ವಿಸ್ತರಿಸುತ್ತಿದೆ ಅನಧಿಕೃತ ‘ಫ್ಲೆಕ್ಸ್‌ ಸಾಮ್ರಾಜ್ಯ’

7
ನಗರ ಸಂಚಾರ

ವಿಸ್ತರಿಸುತ್ತಿದೆ ಅನಧಿಕೃತ ‘ಫ್ಲೆಕ್ಸ್‌ ಸಾಮ್ರಾಜ್ಯ’

Published:
Updated:

ಹಾಸನ: ನಗರದಲ್ಲಿ ಫ್ಲೆಕ್ಸ್‌ ಸಾಮ್ರಾಜ್ಯ ಇನ್ನಷ್ಟು ವಿಸ್ತರಿಸಿದೆ. ಇತ್ತೀಚಿನವರೆಗೆ ಎನ್‌.ಆರ್‌. ವೃತ್ತ, ಹೇಮಾವತಿ ಪ್ರತಿಮೆ ಸುತ್ತಮುತ್ತಲಿನ ಜಾಗಕ್ಕೆ ಸೀಮಿತವಾಗಿದ್ದ ಫ್ಲೆಕ್ಸ್‌ಗಳು ಈಗ ನಗರದ ಎಲ್ಲೆಲ್ಲೂ ರಾರಾಜಿಸುತ್ತಿವೆ. ಅನಧಿಕೃತವಾಗಿ ಹಾಕಿದ್ದ ಫ್ಲೆಕ್ಸ್‌ ತೆಗೆಯಬೇಕು ಎಂದು ನಗರಸಭೆಯ ಆಯುಕ್ತರು ನೀಡಿದ್ದ ಸೂಚನೆಗೆ ಕವಡೆ ಕಾಸಿನ ಕಿಮ್ಮತ್ತೂ ಸಿಕ್ಕಿದಂತೆ ಕಾಣಿಸುತ್ತಿಲ್ಲ.ಫ್ಲೆಕ್ಸ್‌ ಹಾಕುವವರು ನಗರಸಭೆಯಿಂದ ಅನುಮತಿ ಪಡೆಯಬೇಕು ಮತ್ತು ಹಾಕಿದ ಫ್ಲೆಕ್ಸ್‌ಅನ್ನು ಕಾರ್ಯಕ್ರಮ ಮುಗಿದ ಬಳಿಕ ತೆಗೆಯಬೇಕು ಎಂದು ನಗರ ಸಭೆ ಸೂಚಿಸಿದ್ದರೂ ಈ ಆದೇಶಕ್ಕೆ ನಗರಸಭೆಯ ಸದಸ್ಯರೇ ಬೆಲೆ ಕೊಟ್ಟಿಲ್ಲ. ಹಿಂದೆ ಈ ಬಗ್ಗೆ ನಗರಸಭೆಯಲ್ಲಿ ಹಲವು ಬಾರಿ ಚರ್ಚೆಯಾಗಿ, ಅನಧಿಕೃತವಾಗಿ ಹಾಕಿದ್ದ ಫ್ಲೆಕ್ಸ್‌ಗಳನ್ನು ತೆಗೆಸಬೇಕು ಎಂಬ ನಿರ್ಣಯ ಅಂಗೀಕರಿಸಲಾಗಿತ್ತು. ಆದರೆ, ಇದಾಗಿ ಕೆಲವೇ ದಿನಗಳಲ್ಲಿ ನಗರಸಭೆಯ ಸದಸ್ಯರ ಚಿತ್ರಗಳಿರುವ ಫ್ಲೆಕ್ಸ್‌ಗಳೇ ಹೇಮಾವತಿ ಪ್ರತಿಮೆಯ ಮುಂದೆ ರಾರಾಜಿಸಿದ್ದವು.ಮಹಾರಾಜ ಪಾರ್ಕ್‌ನ ಮುಂಭಾಗದಲ್ಲಿರುವ ಹೇಮಾವತಿ ಪ್ರತಿಮೆ ಹಾಸನದ ಪ್ರಮುಖ ಲ್ಯಾಂಡ್‌ಮಾರ್ಕ್‌ಗಳಲ್ಲಿ ಒಂದು. ಎಲ್ಲ ಪ್ರತಿಭಟನೆಗಳೂ, ಹೋರಾಟಗಳೂ ಆರಂಭವಾಗುವುದು ಇದೇ ಜಾಗದಿಂದ. ಆದರೆ, ಅನೇಕ ಸಂದರ್ಭಗಳಲ್ಲಿ ಇಲ್ಲಿ ಹೇಮಾವತಿ ಪ್ರತಿಮೆಯೇ ಕಾಣದ ರೀತಿಯಲ್ಲಿ ಫ್ಲೆಕ್ಸ್‌ಗಳು ತುಂಬಿರುತ್ತವೆ.ಎನ್‌.ಆರ್‌. ವೃತ್ತವಂತೂ ಫ್ಲೆಕ್ಸ್‌ಗಳ ರಾಜಧಾನಿಯಂತಾಗಿದೆ. ಸದ್ಯದಲ್ಲೇ ನಡೆಯಲಿರುವ ಕಾರ್ಯಕ್ರಮಗಳು, ಮುಗಿದು ತಿಂಗಳುಗಳೇ ಆಗಿರುವ ಕಾರ್ಯಕ್ರಮಗಳ ಮಾಹಿತಿ ಇರುವ ಫ್ಲೆಕ್ಸ್‌ಗಳು, ಯಾರಿಗೋ ಶ್ರದ್ಧಾಂಜಲಿ ಕೊಡುವ ಫ್ಲೆಕ್ಸ್‌, ಮರಳಿ ಹುಟ್ಟಿಬಾ ಗೆಳೆಯ ಎಂದು ಹಾರೈಸುವ ಫ್ಲೆಕ್ಸ್... ಹೀಗೆ ತರಾವರಿ ಫ್ಲೆಕ್ಸ್‌ಗಳು ಇಲ್ಲಿ ಸದಾ ಕಾಲ ಕಾಣಸಿಗುತ್ತವೆ.ಈ ಎರಡೂ ಜಾಗಗಳು ಭರ್ತಿಯಾಗಿರುವುದರಿಂದ ಈಚಿನ ದಿನಗಳಲ್ಲಿ ನಗರದ ಇತರ ಪ್ರದೇಶಗಳಿಗೂ ಫ್ಲೆಕ್ಸ್‌ ಸಾಮ್ರಾಜ್ಯ ವಿಸ್ತರಿಸುತ್ತಿದೆ. ಎಂ.ಜಿ. ರಸ್ತೆ ಫ್ಲೆಕ್ಸ್‌ಗಳ ಹೊಸ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಬಸಟ್ಟಿಕೊಪ್ಪಲು ರಸ್ತೆ ಹಾಗೂ ಎಂಜಿ ರಸ್ತೆ ಸೇರುವಲ್ಲಿ ಈಚೆಗೆ ಅತ್ತ ಕಡೆಯಿಂದ ಬರುವ ವಾಹನಗಳೂ ಕಾಣದ ರೀತಿಯಲ್ಲಿ ಫ್ಲೆಕ್ಸ್‌ಗಳು ಆವರಿಸಿಕೊಂಡಿವೆ. ಆರ್‌.ಸಿ. ರಸ್ತೆ, ಸುಮುಖ ಹೋಟೆಲ್‌ ಮುಂಭಾಗ, ಬಿ.ಎಂ. ರಸ್ತೆ, ಸಾಲಗಾಮೆ ರಸ್ತೆ... ಹೀಗೆ ಫ್ಲೆಕ್ಸ್‌ ಸಾಮ್ರಾಜ್ಯ ನಗರದ ಎಲ್ಲ ಭಾಗಗಳಿಗೂ ವಿಸ್ತರಿಸುತ್ತಿದೆ.ಫ್ಲೆಕ್ಸ್‌ ತೆಗೆಸುವಂತೆ ಪ್ರಕಟಣೆ ನೀಡಿ ಸುಮ್ಮನಾಗುವ ಬದಲು ನಗರಸಭೆ ನಿರ್ದಾಕ್ಷಿಣ್ಯವಾಗಿ ಪರವಾನಗಿ ಇಲ್ಲದೆ ಹಾಕಿರುವ ಫ್ಲೆಕ್ಸ್‌ಗಳನ್ನು ತೆಗೆಯಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಹೇಮಾವತಿ ಪ್ರತಿಮೆ ಮುಂದೆ ಹಾಗೂ ಕೆಲವು ಅಪಾಯಕಾರಿ ಸ್ಥಳಗಳಲ್ಲಿ ಫ್ಲೆಕ್ಸ್‌ ಅಳವಡಿಸಲು ಅನುಮತಿಯನ್ನೂ ನೀಡಬಾರದು ಎಂಬುದು ಜನರ ಒತ್ತಾಸೆ. ನಗರಸಭೆ ತನ್ನ ನಿರ್ಧಾರಗಳಿಗೆ ಬದ್ಧವಾಗಿ ಕಾರ್ಯ ನಿರ್ವಹಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry