ವಿಹಾನ್ ವಿಹಾರ

7

ವಿಹಾನ್ ವಿಹಾರ

Published:
Updated:
ವಿಹಾನ್ ವಿಹಾರ

ಈ ಸ್ಫುರದ್ರೂಪಿ ಯುವಕನ ಹೆಸರು ವಿಹಾನ್. ಕನ್ನಡ ಚಿತ್ರರಂಗದಲ್ಲಿ ಭವಿಷ್ಯ ಅರಸಿ ಬಂದಿರುವ ಇವರಿಗೆ ನಟನೆಯೇ ಜೀವಾಳ. ಸಿನಿಮಾ ರಂಗದಲ್ಲಿ ನೆಲೆ ಕಂಡುಕೊಳ್ಳಬೇಕು ಎಂದು ಹೆಣಗುತ್ತಿರುವ ವಿಹಾನ್ ಹಾಸನದ ಹುಡುಗ.

ಬೆಂಗಳೂರಿನಲ್ಲಿ ಎಂಬಿಎ ಕಲಿತು ಮಾಡೆಲಿಂಗ್ ಲೋಕದಲ್ಲಿ ಸುತ್ತು ಹಾಕಿ ಬಂದಿರುವ ವಿಹಾನ್ `ಅಗಮ್ಯ~ ಚಿತ್ರದ ನಾಯಕ. `ತುಂಬಾ ಸಿನಿಮಾಗಳನ್ನು ನೋಡುವುದರಿಂದ ನನಗೆ ಅಭಿನಯದ ತರಬೇತಿ ಬೇಡ ಎನಿಸುತ್ತದೆ. ಅಗಮ್ಯ ಚಿತ್ರದಲ್ಲಿ ಯಾವುದೇ ದೃಶ್ಯವನ್ನು ರೀಟೇಕ್ ತೆಗೆದುಕೊಳ್ಳದೇ ಮಾಡಿರುವೆ. ಅದರಿಂದ ನನ್ನ ಆತ್ಮವಿಶ್ವಾಸ ಹೆಚ್ಚಿದೆ. ಸಿನಿಮಾ ಬಿಡುಗಡೆಯಾದ ನಂತರ ಅವಕಾಶಗಳು ಹೆಚ್ಚಬಹುದು ಎಂಬ ನಿರೀಕ್ಷೆ ಇದೆ~ ಎನ್ನುವ ಅವರ ಮಾತಿನಲ್ಲಿ ತುಂಬು ಆತ್ಮವಿಶ್ವಾಸವಿದೆ.

ಚಿಕ್ಕಂದಿನಿಂದಲೂ ಕನ್ನಡಿ ಮುಂದೆ ನಿಂತು ನಟಿಸುತ್ತಿದ್ದ ವಿಹಾನ್ ನೃತ್ಯದ ಕಡೆಗೂ ಒಲವು ಬೆಳೆಸಿಕೊಂಡರು. ಬಾಲಿವುಡ್ ನೃತ್ಯ ನಿರ್ದೇಶಕ ಶಮಕ್ ದಾವರ್ ಅವರ ಬಳಿ ಪಾಶ್ಚಿಮಾತ್ಯ ನೃತ್ಯ ಕಲಿತರು. ಕಾಲೇಜು ಓದುವಾಗ ಮಾಡೆಲಿಂಗ್ ಲೋಕ ಅವರನ್ನು ಸೆಳೆಯಿತು. ಸಾಕಷ್ಟು ರ‌್ಯಾಂಪ್ ಶೋಗಳಲ್ಲಿ ಕಾಣಿಸಿಕೊಂಡರು. ಸಿನಿಮಾಗೆ ಸೇರಬೇಕು ಎನಿಸಿದಾಗ ಸ್ಟಂಟ್ ಕೂಡ ಕಲಿತರು.

ಬಾಲಿವುಡ್ ನಟ ಅನುಪಮ್ ಖೇರ್ ಅವರ ಅಭಿನಯ ಶಾಲೆ ಆಯೋಜಿಸಿದ್ದ ಐದು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿ ಬಂದರು. ಅದೇ ಸಮಯದಲ್ಲಿ ಅವರಿಗೆ `ಅಗಮ್ಯ~ ಚಿತ್ರದ ನಾಯಕನಾಗಿ ನಟಿಸುವ ಅವಕಾಶ ಬಂತು. ಸಂಪೂರ್ಣ ಆತ್ಮವಿಶ್ವಾಸದಿಂದಲೇ ಚಿತ್ರವನ್ನು ಒಪ್ಪಿಕೊಂಡರು.

ಐದಾರು ಗೆಳೆಯರು ಕಾಡು ಮನೆಯೊಂದರಲ್ಲಿ ಸಿಕ್ಕಿ ಹಾಕಿಕೊಂಡು ಪಡುವ ಪಾಡು `ಅಗಮ್ಯ~ ಚಿತ್ರದ ಕತೆ. ಚಿತ್ರದಲ್ಲಿ ಒಬ್ಬೊಬ್ಬರಾಗಿ ಗೆಳೆಯರು ನಾಪತ್ತೆಯಾದರೂ ಹೆದರದೇ ಸಂದರ್ಭವನ್ನು ಎದುರಿಸುವ ನಾಯಕನಾಗಿ ವಿಹಾನ್ ಅಭಿನಯಿಸಿದ್ದಾರೆ.

ತಮ್ಮನ್ನು ಆಯ್ಕೆ ಮಾಡಿದ `ಅಗಮ್ಯ~ ಚಿತ್ರದ ನಿರ್ಮಾಪಕರಿಗೆ ಮನಸಾರೆ ವಂದಿಸುವ ವಿಹಾನ್ ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ನಿರ್ದೇಶಕರ ಸುಮಾರು 60 ಗೆಳೆಯರು ಹಣ ಹೂಡಿದ್ದಾರೆ.

`ನಮ್ಮಂಥ ಹೊಸಬರನ್ನು ನಂಬಿ ದುಡ್ಡು ಹಾಕುವುದು ಕಷ್ಟ. `ಅಗಮ್ಯ~ ಚಿತ್ರದ ನಿರ್ದೇಶಕ ಉಮೇಶ್ ಮತ್ತು ನಿರ್ಮಾಪಕರೆಲ್ಲಾ ನನ್ನನ್ನು ನಂಬಿದ್ದಾರೆ. ನಾನೂ ತುಂಬಾ ನಿರೀಕ್ಷೆ ಇಟ್ಟುಕೊಂಡು ನಟಿಸಿರುವೆ~ ಎಂದು ನುಡಿಯುವ ವಿಹಾನ್‌ಗೆ ವಿಭಿನ್ನ ಗೆಟಪ್‌ಗಳಿರುವ ಚಿತ್ರಗಳಲ್ಲಿ ನಟಿಸುವಾಸೆ. ಮಾಸ್-ಕ್ಲಾಸ್ ಎಲ್ಲಾ ರೀತಿಯ ಪಾತ್ರಗಳನ್ನು ಎಂಜಾಯ್ ಮಾಡುವಾಸೆ. ಸಲ್ಮಾನ್ ಖಾನ್ ಅಭಿಮಾನಿಯಾದ ಕಾರಣ ದೇಹ ದಂಡಿಸುವುದೂ ಇಷ್ಟ. ಅದರಿಂದ ಪ್ರತಿದಿನ ಜಿಮ್‌ನಲ್ಲಿ ಬೆವರು ಸುರಿಸಿ ಯೋಗ್ಯ ಮೈಕಟ್ಟು ಸಾಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry