ್

ವಿಶ್ವ ಹಾಕಿ ಲೀಗ್‌ಗೆ ಭಾರತದ ಸಿದ್ಧತೆ, ಬೆಂಗಳೂರಿನಲ್ಲಿ ತರಬೇತಿ

Published:
Updated:

ನವದೆಹಲಿ (ಪಿಟಿಐ): `ಫಿಟ್‌ನೆಸ್‌ಗೆ ಎಲ್ಲಾ ಆಟಗಾರರು ಮಹತ್ವ ನೀಡಬೇಕು. ಉತ್ತಮ ಫಿಟ್‌ನೆಸ್ ಕಾಯ್ದುಕೊಂಡರೆ ಮುಂಬರುವ ವಿಶ್ವ ಹಾಕಿ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯ' ಎಂದು ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ಹೇಳಿದ್ದಾರೆ.ಈ ಟೂರ್ನಿ ಜೂನ್ 13ರಿಂದ 23ರವರೆಗೆ ಹಾಲೆಂಡ್‌ನ ರೊಟೆರ್‌ಡಮ್‌ನಲ್ಲಿ ನಡೆಯಲಿದೆ. ಅದಕ್ಕಾಗಿ ಭಾರತ ತಂಡದ ಆಟಗಾರರ ಭಾರತ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ಬೆಂಗಳೂರು ಕೇಂದ್ರದಲ್ಲಿ ತರಬೇತಿ ನಿರತರಾಗಿದ್ದಾರೆ. ಎರಡು ತಿಂಗಳ ವಿಶ್ರಾಂತಿ ಬಳಿಕ ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಒಟ್ಟು 34 ಮಂದಿ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಮೊದಲ ಹಂತದ ಶಿಬಿರ ಏಪ್ರಿಲ್ 26ರವರೆಗೆ ಜರುಗಲಿದೆ. ಎರಡು ವಾರಗಳ ವಿಶ್ರಾಂತಿ ಬಳಿಕ ಮತ್ತೆ ಒಗ್ಗೂಡಲಿದ್ದಾರೆ.`ನಾವು ಹಿಂದಿನ ಕೆಲ ತಿಂಗಳು ಸತತ ಆಟವಾಡಿದ್ದೆವು. ಹಾಗಾಗಿ ಈ ವಿಶ್ರಾಂತಿ ಅಗತ್ಯವಾಗಿತ್ತು. ಹಾಕಿ ಇಂಡಿಯಾ ಲೀಗ್ ಟೂರ್ನಿ ಸುದೀರ್ಘವಾಗಿತ್ತು. ಅದಕ್ಕಾಗಿ ತುಂಬಾ ಪ್ರಯಾಣ ಮಾಡಬೇಕಾಗಿ ಬಂತು. ಆದರೆ ಈಗ ಹೊಸ ಸವಾಲು ಎದುರಿದೆ' ಎಂದು ಸರ್ದಾರ್ ನುಡಿದಿದ್ದಾರೆ.`ವಿಶ್ವ ಹಾಕಿ ಲೀಗ್‌ನಲ್ಲಿ ನಾವು ಹಾಲೆಂಡ್, ಆಸ್ಟ್ರೇಲಿಯಾ ಹಾಗೂ ಸ್ಪೇನ್‌ನಂತಹ ಬಲಿಷ್ಠ ತಂಡಗಳು ಎದುರು ಆಡಬೇಕಾಗಿದೆ.ಅವರ ವೇಗದ ಆಟಕ್ಕೆ ಹೊಂದಿಕೊಳ್ಳಲು ನಾವು ಫಿಟ್‌ನೆಸ್‌ಗೆ ಹೆಚ್ಚು ಮಹತ್ವ ನೀಡಬೇಕಾಗಿದೆ. ಜೊತೆಗೆ ತಾಂತ್ರಿಕ ವಿಭಾಗದಲ್ಲೂ ಸುಧಾರಣೆ ಕಾಣಬೇಕಾಗಿದೆ' ಎಂದು ವಿವರಿಸಿದ್ದಾರೆ.`ವಿಶ್ರಾಂತಿ ಅವಧಿಯಲ್ಲಿ ಸ್ಟಿಕ್ ಕೂಡ ಮುಟ್ಟಬಾರದು ಎಂದು ನಮ್ಮ ಫಿಟ್‌ನೆಸ್ ತರಬೇತುದಾರ ಜೇಸನ್ ಕೊನ್ರಾಥ್ ಹೇಳಿದ್ದರು. ಅದನ್ನು ನಾವು ಪಾಲಿಸಿದೆವು. ಈಗ ಶಿಬಿರದಲ್ಲಿ ದೈಹಿಕ ಕಸರತ್ತು ಆರಂಭಿಸಿದ್ದೇವೆ' ಎಂದರು.

ಪ್ರತಿಕ್ರಿಯಿಸಿ (+)