ವಿಸ್ತರಣೆ ಹಪಾಹಪಿ: ಚೀನಾಕ್ಕೆ ಮೋದಿ ಎಚ್ಚರಿಕೆ

ಇಟಾನಗರ (ಪಿಟಿಐ): ‘ಚೀನಾ ತನ್ನ ಸಾಮ್ರಾಜ್ಯ ವಿಸ್ತರಣಾ ಮನೋಭಾವ ಬಿಡಬೇಕು’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಒತ್ತಾಯಿಸಿದರು.
ಅವರು ಅರುಣಾಚಲ ಪ್ರದೇಶದ ಪಸಿಘಾಟ್ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ‘ಅರುಣಾಚಲ ಪ್ರದೇಶವನ್ನು ಭಾರತದಿಂದ ಕಿತ್ತುಕೊಳ್ಳಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ’ ಎಂದರು.
ಪ್ರಧಾನಿ ಅಭ್ಯರ್ಥಿಯಾದ ಬಳಿಕ ಅವರು ವಿದೇಶಾಂಗ ನೀತಿ ಕುರಿತು ಉಲ್ಲೇಖಿಸಿದ್ದು ಇದೇ ಮೊದಲು.
‘ಅಭಿವೃದ್ಧಿಯ ಪರಿಕಲ್ಪನೆ ಮಹತ್ವ ಪಡೆದುಕೊಂಡಿರುವ ಇಂದಿನ ಜಗತ್ತಿನಲ್ಲಿ ವಿಸ್ತರಣವಾದಕ್ಕೆ ಅವಕಾಶವಿಲ್ಲ. ದೇಶ ಎಷ್ಟು ಅಭಿವೃದ್ಧಿ ಹೊಂದಿದೆ ಮತ್ತು ಅದು ತನ್ನ ಜನರಿಗೆ ಏನನ್ನು ಮಾಡಿದೆ ಎಂಬುದೇ ಮುಖ್ಯವಾಗುತ್ತದೆ’ ಎಂದು ಅವರು ಚೀನಾವನ್ನು ಚುಚ್ಚಿದರು.
ಈಶಾನ್ಯ ರಾಜ್ಯಗಳ ಬಗ್ಗೆ ಸೂಕ್ಷ್ಮ ಸಂವೇದನೆ ಹೊಂದಿರುವ ಸರ್ಕಾರದ ಅವಶ್ಯಕತೆ ದೇಶಕ್ಕಿದೆ ಎಂದ ಅವರು, ‘ಸರ್ಕಾರ ಈ ಪ್ರದೇಶದ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಪ್ರತಿಪಾದಿಸಿದರು.
ಬಾಂಗ್ಲಾ ಹಿಂದೂಗಳಿಗೆ ಆಶ್ರಯ(ಸಿಲ್ಚಾರ್ ವರದಿ): ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂಗಳಿಗೆ ಭಾರತದಲ್ಲಿ ಆಶ್ರಯ ಕಲ್ಪಿಸಿಕೊಡಬೇಕು ಎಂದು ಮೋದಿ ಅಸ್ಸಾಂನ ಸಿಲ್ಚಾರ್ನಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಒತ್ತಾಯಿಸಿದರು.
‘ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಬಾಂಗ್ಲಾ ವಲಸಿಗ ಹಿಂದೂಗಳನ್ನು ವಲಸಿಗ ಬಂಧನ ಶಿಬಿರಗಳಿಂದ ಹೊರಬಿಡಲಾಗುವುದು’ ಎಂದು ಭರವಸೆ ನೀಡಿದರು.
‘ಬೇರೆ ದೇಶದಲ್ಲಿ ಶೋಷಣೆಗೊಳಗಾದ ಮತ್ತು ಸಂಕಷ್ಟದಲ್ಲಿರುವ ಹಿಂದೂಗಳು ಎಲ್ಲಿ ಹೋಗಬೇಕು? ಭಾರತವೊಂದೇ ಅವರಿಗಿರುವ ತಾಣವಾಗಿದೆ. ನಮ್ಮ ಸರ್ಕಾರ ಅವರ ಶೋಷಣೆಯನ್ನು ನಿಲ್ಲಿಸಬೇಕು’ ಎಂದು ಮೋದಿ ಒತ್ತಾಯಿಸಿದರು.
‘ಬಾಂಗ್ಲಾದಿಂದ ವಲಸೆ ಬಂದ ಹಿಂದೂಗಳ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳಬೇಕಾಗಿದೆ. ಹಾಗೆಂದು ಅಸ್ಸಾಂ ರಾಜ್ಯವೊಂದೇ ಈ ಹೊರೆ ಹೊರಬೇಕಾಗಿಲ್ಲ. ಅವರಿಗೆ ದೇಶದಾದ್ಯಂತ ಉತ್ತಮ ಸೌಲಭ್ಯ ಒದಗಿಸಿ ಹೊಸ ಬದುಕಿಗೆ ಅವಕಾಶ ನೀಡಬೇಕು’ ಎಂದು ಹೇಳಿದರು.
ಅರುಣಾಚಲದ ಸಂಬಂಧ
ಅರುಣಾಚಲ ಪ್ರದೇಶದ ‘ಆದಿ’ ಬುಡಕಟ್ಟು ಸಮುದಾಯದ ‘ಮೋದಿ’ ಎಂಬ ಕುಲವನ್ನು ನರೇಂದ್ರ ಮೋದಿ ತಮ್ಮ ಕುಟುಂಬದ ಕುಲನಾಮದೊಂದಿಗೆ ಹೋಲಿಸಿಕೊಂಡದ್ದು ಇಲ್ಲಿನ ‘ವಿಜಯ ಸಂಕಲ್ಪ ಅಭಿಯಾನ’ ಸಮಾವೇಶದಲ್ಲಿ ಪಾಲ್ಗೊಂಡ ಬುಡಕಟ್ಟು ಜನರ ಸಂತಸಕ್ಕೆ ಕಾರಣವಾಯ್ತು.
‘ಸುಮಾರು 7000 ಜನಸಂಖ್ಯೆ ಹೊಂದಿರುವ ಇಲ್ಲಿನ ಮೋದಿ ಕುಲ ಮತ್ತು ಗುಜರಾತ್ನ ನನ್ನ ಪೂರ್ವಜರು ಒಂದೇ ಕುಲನಾಮವನ್ನು ಹೊಂದಿದ್ದಾರೆ. ಈ ಎರಡೂ ಕುಟುಂಬಗಳ ನಡುವೆ ಏನೋ ಸಂಬಂಧ ಇದ್ದಿರಲೇಬೇಕು’ ಎಂದು ಮೋದಿ ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.