ಶುಕ್ರವಾರ, ಸೆಪ್ಟೆಂಬರ್ 25, 2020
21 °C

ವಿಷಮ ಸನ್ನಿವೇಶದಲ್ಲಿ ಕಾವ್ಯದ ಬೆಳಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಷಮ ಸನ್ನಿವೇಶದಲ್ಲಿ ಕಾವ್ಯದ ಬೆಳಗು

ಜ.ನಾ. ತೇಜಶ್ರೀ ಅವರ `ಅವನರಿವಲ್ಲಿ~ ಖಂಡಕಾವ್ಯವಾಗಿರುವುದರಿಂದ ಇಲ್ಲಿಯ ಭಾಗಗಳಿಗೆ ಶೀರ್ಷಿಕೆಗಳಿಲ್ಲ. ಕವನವನ್ನು ಇಡಿಯಾಗಿ ಗ್ರಹಿಸಬೇಕೆಂಬ ಉದ್ದೇಶವೂ ಇದಕ್ಕೆ ಕಾರಣವಾಗಿದೆ. ಈ ಕಾವ್ಯದ ಬೆನ್ನುಡಿಯಲ್ಲಿ ನಟರಾಜ್ ಹುಳಿಯಾರರು ಹೀಗೆ ಹೇಳಿದ್ದಾರೆ:“ಸಾವು ಬದುಕಿನ ನಡುವೆ ಹೊಯ್ದಾಡುವ ಜೀವವೊಂದರ ದಿವ್ಯ ಉನ್ಮಾದವೇ ಕಾವ್ಯವಾದ ಸಾರ್ಥಕ ಗಳಿಗೆ ಇದು”. ಈ ಕಾವ್ಯದಲ್ಲಿ ಬರುವ ಈ ಕೆಳಗಿನ ಸಾಲುಗಳನ್ನು ಗಮನಿಸಿದಾಗ ಹುಳಿಯಾರರು ಇಂಥ ಮಾತನ್ನು ಬೆನ್ನುಡಿಯಲ್ಲಿ ಏಕೆ ಬರೆದಿದ್ದಾರೆ ಎಂಬುದರ ಸುಳಿವು ಸಿಗಬಹುದು:

ಗಿರಕಿ ಹೊಡೆಯುತ್ತಿದೆ ಸಾವು

ಇಲ್ಲೇ ಹತ್ತಿರದಲ್ಲೆಲ್ಲೋ

..... ..... .....

ನೀನುಳಿಸಿ ಹೋದ ಎಲ್ಲ ನಿಶಾನೆಗಳು

ಈ ನನ್ನ ದೇಹ ಮನಸ್ಸಿನೊಡನೆ

ಸುಟ್ಟು ಬೂದಿಯಾಗಲಿವೆ

...... ...... ......

ಈ ಮುತ್ತೈದೆ ಸಾವಲ್ಲಿ ಅದೆಷ್ಟು ಸುಖ ನೋಡು?

ಬಯಸಿ ಹೇರಿಕೊಂಡ ಎಲ್ಲ

ಕಟ್ಟುಗಳೂ ಕಟ್ಟೊಡೆದು

ದೇಹದೊಡನೆ ಮುಕ್ಕಾಗುವುದು

ಮಣ್ಣನ್ನು ನೆಕ್ಕುವುದು

ಈ ಕಾವ್ಯಕ್ಕೆ `ಮುನ್ನುಡಿ~ ರೂಪದ ಮಾತುಗಳನ್ನು ಬರೆದಿರುವ ಡಾ. ಯು.ಆರ್. ಅನಂತಮೂರ್ತಿಯವರು ಕೂಡ ಪ್ರೇಮದಲ್ಲಿ ಅಡಗಿರುವ ಸಾವನ್ನು ದೂರವಿಡುವ ಶಕ್ತಿಯನ್ನು ಕುರಿತು ಹೇಳಿದ್ದಾರೆ.ಈ ಖಂಡಕಾವ್ಯವನ್ನು ಓದುತ್ತಾ ಹೋದಂತೆ ಕವಯತ್ರಿ ಯಾವುದೋ ವಿಷಮ ಸನ್ನಿವೇಶದ ದಾರುಣ ಸ್ಥಿತಿಯಲ್ಲಿ ನಿಂತು ಈ ಕಾವ್ಯವನ್ನು ರಚಿಸಿದ್ದಾರೆಂಬುದು ಸ್ಪಷ್ಟವಾಗುತ್ತ ಹೋಗುತ್ತದೆ. ಬೇಡ ಬೇಡವೆಂದರೂ ಜೀವನದ ಕ್ಷಣಿಕತೆ ಮತ್ತು ಸಾವಿನ ನಂತರವೂ ಇನ್ನೊಬ್ಬರಲ್ಲಿ ಬದುಕುವ ಆಸೆ- ಇವುಗಳು ಪದೇ ಪದೇ ಈ ಕಾವ್ಯದಲ್ಲಿ ಕಾಣಿಸಿಕೊಳ್ಳುತ್ತವೆ.

ಭಾವಕ್ಕೆ ತಕ್ಕಂತೆ ಸಾಲುಗಳು `ಉರುಳು~ವ ವಿಶಿಷ್ಟವಾದ ಶಕ್ತಿಯೊಂದು ಈ ಕಾವ್ಯದಲ್ಲಿದೆ.ಶಬ್ದಗಳ ಧ್ವನಿಯ ಬಗ್ಗೆ ಹೆಚ್ಚು ಕಾಳಜಿ ಇರುವುದರಿಂದ ತೇಜಶ್ರೀಯವರು ಅನಾಯಾಸವಾಗಿ ಶಬ್ದಗಳನ್ನು ಭಾವಕ್ಕೆ ತಕ್ಕಂತೆ ಆಯ್ದುಕೊಳ್ಳುತ್ತಾರೆ. ಕೃಷ್ಣ-ರಾಧೆಯರ ನೇರವಾದ ಪ್ರಸ್ತಾಪವಿಲ್ಲದಿದ್ದರೂ ಈ ಕಾವ್ಯದ ಹಿಂದೆ ಅವರು ಸಾಕ್ಷಿಪ್ರಜ್ಞೆಯಾಗಿ ನಿಂತಿದ್ದಾರೆ. ಗಂಡಸಿನಿಂದ ಹೆಣ್ಣು ಶೋಷಣೆಗೆ ಒಳಗಾಗುತ್ತಾಳೆ ಎಂಬ ಪ್ರಜ್ಞೆ ತೀರ ಇತ್ತೀಚಿನವರೆಗೆ ನಮ್ಮ ಸಾಹಿತ್ಯದಲ್ಲಿ ಕೆಲಸ ಮಾಡಿದೆ. ಆದರೆ ಈ ಕಾವ್ಯದಲ್ಲಿ ಹೆಣ್ಣೊಂದು ಪೂರ್ಣತ್ವ ಪಡೆಯಲು ಗಂಡಿನ ಸಂಗ ಬೇಕೆಂಬ ಬಯಕೆ ಕಾವ್ಯದುದ್ದಕ್ಕೂ ಹರಡಿದೆ. ಇದಕ್ಕೆ ಉದಾಹರಣೆಯಾಗಿ ಈ ಸಾಲುಗಳನ್ನು ನೋಡಬಹುದು.

ನನ್ನನ್ನು ಹೆಣ್ಣಾಗಿಸಿದವನೆ

ಲೋಕದ ಎಲ್ಲ ಹೆಣ್ಣುಗಳ ಎದೆಯಲ್ಲೂ

ಹೊಸ ಬಯಕೆಯ ತೇರನ್ನೆಳೆವವನೆ

ಕೇವಲ ನನ್ನೆದೆಯ ಗರ್ಭಗುಡಿಗೆ ಮೀಸಲಾದವನೆ

ನನ್ನನ್ನು ನನ್ನ ತುಟಿಯ ಕೊಳಲಾಗಿಸಿದವನೆ...

ಇಂಥ ಸಾಲುಗಳಲ್ಲಿ ತೀರ ವೈಯಕ್ತಿಕವಾಗಿಯೂ ಸಾರ್ವತ್ರಿಕತೆಯನ್ನು ಧ್ವನಿಸುವ ವಿಶೇಷವಾದ ಶಕ್ತಿ ಇದೆ. ಈ ಕವಯತ್ರಿಯ ಮೂಲ ಶಕ್ತಿಯೇ ಇದು.ಇಷ್ಟೆಲ್ಲ ಒಳ್ಳೆಯ ಕಾವ್ಯಗುಣಗಳನ್ನು ಒಳಗೊಂಡೂ ಇದು ಒಂದು ಮಹತ್ವಾಕಾಂಕ್ಷೆಯ ಕಾವ್ಯ ಏಕಾಗುವುದಿಲ್ಲ ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ತನ್ನ ಇನ್ನೊಂದು ಭಾಗವೆನಿಸಿರುವ ಗಂಡಸಿನಿಂದ ಏನೆಲ್ಲ ಪಡೆದುಕೊಂಡೆ ಎಂಬುದನ್ನು ಹೇಳಲು ಕವನದ ಹೆಚ್ಚಿನ ಭಾಗವನ್ನು ಬಳಸಿಕೊಳ್ಳಲಾಗಿದೆ. ಆದರೆ ಇದನ್ನು ಅರುಹಲು ಕವಯತ್ರಿ ಹೆಚ್ಚಾಗಿ ಉಪಯೋಗಿಸುವುದು ದೇಹಕ್ಕೆ ಸಂಬಂಧಿಸಿದ ಗುಣಗಳನ್ನು ಮಾತ್ರ. ದೇಹವಲ್ಲದೆ ಬೇರೆ ಪರಿಕರಗಳು ಕೂಡ ಕವಯತ್ರಿಯ ಭಾವನೆಗಳನ್ನು ಅರುಹಲು ಸಶಕ್ತವಾಗಿ ದೊರಕುತ್ತವೆ. ಸುಂದರ ಸಾಲುಗಳ ಮಧ್ಯೆ ದೇಹದ ಪರಿಕರಗಳು ಹೊಳೆಯುವಂತೆ ಇತರ ಪರಿಕರಗಳು ಅರ್ಥಪೂರ್ಣವಾಗಿ ಮೂಡಿಬರುವುದಿಲ್ಲ.ಎಲ್ಲ ವಿಷಮ ಪರಿಸ್ಥಿತಿಗಳಲ್ಲಿಯೂ ಕಾವ್ಯ ಹುಟ್ಟಲೇಬೇಕೆಂಬ ನಿಯಮವಿಲ್ಲ. ಆದರೆ ವಿಷಮ ಸನ್ನಿವೇಶಗಳು ಕೆಲವೊಮ್ಮೆ ಕೆಲ ಕವಿಗಳಿಗೆ ಸ್ಫೂರ್ತಿದಾಯಕವಾಗಿವೆ. ಅಂಥ ಕವಿಗಳ ಸಾಲಿಗೆ ತೇಜಶ್ರೀಯವರು ಸೇರುತ್ತಾರೆ. ಅವರ ವಿಷಮ ಪರಿಸ್ಥಿತಿ ದೂರವಾಗಿ ಅವರು ಜೀವನವನ್ನು ಇನ್ನೂ ಹೆಚ್ಚು ವಿಶಾಲವಾದ ದೃಷ್ಟಿಯಿಂದ ನೋಡುವಂತಾದರೆ ಖಂಡಿತವಾಗಿಯೂ ಕನ್ನಡ ಭಾಷೆಗೆ ಉತ್ತಮ ಕವಯತ್ರಿಯೊಬ್ಬರು ದಕ್ಕುತ್ತಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.