ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

7

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ

Published:
Updated:

ಶಿವಮೊಗ್ಗ: ಇಂದಿನ ಕೌಟುಂಬಿಕ ವ್ಯವಸ್ಥೆ ಕುಸಿಯುವುದರ ಹಿಂದೆ ಹಿರಿಯರ ನಿರ್ಲಕ್ಷ್ಯ ಅಡಗಿದೆ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ ಆತಂಕ ವ್ಯಕ್ತಪಡಿಸಿದರು.ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯರ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆ ಸಂಯುಕ್ತವಾಗಿ ಸೋಮವಾರ ಹಮ್ಮಿಕೊಂಡಿದ್ದ `ವಿಶ್ವ ಹಿರಿಯ ನಾಗರಿಕರ ದಿನಾಚರಣೆ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮನೆಯಲ್ಲಿ ಹಿರಿಯರಿದ್ದರೆ ಸಂಬಂಧಗಳು ಗಟ್ಟಿಯಾಗುತ್ತವೆ. ಗಂಡ-ಹೆಂಡತಿ ಬಹಳಷ್ಟು ಸಮಸ್ಯೆಗಳು ಅವರ ಸಲಹೆಗಳಿಂದ ಪರಿಹಾರ ಕಾಣುತ್ತವೆ. ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದು ವಿಶ್ಲೇಷಿಸಿದರು.ಆಸ್ತಿ ಪಾಲುದಾರರಾದ ನಾವು, ಅವರ ದುಃಖ-ದುಮ್ಮಾನ, ಒಂಟಿತನಗಳ ಪಾಲುದಾರರಾಗಲು ಹಿಂದೇಟು ಹಾಕುವ ವಾತಾವರಣ ಎಲ್ಲಾ ಕುಟುಂಬಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಹಿರಿಯರ ನಿರ್ಲಕ್ಷ ದೇಶದ ಪರಂಪರೆಗೆ ತಕ್ಕದ್ದಲ್ಲ. ಹಿರಿತನ ಸಮಾಜದ ಅವಿಭಾಜ್ಯ ಅಂಗ ಎಂದು ಪ್ರತಿಪಾದಿಸಿದ ಅವರು, ಸಮಾಜದಲ್ಲಿ ಯಾವುದೋ ಕಾರಣಕ್ಕೆ ಗೌರವ  ಸಿಗುತ್ತಿಲ್ಲ ಎಂಬ ಭಾವನೆಯಿಂದ ಹಿರಿಯರು ಆತ್ಮವಿಶ್ವಾಸ ಕಳೆದು ಕೊಳ್ಳಬಾರದು. ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಿರಿಯರು ತಮ್ಮ ಪಾತ್ರವನ್ನು ನಿಭಾಯಿಸಬೇಕು ಎಂದರು.ಹಣ ಹಿಂದೆ ಓಡುವಂತೆ ಮಕ್ಕಳನ್ನು ಪ್ರಚೋದಿಸಿದವರೇ ಇಂದು ತಮಗೆ ಒದಗಿರುವ ಸ್ಥಿತಿ ಬಗ್ಗೆ ಮರುಕ ಪಡುವಂತಾಗಿದೆ ಎಂದ ಅವರು, ಹುಷಾರಿಲ್ಲದಾಗ ಆಸ್ಪತ್ರೆಗೂ ಕರೆದು ಕೊಂಡು ಹೋಗುವವರಿಲ್ಲದಿದ್ದರೆ ಮಗ-ಸೊಸೆ ವಿದೇಶದಲ್ಲಿರುವುದು ಯಾವ ಪ್ರಯೋಜನಕ್ಕೆ? ಇದು ಎಂತಹ ಸಂಬಂಧ? ಎಂದು ವ್ಯಂಗ್ಯವಾಡಿದರು.  

ಹಿರಿಯರು ವಾಸ್ತವ ಅರ್ಥ ಮಾಡಿಕೊಳ್ಳಬೇಕು. ಒಂದಿಷ್ಟು ಆಸ್ತಿಯನ್ನು ತಮ್ಮಲ್ಲೇ ಇಟ್ಟುಕೊಳ್ಳಬೇಕು. ಕನಿಷ್ಠ ಆಸ್ತಿಗಾದರೂ ತಮ್ಮನ್ನು ಯಾರಾದರೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.ಸಮಾರಂಭದಲ್ಲಿ ಜಿಲ್ಲೆಯ ವಿವಿಧ ಹಿರಿಯ ನಾಗರಿಕರನ್ನು ಗೌರವಿಸಲಾಯಿತು. ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಸವರಾಜಪ್ಪ, ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ರಾಜಗೋಪಾಲ್, ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎನ್. ಜಯದೇವಯ್ಯ, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಅನಂತರಾಮಯ್ಯ, ಸಂಘದ ಪದಾಧಿಕಾರಿಗಳಾದ ಮರಿಲಿಂಗಪ್ಪ, ಮಲ್ಲಪ್ಪ ಉಪಸ್ಥಿತರಿದ್ದರು.ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶೇಖರ್ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry