ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

7

ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಸಾವು

Published:
Updated:

ಯಲಹಂಕ: ಮೆ-ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ(ಲಿ) ವತಿಯಿಂದ 400ಕೆವಿ ಸಾಮರ್ಥ್ಯದ ಹೈ-ಟೆನ್ಷನ್ ವಿದ್ಯುತ್ ಮಾರ್ಗವನ್ನು ಅಳವಡಿಸುವ ಸಲುವಾಗಿ ವಶಪಡಿಸಿಕೊಂಡ ಭೂಮಿಗೆ ಸೂಕ್ತ ಪರಿಹಾರ ನೀಡದೆ ಲೈನ್ ಎಳೆಯುವ ಪ್ರಕ್ರಿಯೆಯನ್ನು ಆರಂಭಿಸಿದ ಪರಿಣಾಮ ಹತಾಶೆಗೊಂಡು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.ಹೆಸರಘಟ್ಟ ಹೋಬಳಿ ಚೊಕ್ಕನಹಳ್ಳಿ ಗ್ರಾಮದ ನಿವಾಸಿ ಚನ್ನಪ್ಪ ಎಂಬುವರ ಪತ್ನಿ ಅಕ್ಕಯಮ್ಮ (60) ಮೃತಪಟ್ಟವರು. ಸಂಸ್ಥೆಯವರು ಹನಿಯೂರು ಗ್ರಾಮದಿಂದ ಸಿಂಗನಾಯಕನಹಳ್ಳಿಯವರೆಗೆ ವಿದ್ಯುತ್ ಮಾರ್ಗವನ್ನು ಅಳವಡಿಸಲು, ಶ್ಯಾನುಭೋಗನಹಳ್ಳಿಯಿಂದ ಚೊಕ್ಕನಹಳ್ಳಿ ಕಡೆಗೆ ತೆರಳುವ ಮಾರ್ಗದಲ್ಲಿರುವ ಚನ್ನಪ್ಪ ಅವರ ತೋಟದಮನೆಯ ಬಳಿ ಶನಿವಾರ ಲೈನ್ ಎಳೆಯುವ ಕಾಮಗಾರಿ ಆರಂಭಿಸಲು ಮುಂದಾಗಿದ್ದರು. ಆಗ ಪರಿಹಾರ ದೊರಕದ ಬೇಸರದಲ್ಲಿ ಅಕ್ಕಯಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು.ಅಸ್ವಸ್ಥರಾಗಿದ್ದ ಅವರನ್ನು  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಮಂಗಳವಾರ ಬೆಳಗ್ಗೆ ಸುಮಾರು 9 ಗಂಟೆ ಹೊತ್ತಿನಲ್ಲಿ ಮೃತಪಟ್ಟರು. ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಬೆಂಗಳೂರು ಉತ್ತರ ತಾಲ್ಲೂಕು ಘಟಕದ  ಕಾರ್ಯಕರ್ತರು ಹಾಗೂ ಗ್ರಾಮಸ್ಥರು, ಶವವನ್ನು ಯಲಹಂಕಕ್ಕೆ ತರುವ ಮಾರ್ಗಮದ್ಯೆ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಘಟನೆ ಕುರಿತು ಮಾಹಿತಿ ನೀಡಿದರು.ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು, ಮೃತರ ಕುಟುಂಬಕ್ಕೆ ಸ್ಥಳದಲ್ಲೆ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು. ಅಲ್ಲದೆ ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯವರಿಗೆ ಪರಿಹಾರ ನೀಡಲು ಸೂಚಿಸುವುದಾಗಿ ಭರವಸೆ ನಿಡಿದರು. ನಂತರ  ಯಲಹಂಕದ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿದ ಬಳಿಕ ಚೊಕ್ಕನಹಳ್ಳಿ ಗ್ರಾಮದಲ್ಲಿ ಸಂಜೆ ಮೃತರ ಅಂತ್ಯಕ್ರಿಯೆ ನೆರವೇರಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry