`ವಿಸಿಬಿ ಕಾಲೇಜು ಸ್ವಾಯತ್ತತೆ ಪಟ್ಟಿಗೆ'

7

`ವಿಸಿಬಿ ಕಾಲೇಜು ಸ್ವಾಯತ್ತತೆ ಪಟ್ಟಿಗೆ'

Published:
Updated:

ಲಿಂಗಸುಗೂರ: ವಿಶ್ವ ವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳ ಶೇಕಡವಾರು ಫಲಿತಾಂಶ, ಅಲ್ಲಿನ ಮೂಲ ಸೌಕರ್ಯ ಸೇರಿದಂತೆ ಕೆಲ ಪದವಿ ಕಾಲೇಜುಗಳಿಗೆ ಸ್ವಾಯತ್ತತೆ ನೀಡಲು ನಿರ್ಧರಿಸಲಾಗಿದೆ. ಆ ಪೈಕಿ ಸ್ಥಳೀಯ ವಿಸಿಬಿ ಪದವಿ ಕಾಲೇಜನ್ನು ಸ್ವಾಯತ್ತತೆ ಪಟ್ಟಿಗೆ ಸೇರ‌್ಪಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಘೋಷಿಸಿದರು.ಶುಕ್ರವಾರ ವಿಸಿಬಿ ಕಾಲೇಜಿನ ಮಹಿಳಾ ವಸತಿ ನಿಲಯ ಉದ್ಘಾಟಿಸಿ ಮಾತನಾಡಿ, ಈಗಾಗಲೆ ವಿಸಿಬಿ ಕಾಲೇಜು ಯುಜಿಸಿ ಸೌಲಭ್ಯ ಪಡೆಯುತ್ತಿರುವುದರಿಂದ ಸ್ವಾಯತ್ತತೆ ಪಟ್ಟಿಗೆ ಸೇರ‌್ಪಡೆಗೆ ಅಡ್ಡಿಯಾಗದು. ಸಂಸ್ಥೆ ಕಳೆದ ಹಲವು ವರ್ಷಗಳಿಂದ ಈ ಭಾಗದ ರೈತರ, ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿ ಸಮೂಹಕ್ಕೆ ನೀಡಿರುವ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.ರಾಯಚೂರು ಜಿಲ್ಲೆಯ ಮಸ್ಕಿ, ಮುದಗಲ್ಲ, ಸಿಂಧನೂರು, ಮಾನ್ವಿ, ದೇವದುರ್ಗ, ರಾಯಚೂರು ಮತ್ತಿತರೆಡೆ ಅಸ್ಥಿತ್ವದಲ್ಲಿರುವ ಪದವಿ ಕಾಲೇಜುಗಳಿಗೆ ನಬಾರ್ಡ್ ಯೋಜನೆಯಡಿ ಕೋಟ್ಯಂತರ ಹಣ ಬಿಡುಗಡೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಸಿಂಧನೂರಿಗೆ ಮಹಿಳಾ ಪದವಿ ಕಾಲೇಜು ಮಂಜೂರ ಮಾಡಲಾಗಿದೆ. ಒಟ್ಟಾರೆ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಶಾಸಕ ಮಾನಪ್ಪ ವಜ್ಜಲ ಮಾತನಾಡಿ ಸ್ಥಳೀಯ ಪದವಿ ಕಾಲೇಜಿನ ಪ್ರಸ್ತುತ ಸ್ಥಿತಿಗತಿ, ಗ್ರಂಥಾಲಯ, ಪ್ರಯೋಗಾಲಯ, ಕಂಪೌಂಡ್ ಗೋಡೆ, ಸೇರಿದಂತೆ ಮೂಲ ಸೌಕರ್ಯಗಳ ಮಂಜೂರಾತಿಗೆ ಮನವಿ ಮಾಡಿದರು. ಮುಖ್ಯ ರಸ್ತೆಯಿಂದ ಕಾಲೇಜಿಗೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಸೇರಿದಂತೆ ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಅಭಿವೃದ್ಧಿಗೆ ಅಗತ್ಯ ಕಾಲೇಜುಗಳ ಮಂಜೂರಾತಿಗೆ ಸಚಿವರಲ್ಲಿ ಮನವಿ ಮಾಡಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು. ಶಾಸಕ ಪ್ರತಾಪಗೌಡ ಪಾಟೀಲ, ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪೂರ, ವಿಸಿಬಿ ಆಡಳಿತಾಧಿಕಾರಿ ಸಿ.ಶರಣಪ್ಪ, ಪ್ರಾಚಾರ್ಯ ಅಶೋಕ.ವಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry