ಸೋಮವಾರ, ಮಾರ್ಚ್ 8, 2021
30 °C

ವಿಶ್ವ ಹಾಕಿ ಸರಣಿ: ಫೈನಲ್‌ಗೆ ಪಂಜಾಬ್ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಹಾಕಿ ಸರಣಿ: ಫೈನಲ್‌ಗೆ ಪಂಜಾಬ್ ತಂಡ

ಬೆಂಗಳೂರು: ಆರಂಭಿಕ ಮುನ್ನಡೆ ಸಾಧಿಸಿದರೂ ಕರ್ನಾಟಕ ಲಯನ್ಸ್ ತಂಡಕ್ಕೆ ಸೋಲು ತಪ್ಪಲಿಲ್ಲ. ಈ ಪರಿಣಾಮ ಚೊಚ್ಚಲ ವಿಶ್ವ ಹಾಕಿ ಸರಣಿಯಲ್ಲಿ ಫೈನಲ್ ಪ್ರವೇಶಿಸಬೇಕು ಎನ್ನುವ ಕನಸೂ ಕೈಗೂಡಲಿಲ್ಲ.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶೇರ್ ಎ ಪಂಜಾಬ್ ತಂಡ 4-1ಗೋಲುಗಳಿಂದ ಕರ್ನಾಟಕವನ್ನು ಮಣಿಸಿ ಫೈನಲ್‌ಗೆ ಹೆಜ್ಜೆ ಹಾಕಿತು.

ಕೊಡಗಿನ ಅರ್ಜುನ್ ಹಾಲಪ್ಪ ನೇತೃತ್ವದ ಕರ್ನಾಟಕ ತಂಡ ಆರಂಭದಲ್ಲಿ ಮುನ್ನಡೆ ಸಾಧಿಸಿ, ರಕ್ಷಣಾತ್ಮಕ ಆಟಕ್ಕೆ ಒಗ್ಗಿಕೊಂಡಿತ್ತು.  ಈ ತಂಡದ ನವೀನ್ ಕುಮಾರ್ 11ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಡಿಫೆಂಡರ್ ಇನೊಸೆಂಟ್ ಕುಲ್ಲು ನೀಡಿದ್ದ ಪಾಸ್ ಅನ್ನು ನವೀನ್ ಸುಲಭವಾಗಿ ಗುರಿ ಸೇರಿಸಿದರು. ಆತಿಥೇಯ ತಂಡದ ಖಾತೆ ಸೇರಿದ ಮೊದಲ ಹಾಗೂ ಕೊನೆಯ ಗೋಲು ಇದಾಯಿತು.

ಆರಂಭದಲ್ಲಿ ಗೋಲು ಗಳಿಸಲು ಪರದಾಡಿದ ಪಂಜಾಬ್ ನಂತರ ಚೇತರಿಕೆಯ ಪ್ರದರ್ಶನ ನೀಡಿತು. ಇದಕ್ಕೆ ಆಸ್ಟ್ರೇಲಿಯಾದ ಮ್ಯಾಥ್ಯೂ ಹಾಚಿಸ್  ನೆರವಾದರು. ಈ ಆಟಗಾರ 19ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಚೆಂಡನ್ನು ಗುರಿ ಸೇರಿಸಿದರು.

ಮೊದಲಾರ್ಧದ ವೇಳೆಗೆ ಉಭಯ ತಂಡಗಳು 1-1ಗೋಲುಗಳಿಂದ ಸಮಬಲ ಸಾಧಿಸಿದ್ದವು. ನಂತರ ಪ್ರಭ್ಜೋತ್ ಸಿಂಗ್ ನೇತೃತ್ವದ ಪಂಜಾಬ್ ಚುರುಕಿನ ಪ್ರದರ್ಶನಕ್ಕೆ ಮುಂದಾಯಿತು. ದ್ವಿತೀಯಾರ್ಧ ಆರಂಭವಾಗಿ ಕೇವಲ ಐದು ನಿಮಿಷಗಳಲ್ಲಿಯೇ ಪ್ರವಾಸಿ ಪಾಳೆಯದವರು ಮುನ್ನಡೆ ಸಾಧಿಸಿದರು. ಕರಮ್‌ಜಿತ್ ಸಿಂಗ್ 40ನೇ ನಿಮಿಷದಲ್ಲಿ ತಂದಿತ್ತ ಗೋಲು ಇದಕ್ಕೆ ಕಾರಣವಾಯಿತು.

ಪಂಜಾಬ್ 2-1ರಲ್ಲಿ ಮುನ್ನಡೆ ಹೊಂದಿದ್ದಾಗ, ಆತಿಥೇಯ ತಂಡ ಗೋಲು ಗಳಿಸಲು ಪದೇ ಪದೇ ಯತ್ನಿಸಿತು. ಆದರೆ, ಎದುರಾಳಿ ತಂಡದ ಗೋಲ್ ಕೀಪರ್ ಸುಖ್‌ಜಿತ್ ಸಿಂಗ್ ಇದಕ್ಕೆ ಅಡ್ಡಿಯಾದರು. ಇದರಿಂದ ಹಾಲಪ್ಪ ಪಡೆ ಒತ್ತಡಕ್ಕೆ ಸಿಲುಕಿತು.

ಪಂಜಾಬ್‌ನ ಹರ್‌ಪ್ರೀತ್ ಸಿಂಗ್ ಚೆಂಡನ್ನು ಗುರಿ ಸೇರಿಸಲು ಎರಡು ಸಲ ಯತ್ನಿಸಿದರು. ಇದಕ್ಕೆ ಕರ್ನಾಟಕದ ಆಟಗಾರರು ತಡೆಗೋಡೆಯಾದರು. ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸುವ ಅವಕಾಶವನ್ನು ಮೂರು ಸಲ ಈ ತಂಡ ಹಾಳು ಮಾಡಿಕೊಂಡಿತು. ಆದರೆ, ಹರ್‌ಪ್ರೀತ್ ಕೊನೆಗೂ 59ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಚೆಂಡನ್ನು ಗುರಿ ಸೇರಿಸುವಲ್ಲಿ ಯಶ ಕಂಡರು. ಇದರಿಂದ ಪಂಜಾಬ್ ಮುನ್ನಡೆಯನ್ನು 3-1ಕ್ಕೆ ಹೆಚ್ಚಿಸಿಕೊಂಡಿತು.

ವಿಜಯಿ ತಂಡದ ಕೊನೆಯ ಗೋಲನ್ನು ನಾಯಕ ಪ್ರಭ್ಜೋತ್ ಸಿಂಗ್ 67ನೇ ನಿಮಿಷದಲ್ಲಿ ಕಲೆ ಹಾಕಿದರು. ಇದರಿಂದ ಗೆಲುವಿನ ಕನಸು ಹೊಂದಿದ್ದ ಸ್ಥಳೀಯ ಅಭಿಮಾನಿಗಳು ನಿರಾಸೆ ಅನುಭವಿಸಿದರು.

ಕರ್ನಾಟಕ ತಂಡದ ರಕ್ಷಣಾ ವಿಭಾಗದ ಲೋಪವನ್ನು ಚೆನ್ನಾಗಿಯೇ ಬಳಸಿಕೊಂಡ ಪಂಜಾಬ್‌ನ ಆಟಗಾರರು ಗೋಲು ಗಳಿಸಲು ಆರಂಭದಲ್ಲಿ ಕೊಂಚ ಪರದಾಡಿದರು. ನಂತರ ಸುಲಭವಾಗಿ ಚೆಂಡಿಗೆ ಗೋಲು ಪೆಟ್ಟಿಗೆಯ ಹಾದಿ ತೋರಿಸಿದರು.

ಹಿಂದಿನ ಪಂದ್ಯದಲ್ಲಿಯೂ ಕರ್ನಾಟಕವನ್ನು 1-6ಗೋಲುಗಳಿಂದ ಪಂಜಾಬ್ ಮಣಿಸಿತ್ತು. ಲೀಗ್ ಹಂತದಲ್ಲೂ ಈ ತಂಡ 24 ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿತ್ತು.

ಆದ್ದರಿಂದ ಈ ಪಂದ್ಯದಲ್ಲಿ ಪ್ರವಾಸಿ ತಂಡವೇ ಗೆಲುವಿನ ಫೇವರಿಟ್ ಎನಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.