ವಿಷ ಕುಡಿದು ಪ್ರೇಮಿಗಳ ಆತ್ಮಹತ್ಯೆ

6

ವಿಷ ಕುಡಿದು ಪ್ರೇಮಿಗಳ ಆತ್ಮಹತ್ಯೆ

Published:
Updated:

ಬೆಂಗಳೂರು:  ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದ ಪ್ರೇಮಿಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಲಗ್ಗೆರೆಯಲ್ಲಿ ಸೋಮವಾರ ನಡೆದಿದೆ.ಲಗ್ಗೆರೆ ಸಮೀಪದ ಬೈರವೇಶ್ವರ ನಗರ ನಾಲ್ಕನೇ ಅಡ್ಡರಸ್ತೆ ನಿವಾಸಿ ಮಂಜುರಾಮ್ ಎಂಬುವರ ಮಗ    ಎಚ್.ಎಂ.ನವೀನ್ (26) ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕಾಲೊನಿ ನಿವಾಸಿ ಶಿವರಾಜ್ ಎಂಬುವರ ಮಗಳು ರಮ್ಯಾ (22) ಆತ್ಮಹತ್ಯೆಗೆ ಯತ್ನಿಸಿದವರು. ಅವರಿಬ್ಬರೂ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಲಕ್ಷ್ಮಿದೇವಿ ನಗರದ ಹೈಯರ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿದ್ದ ಸಂದರ್ಭದಲ್ಲಿ ಅವರು ಪರಿಚಿತರಾಗಿದ್ದರು. ನಂತರ ಅವರ ನಡುವೆ ಪ್ರೇಮಾಂಕುರವಾಗಿತ್ತು. ಪರಸ್ಪರರು ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ಅವರ ಪೋಷಕರಿಗೂ ಗೊತ್ತಿತ್ತು. ಪೋಷಕರು ಮದುವೆಗೆ ಒಪ್ಪಿಗೆ ಸಹ ಸೂಚಿಸಿದ್ದರು. ಈ ಮಧ್ಯೆ ನಿರ್ಧಾರ ಬದಲಿಸಿದ ನವೀನ್ ತಾಯಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.ಇದರಿಂದ ಬೇಸರಗೊಂಡ ನವೀನ್ ಮನೆಯಲ್ಲೇ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದರು. ಈ ವಿಷಯ ತಿಳಿದು ಮನನೊಂದ ರಮ್ಯಾ ಅವರು ಮಧ್ಯಾಹ್ನ 12 ಗಂಟೆ ಸುಮಾರಿಗೆ ವಿಷ ಕುಡಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ವಿಷ ಕುಡಿದು ಅಸ್ವಸ್ಥಗೊಂಡಿದ್ದ ಅವರಿಬ್ಬರನ್ನೂ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಘಟನೆ ಹಿನ್ನೆಲೆಯಲ್ಲಿ ಮಂಜುರಾಮ್ ಮತ್ತು ಶಿವರಾಜ್ ಅವರು ಆತಂಕಕ್ಕೀಡಾಗಿ ಅಸ್ವಸ್ಥಗೊಂಡಿದ್ದಾರೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry