ವಿಷಾಹಾರ: ಅಸ್ವಸ್ಥರಾಗಿದ್ದ 14 ಮಂದಿ ಚೇತರಿಕೆ

7

ವಿಷಾಹಾರ: ಅಸ್ವಸ್ಥರಾಗಿದ್ದ 14 ಮಂದಿ ಚೇತರಿಕೆ

Published:
Updated:

ಹಾನಗಲ್: ಒಂದೇ ಕುಟುಂಬದ 14 ಜನರು ವಿಷಾಹಾರ ಸೇವನೆಯಿಂದ ಅಸ್ವಸ್ಥರಾಗಿ ಬುಧವಾರ ಹಾನಗಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗುರುವಾರ ರೋಗಿಗಳು ಚೇತರಿಸಿಕೊಂಡಿದ್ದಾರೆ.ಕಳೆದ ಮಂಗಳವಾರ ರಾತ್ರಿ ಹಾನಗಲ್ ಸಮೀಪದ ಮುಂಡಗೋಡ ತಾಲ್ಲೂಕಿನ ಕಲಕೊಪ್ಪ ಗ್ರಾಮದ ಮನೆಯಲ್ಲಿ ಉಟ ಮಾಡಿದ್ದ ಕುಟುಂಬದ ಸದಸ್ಯರು ವಾಂತಿ-ಬೇಧಿಯಿಂದ  ಅಸ್ವ ಸ್ಥರಾಗಿದ್ದರು. ಹಾನಗಲ್ಲಿನ ಅವರ ಸಂಬಂಧಿ ಖ್ವಾಜಾಮೊದ್ದೀನ ಅಬ್ದುಲ್‌ಕರೀಮ ನಾಯಕ  ರೋಗಿಗಳನ್ನು ಹಾನಗಲ್ ಸರ್ಕಾರಿ ಆಸ್ಪತ್ರೆಗೆ ಬುಧವಾರ ದಾಖಲಿಸಿದ್ದರು.ತೀವ್ರವಾಗಿ ಅಸ್ವಸ್ಥಗೊಂಡು ನಿತ್ರಾಣ ಪರಿಸ್ಥಿತಿಯಲ್ಲಿದ್ದ ಮೌಲಾಲಿ, ಶಬೀನಾ, ಜಹೀರ, ಸುಹೇಲ, ಅರ್ಷದ, ನದೀಮ ಎಂಬ ಚಿಕ್ಕಮಕ್ಕಳು ಮತ್ತೊಬ್ಬ ತಸ್ಮಿಯಾ ಎಂಬಾಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಶಿರಶಿಗೆ ಕಳಿಸಲಾಗಿತ್ತು. ಇನ್ನುಳಿದ ಗೌಸಮೊದ್ದೀನ್, ಅಬೇದಾ, ಜಾವೀದ್, ಮಾಲನ, ಫರಹಾನ್, ವಸೀಮ್ ಮತ್ತು ಅರ್ಷನಾಜ್ ಎಂಬುವವರು ಹಾನಗಲ್ಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಎಲ್ಲ ರೋಗಿಗಳು ಗುಣಮುಖರಾಗುತ್ತಿದ್ದು, ವಾಂತಿ-ಬೇಧಿ ನಿಯಂತ್ರಣಕ್ಕೆ ಬಂದಿದೆ ಎಂದು ರೋಗಿಗಳ ಬಂಧುಗಳು ತಿಳಿಸಿದ್ದಾರೆ.ಲೋಕಾಯುಕ್ತ ತಂಡದ ಪರಿಶೀಲನೆ: ಹಾನಗಲ್ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅಲಕ್ಷಿಸಲಾಗುತ್ತಿದೆ. ಸಿಬ್ಬಂಧಿ ಕೊರತೆಯಿದೆ. ಆಸ್ಪತ್ರೆಯಲ್ಲಿ ಔಷಧಿಗಳ ಸಂಗ್ರಹವಿದ್ದರೂ ಹೊರಗಿನಿಂದ ಔಷಧಿ ತರಲು ಹೇಳುತ್ತಾರೆ ಎಂದು ರೋಗಿಗಳ ಸಂಬಂಧಿಗಳು ದೂರಿದ ಹಿನ್ನೆಲೆಯಲ್ಲಿ ಗುರುವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಹಾವೇರಿ ಲೋಕಾಯುಕ್ತ ತಂಡ ಆಸ್ಪತ್ರೆ ವ್ಯವಸ್ಥೆಯ ಪರಿಶೀಲನೆ ಕೈಗೊಂಡರು.ಆಸ್ಪತ್ರೆ ಸ್ವಚ್ಚತೆ, ಸಿಬ್ಬಂದಿ ಹಾಜರಾತಿ, ವೈದ್ಯರ ಕೊರತೆ, ವಾರ್ಡುಗಳ ಪರಿಸ್ಥಿತಿ, ಔಷಧ ಸಂಗ್ರಹಗಳ ವಿವರಣೆ ಪಡೆದರು. ಪ್ರತಿ ದಿನ ಸುಮಾರು 500 ರೋಗಿಗಳು ಚಿಕಿತ್ಸೆಗಾಗಿ ಬರುವ ಈ ಆಸ್ಪತ್ರೆಯಲ್ಲಿ ಕೇವಲ ಒಬ್ಬ ವೈದ್ಯರು ಕಾರ್ಯ ನಿರ್ವಹಿಸುವ ಸಂಗತಿಯನ್ನು ದಾಖಲಿಸಿ ಕೊಂಡರು.    ಹೊರಗಿನಿಂದ ತರಿಸಿದ ಔಷಧಿಗಳು  ಸಂಗ್ರಹವಿರುವ ವಿವರ ಪಡೆದುಕೊಂಡರು. ಲೋಕಾಯುಕ್ತ ಡಿ.ಎಸ್.ಪಿ ಎಂ.ಬಿ. ಪಾಟೀಲ, ಇನ್ಸಪೆಕ್ಟರ್ ಶ್ರೀನಿವಾಸ, ಸಿಬ್ಬಂದಿ ಎಂ.ಡಿ.ಹಿರೇಮಠ, ಡಿ.ಎಸ್. ಬಿಲ್ಲರ  ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry